ಟೆಲ್ ಅವಿವ್ (ಇಸ್ರೇಲ್): ಲೆಬನಾನ್ನ ಹಿಜ್ಬುಲ್ಲಾ ಬಂಡುಕೋರರು ಇಸ್ರೇಲ್ ಮೇಲಿನ ದಾಳಿಯನ್ನು ತೀವ್ರಗೊಳಿಸಿದ್ದಾರೆ. ಶನಿವಾರ ಏಕಾಏಕಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸದ ಮೇಲೆಯೇ ಡ್ರೋನ್ ದಾಳಿ ನಡೆಸಿ ಸ್ಫೋಟಿಸಿದ್ದಾರೆ. ಆದರೆ, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಇಂದು ಬೆಳಗ್ಗೆ ಲೆಬನಾನ್‌ನಿಂದ ಡ್ರೋನ್ ದಾಳಿ ನಡೆಸಲಾಯಿತು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸದ ಮೇಲೆ ಉಡಾಯಿಸಲಾಗಿದೆ. ಈ ವೇಳೆ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ಮನೆಯಲ್ಲಿ ಇರಲಿಲ್ಲ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಇಸ್ರೇಲ್ ಪ್ರಧಾನ ಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಲೆಬನಾನ್‌ನಿಂದ ಹಾರಿಬಿಟ್ಟ ಡ್ರೋನ್‌ಗಳನ್ನು ಇಸ್ರೇಲ್‌ನ ವಾಯು ರಕ್ಷಣೆಯಾದ ಐರನ್ಡೋಮ್ ಹೊಡೆದು ಹಾಕಿದೆ. ಬಳಿಕ ರಾಜಧಾನಿ ಟೆಲ್ಅವಿವ್ನಲ್ಲಿ ಎಚ್ಚರಿಕೆ ಗಂಟೆ ಕೂಗಿಸಲಾಗಿದೆ. ಹೈಫಾ ಕೊಲ್ಲಿ ಪ್ರದೇಶದಲ್ಲೂ ರಾಕೆಟ್ಗಳು ಹಾರಿಬರುತ್ತಿರುವ ಕಾರಣ ಸೈರನ್ ಮೊಳಗಿಸಲಾಗಿದೆ.
ಹಮಾಸ್ ಶರಣಾದರೆ, ಯುದ್ಧ ಕೊನೆ: ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ನಿಲುಗಡೆಗೆ ಕೇಳಿಬರುತ್ತಿರುವ ಒತ್ತಡದ ಬಗ್ಗೆ ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಮಾಸ್ ಉಗ್ರರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರೆ ಮತ್ತು ನಮ್ಮ ಒತ್ತೆಯಾಳುಗಳನ್ನು ಹಿಂದಿರುಗಿಸಲು ಒಪ್ಪಿದರೆ ನಾಳೆಯೇ ಯುದ್ಧ ನಿಲ್ಲಿಸುವುದಾಗಿ ಹೇಳಿದ್ದಾರೆ.
ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, "ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ನನ್ನು ಹೊಡೆದು ಹಾಕಲಾಗಿದೆ. ಇಸ್ರೇಲಿ ರಕ್ಷಣಾ ಪಡೆಗಳ ಕೆಚ್ಚೆದೆಯ ಸೈನಿಕರ ದಾಳಿಗೆ ಆತ ಸಾವನ್ನಪ್ಪಿದ್ದಾನೆ. ಇದು ಗಾಜಾದಲ್ಲಿ ಯುದ್ಧದ ಅಂತ್ಯವಲ್ಲ. ಅಂತ್ಯದ ಆರಂಭ. ಗಾಜಾದ ಜನರೇ, ಯುದ್ಧ ನಿಲ್ಲಲು ನನ್ನ ಬಳಿ ಒಂದು ಸರಳ ಉಪಾಯವಿದೆ. ಅದೇನೆಂದರೆ, ಹಮಾಸ್ ಉಗ್ರರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಲಿ, ನಮ್ಮವರನ್ನು ಹಿಂದಿರುಗಿಸಿದರೆ ಸಂಘರ್ಷ ಕೊನೆಗೊಳ್ಳಲಿದೆ" ಎಂದಿದ್ದಾರೆ.
ಹಮಾಸ್ ಬಳಿ 101 ಒತ್ತೆಯಾಳುಗಳಿದ್ದಾರೆ: ಅಕ್ಟೋಬರ್ 7 ರ ದಾಳಿಯಲ್ಲಿ ಹಮಾಸ್ ಉಗ್ರರು ಒತ್ತೆಯಾಳುಗಳನ್ನಾಗಿ ಕರೆದೊಯ್ದಿರುವವರಲ್ಲಿ 101 ಜನರಿದ್ದಾರೆ. ಇದರಲ್ಲಿ ಇಸ್ರೇಲ್ ಸೇರಿದಂತೆ ವಿವಿಧ ದೇಶಗಳ ಜನರು ಇದ್ದಾರೆ ಎಂದು ನೆತನ್ಯಾಹು ಬಹಿರಂಗಪಡಿಸಿದ್ದಾರೆ.
"ಹಮಾಸ್ ಉಗ್ರರು ಗಾಜಾದಲ್ಲಿ 101 ಜನರನ್ನು ಒತ್ತೆ ಇಟ್ಟುಕೊಂಡಿದ್ದಾರೆ. ಅವರೆಲ್ಲರನ್ನೂ ವಾಪಸ್ ಕರೆತರಲು ಇಸ್ರೇಲ್ ಬದ್ಧವಾಗಿದೆ. ಒತ್ತೆಯಾಳುಗಳ ಸುರಕ್ಷತೆ ಮುಖ್ಯವಾಗಿದೆ. ನ್ಯಾಯೋಚಿತವಾಗಿ ಅವರನ್ನು ಕರೆತರಲಾಗುವುದು ಎಂದು ಪ್ರತಿಜ್ಞೆ ಮಾಡಿದರು.
ಭಯೋತ್ಪಾದನೆಯ ವಿರುದ್ಧ ದೇಶ ನಡೆಸುತ್ತಿರುವ ಯುದ್ಧವು ತಾರ್ಕಿಕ ಅಂತ್ಯ ಕಾಣಲಿದೆ. ಅಲ್ಲಿಯವರೆಗೂ ಸಂಘರ್ಷ ನಡೆಯಲಿದೆ. ಒತ್ತೆಯಾಳುಗಳಿಗೆ ಹಾನಿಯಾದಲ್ಲಿ ಇಸ್ರೇಲ್ ಅಂಥವರಿಗೆ ಶಿಕ್ಷಿಸದೆ ಬಿಡುವುದಿಲ್ಲ ಎಂದು ಕಠಿಣ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಗಾಜಾ ಮೇಲೆ ಮತ್ತೆ ಮುಗಿಬಿದ್ದ ಇಸ್ರೇಲ್: 33 ಪ್ಯಾಲೆಸ್ಟೀನಿಯನ್ನರ ಸಾವು - ಹಮಾಸ್