ದೇರ್ ಅಲ್-ಬಾಲಾಹ್ (ಗಾಜಾ ಪಟ್ಟಿ) : ಗಾಜಾದ ಮತ್ತಷ್ಟು ಪ್ರದೇಶಗಳಲ್ಲಿನ ಜನರಿಗೆ ಜಾಗ ಖಾಲಿ ಮಾಡುವಂತೆ ಇಸ್ರೇಲ್ ಸೇನೆ ಆದೇಶಿಸಿದ್ದು, ಸುರಕ್ಷಿತ ನೆಲೆಗಳನ್ನು ಹುಡುಕಿಕೊಂಡು ಅಲೆದಾಡುತ್ತಿರುವ ಗಾಜಾದ ಸಾಮಾನ್ಯ ಜನ ದಿಕ್ಕುಗಾಣದಂತಾಗಿದ್ದಾರೆ. ಗಾಜಾದ ಉತ್ತರ ಭಾಗದಲ್ಲಿರುವ ನಿರಾಶ್ರಿತರು ಆಶ್ರಯ ಪಡೆದಿದ್ದ ಶಾಲೆಯೊಂದರ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 80 ಜನ ಪ್ಯಾಲೆಸ್ಟೈನಿಯರು ಸಾವಿಗೀಡಾಗಿದ್ದಾರೆ. ಈಗ ಮತ್ತಷ್ಟು ಪ್ರದೇಶಗಳಲ್ಲಿನ ಜನ ಜಾಗ ಖಾಲಿ ಮಾಡುವಂತೆ ಭಾನುವಾರ ಮುಂಜಾನೆ ಸೇನೆ ಆದೇಶಿಸಿದೆ. ಹಮಾಸ್ ಉಗ್ರಗಾಮಿಗಳ ಕಮಾಂಡ್ ಪೋಸ್ಟ್ ಮೇಲೆ ತಾನು ದಾಳಿ ನಡೆಸಿದ್ದು, ಇದರಲ್ಲಿ 19 ಉಗ್ರವಾದಿಗಳು ಹತರಾಗಿದ್ದಾರೆ ಎಂದು ಇಸ್ರೇಲ್ ಹೇಳಿಕೊಂಡಿದೆ.
ಈ ಹಿಂದೆ ಹಮಾಸ್ ಉಗ್ರರೊಂದಿಗೆ ಹೋರಾಡಿದ್ದ ಮತ್ತು ಬಹುತೇಕ ನಾಶವಾದ ಪ್ರದೇಶಗಳಿಗೆ ಇಸ್ರೇಲ್ ಸೇನೆ ಮತ್ತೆ ಬಂದಿದ್ದು, ಪದೇ ಪದೆ ಸಾಮೂಹಿಕ ಸ್ಥಳಾಂತರಕ್ಕೆ ಆದೇಶಿಸಿದೆ. ಗಾಜಾದ 2.3 ಮಿಲಿಯನ್ ಜನಸಂಖ್ಯೆಯ ಬಹುಪಾಲು ಜನತೆ 10 ತಿಂಗಳಿಂದ ನಡೆಯುತ್ತಿರುವ ಯುದ್ಧದಿಂದಾಗಿ ಪದೇ ಪದೆ ಸ್ಥಳಾಂತರಗೊಂಡಿದ್ದಾರೆ.
ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಕೊಳಕು ಟೆಂಟ್ ಶಿಬಿರಗಳಲ್ಲಿ ಅಥವಾ ಶನಿವಾರ ದಾಳಿಗೊಳಗಾದ ಶಾಲೆಗಳಂಥ ಸ್ಥಳಗಳಲ್ಲಿ ಲಕ್ಷಾಂತರ ಜನ ಆಶ್ರಯ ಪಡೆದಿದ್ದಾರೆ. ಆದರೆ ಗಾಜಾದ ಯಾವುದೇ ಪ್ರದೇಶವೂ ಈಗ ಸುರಕ್ಷಿತವಾಗಿಲ್ಲ ಎಂದು ಪ್ಯಾಲೆಸ್ಟೈನಿಯರು ಹೇಳುತ್ತಾರೆ.
