ಗಾಜಾ: ಕೇಂದ್ರ ಗಾಜಾ ಪಟ್ಟಿಯಲ್ಲಿರುವ ಬುರೇಜ್ ನಿರಾಶ್ರಿತರ ಶಿಬಿರ ಮತ್ತು ಅದರ ಹೊರವಲಯದಲ್ಲಿ ವಾಸಿಸುತ್ತಿದ್ದ ಸಾವಿರಾರು ಪ್ಯಾಲೆಸ್ಟೈನಿಯರು ಸ್ಥಳಾಂತರಗೊಂಡಿದ್ದಾರೆ ಎಂದು ಪ್ಯಾಲೆಸ್ಟೈನ್ನ ಅಧಿಕೃತ ಸುದ್ದಿ ಸಂಸ್ಥೆ ವಾಫಾ ವರದಿ ಮಾಡಿದೆ. ಇಸ್ರೇಲ್ ಮಿಲಿಟರಿಯ ಸೂಚನೆಯ ಹಿನ್ನೆಲೆಯಲ್ಲಿ ಜನರನ್ನು ಸ್ಥಳಾಂತರಿಸಲಾಗಿದೆ. ಸ್ಥಳಾಂತರಗೊಂಡ ಅನೇಕರು ಮಧ್ಯ ಗಾಜಾದ ದೇರ್ ಅಲ್-ಬಲಾಹ್ ಮತ್ತು ನುಸೆರಾತ್ ಪ್ರದೇಶಗಳಿಗೆ ತೆರಳಿದರು ಎಂದು ವಾಫಾ ತಿಳಿಸಿದೆ.
ಬುರೇಜ್ ಮತ್ತು ಶುಹಾದಾ ಪ್ರದೇಶಗಳ ಜನವಸತಿ ಕೇಂದ್ರಗಳ ಮಧ್ಯದಿಂದ ಹಮಾಸ್ ಉಗ್ರರು ರಾಕೆಟ್ ದಾಳಿ ನಡೆಸುತ್ತಿದ್ದು, ಇಸ್ರೇಲ್ ಸೈನ್ಯ ಅವರನ್ನು ಮಟ್ಟ ಹಾಕಲಿದೆ ಎಂದು ಇಸ್ರೇಲ್ ಮಿಲಿಟರಿ ವಕ್ತಾರ ಅವಿಚೈ ಅಡ್ರೈ ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬುರೈಜ್ ಮತ್ತು ಶುಹಾದಾ ಕೆಲ ಭಾಗಗಳ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಲಿದ್ದು, ಇಲ್ಲಿನ ನಿವಾಸಿಗಳು ತಮ್ಮ ಸುರಕ್ಷತೆಗಾಗಿ ದಕ್ಷಿಣ ಗಾಜಾದ ಅಲ್-ಮಾವಾಸಿಯಲ್ಲಿರುವ ಸುರಕ್ಷತಾ ವಲಯಕ್ಕೆ ತಕ್ಷಣ ಸ್ಥಳಾಂತರಗೊಳ್ಳುವಂತೆ ಅಡ್ರೈ ಜನರಿಗೆ ಸೂಚಿಸಿದ್ದಾರೆ.
ಇಸ್ರೇಲಿ ಮಿಲಿಟರಿಯ ಸ್ಥಳಾಂತರದ ಆದೇಶ ಮತ್ತು ತೀವ್ರವಾದ ದಾಳಿಗಳಿಂದ ಗಾಜಾದಾದ್ಯಂತ ಸಾವಿರಾರು ಜನರು ಆಂತರಿಕ ಸ್ಥಳಾಂತರದ ಹೊಸ ಆತಂಕ ಎದುರಿಸುವಂತಾಗಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ ಶುಕ್ರವಾರ ತಿಳಿಸಿದೆ.
