ನವದೆಹಲಿ: ಸಿಖ್ ಪ್ರತ್ಯೇಕತಾವಾದಿ ಗುರುಪತ್‌ವಂತ್ ಸಿಂಗ್ ಪನ್ನುನ್ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಲಾದ ಭಾರತೀಯ ತನಿಖಾ ಸಮಿತಿಯು ಅಮೆರಿಕದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ. ಅಮೆರಿಕ ನೀಡಿರುವ ಮಾಹಿತಿಗಳನ್ನು ತಾನು ಗಂಭೀರವಾಗಿ ಪರಿಗಣಿಸಿರುವುದಾಗಿ ಭಾರತ ಗುರುವಾರ ಹೇಳಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿಯನ್ನು ತಿಳಿಸಿದ್ದಾರೆ. ಗುರುಪತ್‌ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ US ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ (DoJ) ನ ದೋಷಾರೋಪಣೆಯಲ್ಲಿ ಗುರುತಿಸಲಾದ ವ್ಯಕ್ತಿಯ ಮೇಲಿನ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ಜೈಸ್ವಾಲ್ ಅವರು ಆ ವ್ಯಕ್ತಿ ' ಇನ್ನು ಮುಂದೆ ಭಾರತ ಸರ್ಕಾರದ ಉದ್ಯೋಗಿಯಲ್ಲ' ಎಂದು ಖಚಿತಪಡಿಸಿದ್ದಾರೆ. ಪನ್ನುನ್ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಆರೋಪಗಳನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಅಮೆರಿಕ ಈ ಹಿಂದೆ ತಿಳಿಸಿತ್ತು.
ಅಮೆರಿಕದ ಮಾಹಿತಿ ಆಧರಿಸಿ ವಿಚಾರಣಾ ಸಮಿತಿ: ಇನ್ನು ಭಾರತೀಯ ಅಧಿಕಾರಿಗಳ ತಂಡವು ಇತ್ತೀಚೆಗೆ ವಾಷಿಂಗ್ಟನ್‌ನಲ್ಲಿ ವಿದೇಶಾಂಗ ಇಲಾಖೆ ಹಾಗೂ ನ್ಯಾಯಾಂಗ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿತ್ತು. ಅಮೆರಿಕ ಮಾಡಿರುವ ಆರೋಪಗಳ ನಂತರ, ಪ್ರಕರಣದ ಕುರಿತು ಅಮೆರಿಕ ಒದಗಿಸಿದ ಇನ್ಪುಟ್ಗಳನ್ನು ಪರಿಶೀಲಿಸಲು ಭಾರತವು ಉನ್ನತ ಮಟ್ಟದ ವಿಚಾರಣಾ ಸಮಿತಿಯನ್ನು ನೇಮಿಸಿತ್ತು. ಸದ್ಯ ಸಮಿತಿಯ ಇಬ್ಬರು ಸದಸ್ಯರು ಅಮೆರಿಕಕ್ಕೆ ತೆರಳಿದ್ದು, ಅಮೆರಿಕದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ನವೆಂಬರ್ 2023 ರಲ್ಲಿ ಅಮೆರಿಕ ನಮ್ಮೊಂದಿಗೆ ಹಂಚಿಕೊಂಡಿರುವ ಇನ್ಪುಟ್ಗಳನ್ನು ಪರಿಶೀಲಿಸಲು ಸ್ಥಾಪಿಸಲಾದ ಉನ್ನತ ಮಟ್ಟದ ವಿಚಾರಣಾ ಸಮಿತಿಯ ಸದಸ್ಯರು, ಮತ್ತು ನಾವು ಅವರ ಮಾಹಿತಿಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಜೈಸ್ವಾಲ್ ಹೇಳಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ, ಯುಎಸ್ ಫೆಡರಲ್ ಪ್ರಾಸಿಕ್ಯೂಟರ್‌ಗಳು ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಅವರು ನ್ಯೂಯಾರ್ಕ್‌ನಲ್ಲಿ ಸಿಖ್ ಪ್ರತ್ಯೇಕತಾವಾದಿ ಗುರುಪತ್‌ವಂತ್ ಸಿಂಗ್ ಪನ್ನುನ್‌ನನ್ನು ಹತ್ಯೆ ಮಾಡುವ ಯತ್ನದಲ್ಲಿ ಭಾರತೀಯ ಸರ್ಕಾರಿ ಉದ್ಯೋಗಿಯೊಂದಿಗೆ ಕೆಲಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಭಯೋತ್ಪಾದನೆಯ ಆರೋಪದಲ್ಲಿ ಮೇಲೆ ಭಾರತಕ್ಕೆ ಬೇಕಾಗಿರುವ ಪನ್ನುನ್, ಅಮೆರಿಕ ಮತ್ತು ಕೆನಡಾದ ದ್ವಿಪೌರತ್ವ ಹೊಂದಿದ್ದಾನೆ.
ಈ ಪ್ರಕರಣದಲ್ಲಿ ಕಳೆದ ವರ್ಷ ಜೂನ್‌ನಲ್ಲಿ ಜೆಕ್ ಗಣರಾಜ್ಯದಲ್ಲಿ ಬಂಧಿಸಲ್ಪಟ್ಟ ನಿಖಿಲ್ ಗುಪ್ತಾ ಅವರನ್ನು ಜೂನ್ 14 ರಂದು ಅಮೆರಿಕಕ್ಕೆ ಹಸ್ತಾಂತರಿಸಲಾಯಿತು. ಪನ್ನುನ್‌ನನ್ನು ಕೊಲ್ಲಲು ವಿಫಲವಾದ ಸಂಚಿನ ಬಗ್ಗೆ ಭಾರತದ ತನಿಖೆಯ ನವೀಕರಣಗಳಿಗಾಗಿ ಅಮೆರಿಕ ಸತತವಾಗಿ ಭಾರತದ ಮೇಲೆ ಒತ್ತಡ ಹೇರಿದೆ ಮತ್ತು ಪ್ರಕರಣದಲ್ಲಿ ಹೊಣೆಗಾರಿಕೆಯನ್ನು ಬಯಸುತ್ತಿದೆ ಎಂದು ಸ್ಪಷ್ಟಪಡಿಸಿದೆ ಎಂದು ಬೈಡನ್ ಆಡಳಿತದ ಹಿರಿಯ ಅಧಿಕಾರಿ ಜೂನ್‌ನಲ್ಲಿ ತಿಳಿಸಿದ್ದರು. ಇನ್ನು ಕಳೆದ ವರ್ಷ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದ ತನಿಖೆಗೆ ಭಾರತವು ಕೆನಡಾದೊಂದಿಗೆ ಸಹಕರಿಸುತ್ತಿಲ್ಲ ಎಂದು ಅಮೆರಿಕ ಮಂಗಳವಾರ ಆರೋಪಿಸಿತ್ತು.