ನೈರೋಬಿ(ಕೀನ್ಯಾ): ದೇಶದ ಪಶ್ಚಿಮ ಭಾಗದಲ್ಲಿ ಗುರುವಾರ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಮಿಲಿಟರಿ ಮುಖ್ಯಸ್ಥ ಜನರಲ್ ಫ್ರಾನ್ಸಿಸ್ ಒಗೊಲ್ಲಾ ಸೇರಿದಂತೆ 9 ಮಿಲಿಟರಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಕೀನ್ಯಾ ಅಧ್ಯಕ್ಷ ವಿಲಿಯಂ ರುಟೊ ತಿಳಿಸಿದ್ದಾರೆ. ಸ್ಥಳೀಯ ಕಾಲಮಾನದ ಪ್ರಕಾರ ಗುರುವಾರ ಮಧ್ಯಾಹ್ನ ಹೆಲಿಕಾಪ್ಟರ್ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಈ ದುರಂತದಲ್ಲಿ ಇಬ್ಬರು ಪಾರಾಗಿದ್ದಾರೆ.
ಈ ಕುರಿತು ಅಧ್ಯಕ್ಷ ವಿಲಿಯಂ ರುಟೊ ಪ್ರತಿಕ್ರಿಯಿಸಿ, "ಕೀನ್ಯಾ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಫ್ರಾನ್ಸಿಸ್ ಒಮೊಂಡಿ ಒಗೊಲ್ಲಾ ಅವರ ನಿಧನ ಸುದ್ದಿ ಘೋಷಿಸಲು ನನಗೆ ತೀವ್ರ ದುಃಖವಾಗಿದೆ. ದುರಂತ ನಡೆದ ಸ್ಥಳವಾದ ಎಲ್ಜಿಯೊ ಮರಕ್ವೆಟ್ ಕೌಂಟಿಗೆ ತನಿಖಾಧಿಕಾರಿಗಳ ತಂಡವನ್ನು ಕಳುಹಿಸಲಾಗಿದೆ. ಕೀನ್ಯಾದ ನಾರ್ತ್ ರಿಫ್ಟ್ ಪ್ರದೇಶದಲ್ಲಿನ ಸೈನಿಕರನ್ನು ಭೇಟಿ ಮಾಡಲು ಮತ್ತು ಇಲ್ಲಿ ನಡೆಯುತ್ತಿರುವ ಸೈನಿಕ ಶಾಲೆಯ ನವೀಕರಣವನ್ನು ಪರಿಶೀಲಿಸಲು ಜನರಲ್ ಒಗೊಲ್ಲಾ ಗುರುವಾರ ನೈರೋಬಿಯಿಂದ ಹೊರಟಿದ್ದರು" ಎಂದು ಹೇಳಿದ್ಧಾರೆ.
"ಕೀನ್ಯಾ ರಕ್ಷಣಾ ಪಡೆಗಳ ಕಮಾಂಡರ್ ಇನ್ ಚೀಫ್ ಆಗಿ ನನಗೆ ಮತ್ತು ರಾಷ್ಟ್ರಕ್ಕೆ ಅತ್ಯಂತ ದುರದೃಷ್ಟಕರ ದಿನವಾಗಿದೆ. ನಮ್ಮ ತಾಯಿನಾಡು ತನ್ನ ಅತ್ಯಂತ ಧೀರ ಜನರಲ್‌ಗಳಲ್ಲಿ ಒಬ್ಬರನ್ನು ಕಳೆದುಕೊಂಡಿದೆ. ಜೊತೆಗೆ ಈ ದುರಂತದಲ್ಲಿ ನಾವು ಧೀರ ಅಧಿಕಾರಿಗಳು, ಸೈನಿಕರನ್ನೂ ಕಳೆದುಕೊಂಡಿದ್ದೇವೆ. ದೇಶವು ಶುಕ್ರವಾರದಿಂದ ಮೂರು ದಿನಗಳ ಶೋಕಾಚರಣೆಯನ್ನು ಆಚರಿಸಲಿದೆ" ಎಂದು ತಿಳಿಸಿದ್ದಾರೆ.
ಹೆಲಿಕಾಪ್ಟರ್ ದುರಂತದ ನಂತರ ಕೀನ್ಯಾ ಅಧ್ಯಕ್ಷರು ನೈರೋಬಿಯಲ್ಲಿ ದೇಶದ ರಾಷ್ಟ್ರೀಯ ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಕರೆದಿದ್ದಾರೆ ಎಂದು ಅಧ್ಯಕ್ಷರ ವಕ್ತಾರ ಹುಸೇನ್ ಮೊಹಮ್ಮದ್ ಮಾಹಿತಿ ನೀಡಿದ್ದಾರೆ.
ಜನರಲ್ ಒಗೊಲ್ಲಾ ಸೇವೆಯಲ್ಲಿವಾಗಲೇ ಸಾವನ್ನಪ್ಪಿದ ಮೊದಲ ಕೀನ್ಯಾದ ಮಿಲಿಟರಿ ಮುಖ್ಯಸ್ಥರಾಗಿದ್ದಾರೆ ಎಂದು ಸರ್ಕಾರಿ ಮಾಧ್ಯಮ ಕೀನ್ಯಾ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ (ಕೆಬಿಸಿ) ವರದಿ ಮಾಡಿದೆ. ಜನರಲ್ ಒಗೊಲ್ಲಾ 1984 ರಲ್ಲಿ ಕೀನ್ಯಾ ಮಿಲಿಟರಿಗೆ ಸೇರಿದ್ದರು ಮತ್ತು 1985 ರಲ್ಲಿ 2 ನೇ ಲೆಫ್ಟಿನೆಂಟ್ ಆದರು ಎಂದು ಕೀನ್ಯಾದ ರಕ್ಷಣಾ ಸಚಿವಾಲಯದ ವೆಬ್ಸೈಟ್ ತಿಳಿಸಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನದ 1.6 ಕೋಟಿ ಜನರಿಗೆ ಸಿಗುತ್ತಿಲ್ಲ ಊಟ: ವಿಶ್ವಸಂಸ್ಥೆ ವರದಿ - Food Insecurity In Afghanistan