ಜುಲೈ 22 ಮತ್ತು 25ರ ನಡುವೆ ಸುಮಾರು 12,600 ಜನರನ್ನು ಈಗಾಗಲೇ ಬುರೆಜ್ ನಿರಾಶ್ರಿತರ ಶಿಬಿರದಿಂದ ಮಗಾಜಿ ಮತ್ತು ನುಸೇರಾತ್ ನಿರಾಶ್ರಿತರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ, ಗಾಜಾ ಪಟ್ಟಿಯ ಕೇವಲ 14 ಪ್ರತಿಶತದಷ್ಟು ಪ್ರದೇಶಗಳು ಮಾತ್ರ ಸ್ಥಳಾಂತರಿಸುವ ಆದೇಶದ ಅಡಿಯಲ್ಲಿಲ್ಲ ಎಂದು ನಿಯರ್ ಈಸ್ಟ್ನಲ್ಲಿನ ಪ್ಯಾಲೆಸ್ಟೈನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯ ಏಜೆನ್ಸಿಯ ಆಯುಕ್ತ ಫಿಲಿಪ್ ಲಝಾರಿನಿ ಭಾನುವಾರ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ತಿಳಿಸಿದ್ದಾರೆ.
"ಪ್ರತಿದಿನ ಇಸ್ರೇಲಿ ಅಧಿಕಾರಿಗಳು ಇಂಥ ಆದೇಶಗಳನ್ನು ಹೊರಡಿಸುತ್ತಾರೆ ಮತ್ತು ಜನರನ್ನು ಪಲಾಯನ ಮಾಡುವಂತೆ ಒತ್ತಾಯಿಸುತ್ತಾರೆ. ಇದು ಜನರಲ್ಲಿ ಭೀತಿಯನ್ನು ಸೃಷ್ಟಿಸುತ್ತದೆ. ಆಗಾಗ ಜನ ಕೆಲವೇ ಗಂಟೆಗಳಲ್ಲಿ ತಮ್ಮ ಬಳಿ ಇರುವುದನ್ನು ಪ್ಯಾಕ್ ಮಾಡಿಕೊಂಡು ಕಾಲ್ನಡಿಗೆಯಲ್ಲಿ ಅಥವಾ ಕತ್ತೆಯ ಚಕ್ಕಡಿಯಲ್ಲಿ ಮತ್ತೆಲ್ಲಿಗೋ ಹೋಗಬೇಕಾಗುತ್ತದೆ" ಎಂದು ಲಜಾರಿನಿ ಹೇಳಿದರು.
"ಗಾಜಾದ ಬಹುತೇಕ ಎಲ್ಲರೂ ಈ ಆದೇಶಗಳಿಂದ ಪ್ರಭಾವಿತರಾಗಿದ್ದಾರೆ. ಒಂಬತ್ತು ತಿಂಗಳ ಹಿಂದೆ ಯುದ್ಧ ಪ್ರಾರಂಭವಾದಾಗಿನಿಂದ ಅನೇಕರು ತಿಂಗಳಿಗೆ ಕನಿಷ್ಠ ಒಂದು ಬಾರಿಯಾದರೂ ಸ್ಥಳಾಂತರಗೊಂಡಿದ್ದಾರೆ" ಎಂದು ಲಜಾರಿನಿ ತಿಳಿಸಿದರು. ಗಾಜಾ ಪಟ್ಟಿಯ ಮೇಲೆ ನಡೆಯುತ್ತಿರುವ ಇಸ್ರೇಲಿ ದಾಳಿಯಿಂದ ಮೃತಪಟ್ಟವರ ಸಂಖ್ಯೆ 39,324ಕ್ಕೆ ಏರಿದೆ ಎಂದು ಗಾಜಾ ಮೂಲದ ಆರೋಗ್ಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಇದನ್ನೂ ಓದಿ: ಇಮ್ರಾನ್ ಖಾನ್ರೊಂದಿಗೆ ಮಾತುಕತೆಗೆ ಸಿದ್ಧ: ಬಿಲಾವಲ್ ಭುಟ್ಟೊ ಪಕ್ಷದ ಅಚ್ಚರಿಯ ಹೇಳಿಕೆ - Pakistan Politics