ಖಾನ್ ಯೂನಿಸ್ನ ಬಹುದೊಡ್ಡ ಪ್ರದೇಶದಲ್ಲಿನ ಜನತೆ ಅಲ್ಲಿಂದ ಹೊರಹೋಗುವಂತೆ ಇಸ್ರೇಲ್ನ ಇತ್ತೀಚಿನ ಸ್ಥಳಾಂತರ ಆದೇಶದಲ್ಲಿ ತಿಳಿಸಲಾಗಿದೆ. ಇಸ್ರೇಲ್ ತಾನೇ ಘೋಷಿಸಿದ ಸುರಕ್ಷಿತ ವಲಯವೂ ಇದರಲ್ಲಿ ಸೇರಿದ್ದು, ಇಲ್ಲಿನವರು ಕೂಡ ಈಗ ಸ್ಥಳಾಂತರಗೊಳ್ಳುವಂತೆ ತಿಳಿಸಲಾಗಿದೆ. ಹಮಾಸ್ ಮತ್ತು ಇತರ ಉಗ್ರಗಾಮಿಗಳು ಇಲ್ಲಿನ ನಾಗರಿಕ ವಸತಿ ಪ್ರದೇಶಗಳಲ್ಲಿ ಅಡಗಿಕೊಂಡಿದ್ದು, ಅಲ್ಲಿಂದಲೇ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸುತ್ತಿದ್ದಾರೆ ಎಂದು ಇಸ್ರೇಲ್ ಆರೋಪಿಸಿದೆ.
ಗಾಜಾದ ಎರಡನೇ ಅತಿದೊಡ್ಡ ನಗರವಾದ ಖಾನ್ ಯೂನಿಸ್ ಈ ವರ್ಷದ ಆರಂಭದಲ್ಲಿ ನಡೆದ ವಾಯು ಮತ್ತು ನೆಲದ ದಾಳಿಯಲ್ಲಿ ಸಂಪೂರ್ಣವಾಗಿ ನಾಶವಾಗಿದೆ. ಕಳೆದ ವಾರವಷ್ಟೇ ಹೊರಡಿಸಲಾದ ಸ್ಥಳಾಂತರ ಆದೇಶದ ನಂತರ ಲಕ್ಷಾಂತರ ಜನ ಇಲ್ಲಿಂದ ಪಲಾಯನ ಮಾಡಿದ್ದರು. ಈಗ ಮತ್ತೆ ನೂರಾರು ಕುಟುಂಬಗಳು ತಮ್ಮ ಬಳಿ ಅಳಿದುಳಿದಿರುವ ವಸ್ತುಗಳನ್ನು ತಲೆ ಮೇಲೆ ಹೊತ್ತು, ಹೇಗೋ ಮಕ್ಕಳನ್ನು ಕರೆದುಕೊಂಡು ಎಲ್ಲಿಗೆ ಹೋಗಬೇಕೆಂದು ತೋಚದೆ, ಎಲ್ಲೂ ಸಿಗದ ಸುರಕ್ಷಿತ ತಾಣವನ್ನು ಅರಸುತ್ತ ಹೊರಟಿರುವ ಮನಕಲಕುವ ದೃಶ್ಯಗಳು ಭಾನುವಾರ ಮುಂಜಾನೆ ಕಂಡು ಬಂದವು.
