ಜೆನಿನ್ ನಿರಾಶ್ರಿತರ ಶಿಬಿರ, ವೆಸ್ಟ್ ಬ್ಯಾಂಕ್: ಒಂದು ವಾರಕ್ಕೂ ಹೆಚ್ಚು ಕಾಲ ಮಿಲಿಟರಿ ಕಾರ್ಯಾಚರಣೆ ನಡೆಸಿದ ನಂತರ ಆಕ್ರಮಿತ ವೆಸ್ಟ್ ಬ್ಯಾಂಕ್ನಲ್ಲಿರುವ ಜೆನಿನ್ ನಿರಾಶ್ರಿತರ ಶಿಬಿರದಿಂದ ಇಸ್ರೇಲಿ ಪಡೆಗಳು ಶುಕ್ರವಾರ ಹಿಂದೆ ಸರಿದಿವೆ. ಜೆನಿನ್ ಮೇಲೆ ನಡೆದ ಕಾರ್ಯಾಚರಣೆಯಲ್ಲಿ ಸುಮಾರು 11 ಜನ ಸಾವಿಗೀಡಾಗಿದ್ದು, ಇಡೀ ಪ್ರದೇಶವು ವ್ಯಾಪಕವಾಗಿ ಧ್ವಂಸಗೊಂಡಿದೆ.
ರಾತ್ರೋರಾತ್ರಿ, ಇಸ್ರೇಲಿ ಶಸ್ತ್ರಸಜ್ಜಿತ ಸಿಬ್ಬಂದಿ ವಾಹನಗಳು ಶಿಬಿರದಿಂದ ಹೊರಹೋಗುತ್ತಿರುವುದು ಮುಖ್ಯ ರಸ್ತೆಗಳಲ್ಲಿನ ಚೆಕ್ ಪಾಯಿಂಟ್ನಿಂದ ಕಂಡು ಬಂದಿದೆ. ಶುಕ್ರವಾರ ಬೆಳಗಿನ ಹೊತ್ತಿಗೆ ನಿರಾಶ್ರಿತರ ಶಿಬಿರದ ಒಳಗೆ ಇಸ್ರೇಲ್ನ ಯಾವುದೇ ಸೈನಿಕರು ಉಳಿದಿರಲಿಲ್ಲ ಎಂದು ಅಸೋಸಿಯೇಟೆಡ್ ಪ್ರೆಸ್ ಪತ್ರಕರ್ತರೊಬ್ಬರು ವರದಿ ಮಾಡಿದ್ದಾರೆ.
ಸದ್ಯ ಜೆನಿನ್ನಿಂದ ಇಸ್ರೇಲ್ ಪಡೆಗಳು ಹೊರಗೆ ಹೋಗಿದ್ದೇಕೆ ಎಂಬುದು ತಿಳಿದಿಲ್ಲ. ಈ ಬಗ್ಗೆ ಇಸ್ರೇಲ್ ಕೂಡ ಏನೂ ಹೇಳಿಲ್ಲ. ಪಡೆಗಳು ಹಿಂದೆ ಸರಿದಿರುವುದು ತಾತ್ಕಾಲಿಕವೇ ಅಥವಾ ಮತ್ತಷ್ಟು ಹೆಚ್ಚಿನ ಸಂಖ್ಯೆಯೊಂದಿಗೆ ಪಡೆಗಳು ಮರಳಿ ಬರಲಿವೆಯೇ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ.
ಇಸ್ರೇಲ್ ಪಡೆಗಳು ಜೆನಿನ್ನಲ್ಲಿ ದೊಡ್ಡ ಮಟ್ಟದ ವಿನಾಶವನ್ನು ತಮ್ಮ ಹಿಂದೆ ಬಿಟ್ಟು ಹೋಗಿವೆ. ಈಗ ಕೊನೆಗೂ ಜೆನಿನ್ನಲ್ಲಿನ ಜನ ಮನೆಯಿಂದ ಹೊರಗೆ ಬಂದು ಉಂಟಾಗಿರುವ ಹಾನಿಯನ್ನು ಅಂದಾಜಿಸುತ್ತಿದ್ದಾರೆ. ಊರು ತೊರೆದಿದ್ದವರು ಮತ್ತೆ ಮರಳುತ್ತಿದ್ದು, ಇಲ್ಲಿನ ವಿನಾಶ ನೋಡಿ ದಿಗ್ಭ್ರಾಂತರಾಗಿದ್ದಾರೆ. ಯಾವುದೇ ಕ್ಷಣದಲ್ಲಿ ಇಸ್ರೇಲ್ ಮಿಲಿಟರಿ ಹಿಂತಿರುಗಬಹುದು ಎಂಬ ಆತಂಕ ಜನರಲ್ಲಿದೆ.
ಇಸ್ರೇಲಿ ಮಿಲಿಟರಿ ಜೆನಿನ್ ನಿಂದ ಹಿಂದೆ ಸರಿದಿದ್ದರೂ, ಆಕ್ರಮಿತ ವೆಸ್ಟ್ ಬ್ಯಾಂಕ್ನ ಇತರ ಪ್ರದೇಶಗಳಲ್ಲಿ ಅದು ಇನ್ನೂ ಬೀಡು ಬಿಟ್ಟಿದೆ. ನಬ್ಲುಸ್ ಮತ್ತು ಬಾಲಾಟಾ ನಿರಾಶ್ರಿತರ ಶಿಬಿರಗಳ ಮೇಲೆ ದೊಡ್ಡ ಮಟ್ಟದ ಮಿಲಿಟರಿ ಆಕ್ರಮಣ ನಡೆಸಲಾಗಿದೆ. ಏತನ್ಮಧ್ಯೆ, ಬೆಥ್ ಲೆಹೆಮ್, ಹೆಬ್ರೋನ್ ಮತ್ತು ರಮಲ್ಲಾ ಪ್ರದೇಶಗಳಲ್ಲಿಯೂ ದಾಳಿಗಳು ನಡೆದವು. ಜೆನಿನ್, ತುಲ್ಕರೆಮ್ ಮತ್ತು ಅಲ್-ಫರಾ ನಿರಾಶ್ರಿತರ ಶಿಬಿರದಲ್ಲಿನ ಉಗ್ರರನ್ನು ಕೊಲ್ಲುವ ಸಲುವಾಗಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ.
ಗಾಜಾದಲ್ಲಿ ಕದನ ವಿರಾಮ ಒಪ್ಪಂದಕ್ಕೆ ಬರುವಂತೆ ಇಸ್ರೇಲ್ ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ಮಿತ್ರರಾಷ್ಟ್ರಗಳಿಂದ ಒತ್ತಡಕ್ಕೆ ಒಳಗಾಗಿದೆ. ಆದರೆ ಫಿಲಡೆಲ್ಫಿ ಕಾರಿಡಾರ್ನಿಂದ ಸೇನೆ ಹಿಂದೆ ಸರಿಯುವುದಿಲ್ಲ ಎಂಬ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಷರತ್ತಿನಿಂದಾಗಿ ಮಾತುಕತೆಗಳು ಮುಂದುವರಿಯುತ್ತಿಲ್ಲ.
ಇದನ್ನೂ ಓದಿ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳು ರಾಜಕೀಯ ಪ್ರೇರಿತ: ಯೂನುಸ್ ಪ್ರತಿಪಾದನೆ - Attacks on Hindus in Bangladesh