ಕಠ್ಮಂಡು(ನೇಪಾಳ): ನೇಪಾಳದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಭೂಕುಸಿತದಿಂದ ಎರಡು ಬಸ್‌ಗಳು ನದಿಯಲ್ಲಿ ಕೊಚ್ಚಿಕೊಂಡು ಹೋಗಿದೆ. ಏಳು ಭಾರತೀಯ ಪ್ರಜೆಗಳೂ ಸೇರಿದಂತೆ ಕನಿಷ್ಠ 65 ಜನ ನಾಪತ್ತೆಯಾಗಿದ್ದಾರೆ.
ಚಿತ್ವಾನ್ ಜಿಲ್ಲೆಯ ನಾರಾಯಣಘಾಟ್-ಮುಗ್ಲಿಂಗ್ ರಸ್ತೆಯ ಸಿಮಲ್ಟಾಲ್ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದ್ದು, ತ್ರಿಶೂಲಿ ನದಿ ಸಮೀಪ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಎರಡು ಬಸ್‌ಗಳು ನಾಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್‌ಗಳು ರಾಜಧಾನಿ ಕಠ್ಮಂಡುವಿನಿಂದ ಗೌರ್ ಎಂಬಲ್ಲಿಗೆ ತೆರಳುತ್ತಿದ್ದವು. ಏಂಜೆಲ್ ಮತ್ತು ಗಣಪತಿ ಡಿಲಕ್ಸ್ ಎಂಬ ಹೆಸರಿನ ಬಸ್‌ಗಳು ಮುಂಜಾನೆ 3.30ರ ಸುಮಾರಿಗೆ ಅಪಘಾತಕ್ಕೀಡಾಗಿವೆ. ಕಠ್ಮಂಡುವಿಗೆ ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ 24 ಜನರು ಮತ್ತು ಗೌರ್‌ಗೆ ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ 41 ಜನರಿದ್ದರು ಎಂದು ಅಲ್ಲಿನ ಪೊಲೀಸರು ಹೇಳಿದ್ದಾರೆ.
ಗಣಪತಿ ಡಿಲಕ್ಸ್ ಬಸ್‌ನಲ್ಲಿದ್ದ ಮೂವರು ಪ್ರಯಾಣಿಕರು ವಾಹನದಿಂದ ಜಿಗಿದು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಏಂಜೆಲ್ ಡಿಲಕ್ಸ್‌ನಲ್ಲಿ ಬಿರ್‌ಗುಂಜ್‌ನಿಂದ ಕಠ್ಮಂಡುವಿಗೆ ಪ್ರಯಾಣಿಸುತ್ತಿದ್ದ 21 ಪ್ರಯಾಣಿಕರ ವಿವರಗಳು ಲಭ್ಯವಾಗಿವೆ. ಇತ್ತೀಚಿನ ಮಾಹಿತಿಯ ಪ್ರಕಾರ, ಬಸ್‌ನಲ್ಲಿದ್ದ ಪ್ರಯಾಣಿಕರಲ್ಲಿ ಏಳು ಭಾರತೀಯ ಪ್ರಜೆಗಳಿದ್ದರು ಎಂದು ಪೊಲೀಸರು ಹೇಳಿದ್ದಾರೆ ಎಂದು ಮೈ ರಿಪಬ್ಲಿಕಾ ವರದಿ ಮಾಡಿದೆ.
ರಕ್ಷಣಾ ಕಾರ್ಯಕರ್ತರು ಭೂಕುಸಿತದ ಅವಶೇಷಗಳನ್ನು ತೆರವುಗೊಳಿಸುತ್ತಿದ್ದಾರೆ ಎಂದು ಮುಖ್ಯ ಜಿಲ್ಲಾ ಅಧಿಕಾರಿ ಇಂದ್ರದೇವ್ ಯಾದವ್ ಹೇಳಿದರು.
ಪ್ರಧಾನಿ ಪ್ರಚಂಡ ಪ್ರತಿಕ್ರಿಯೆ: ತ್ರಿಶೂಲಿ ನದಿಯಲ್ಲಿ ಬಸ್ ನಾಪತ್ತೆಯಾಗಿರುವ ಬಗ್ಗೆ ದುಃಖ ವ್ಯಕ್ತಪಡಿಸಿರುವ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ, ಘಟನೆಯ ವಿಷಯ ತಿಳಿದ ತಕ್ಷಣವೇ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ನಿರ್ದೇಶನ ನೀಡಿದ್ದಾರೆ.
"ನಾರಾಯಣಘಡ್- ಮುಗ್ಲಿನ್ ರಸ್ತೆ ವಿಭಾಗದಲ್ಲಿ ಭೂಕುಸಿತದಿಂದ ಬಸ್‌ಗಳು ಕೊಚ್ಚಿ ಹೋಗಿವೆ. ಪ್ರವಾಹ ಮತ್ತು ಭೂಕುಸಿತದಿಂದಾಗಿ ಸುಮಾರು 64ಕ್ಕೂ ಹೆಚ್ಚು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. ಈ ಘಟನೆಯಿಂದ ತೀವ್ರ ದುಃಖಿತನಾಗಿದ್ದೇನೆ. ರಕ್ಷಣಾ ತಂಡಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಗೃಹ ಆಡಳಿತ ಸೇರಿದಂತೆ ಸರ್ಕಾರದಿಂದ ಪ್ರಯಾಣಿಕರನ್ನು ಹುಡುಕಲು ಮತ್ತು ಅವರನ್ನು ರಕ್ಷಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ" ಎಂದು ಪ್ರಚಂಡ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ಗುಂಡಿನ ದಾಳಿ, ಬಾಲಕಿ ಸೇರಿ ಇಬ್ಬರು ಸಾವು; 19ಕ್ಕೂ ಹೆಚ್ಚು ಜನರಿಗೆ ಗಾಯ - US Shooting