"ಎಲ್ಲಿಗೆ ಹೋಗಬೇಕೆಂಬುದೇ ನಮಗೆ ತಿಳಿಯುತ್ತಿಲ್ಲ" ಎಂದು ಮೂರು ಮಕ್ಕಳ ತಾಯಿ ಅಮಲ್ ಅಬು ಯಹಿಯಾ ಹೇಳಿದರು. ದಾಳಿಯಿಂದ ಹಾನಿಗೀಡಾಗಿರುವ ಮನೆಯಲ್ಲಿ ವಾಸಿಸಲು ಜೂನ್ನಲ್ಲಿ ಖಾನ್ ಯೂನಿಸ್ಗೆ ಮರಳಿ ಬಂದಿದ್ದ ಈ ಮಹಿಳೆ ಈಗ ಮತ್ತೆ ಎಲ್ಲಿಗೋ ಹೋಗಬೇಕಾಗಿದೆ. "ಇದು ನನ್ನ ನಾಲ್ಕನೇ ಸ್ಥಳಾಂತರ" ಎಂದು 42 ವರ್ಷದ ಗಂಡನನ್ನು ಕಳೆದುಕೊಂಡಿರುವ ಆಕೆ ಹೇಳಿದರು. ಮಾರ್ಚ್ನಲ್ಲಿ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಈಕೆಯ ಪತಿ ಸಾವಿಗೀಡಾಗಿದ್ದಾರೆ. ಆಗ ಆಶ್ರಯ ಹುಡುಕಿಕೊಂಡು ಸಮುದ್ರ ತೀರದಲ್ಲಿ ಹಾಕಲಾಗಿದ್ದ ಮುವೈಸಿಯ ವಿಶಾಲವಾದ ಟೆಂಟ್ ಶಿಬಿರಕ್ಕೆ ಈಕೆ ಹೋಗಿದ್ದರು. ಆದರೆ ಅಲ್ಲಿ ಈಕೆಗೆ ಯಾವುದೇ ಟೆಂಟ್ ಸಿಕ್ಕಿರಲಿಲ್ಲ.
50ರ ಹರೆಯದ ಐದು ಮಕ್ಕಳ ತಂದೆ ರಮಾದಾನ್ ಇಸ್ಸಾ ಎಂಬುವರು ತನ್ನ ಕುಟುಂಬದ 17 ಸದಸ್ಯರೊಂದಿಗೆ ಖಾನ್ ಯೂನಿಸ್ನಿಂದ ಭಾನುವಾರ ಮುಂಜಾನೆ ಕೇಂದ್ರ ಗಾಜಾ ಕಡೆಗೆ ನೂರಾರು ಜನರೊಂದಿಗೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿತು. ಸ್ಥಳಾಂತರಗೊಂಡಾಗ ನಾವು ಯಾವುದೋ ಒಂದು ಸ್ಥಳದಲ್ಲಿ ನೆಲೆಸಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಟೆಂಟ್ಗಳನ್ನು ನಿರ್ಮಿಸಿಕೊಂಡಿರುತ್ತೇವೆ. ಆದರೆ ಇಸ್ರೇಲ್ ಈ ಪ್ರದೇಶಗಳ ಮೇಲೆ ದಾಳಿ ಮಾಡುತ್ತದೆ ಎಂದು ಅವರು ಹೇಳಿದರು.
ಕಳೆದ 10 ತಿಂಗಳಿನಿಂದ ನಡೆದಿರುವ ಯುದ್ಧದಲ್ಲಿ 40 ಸಾವಿರಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ. ಆದರೆ ಇದರಲ್ಲಿ ಹಮಾಸ್ ಹೋರಾಟಗಾರರು ಎಷ್ಟು ಜನ ಎಂಬ ಬಗ್ಗೆ ಅದು ಮಾಹಿತಿ ನೀಡಿಲ್ಲ. ಗಾಜಾದಲ್ಲಿನ ಮಾನವೀಯ ಬಿಕ್ಕಟ್ಟನ್ನು ಪರಿಹರಿಸಲು ಸಹಾಯ ಗುಂಪುಗಳಿಗೆ ಸಾಧ್ಯವಾಗುತ್ತಿಲ್ಲ. ಪ್ರದೇಶದಲ್ಲಿ ಭೀಕರ ಆಹಾರ ಕ್ಷಾಮ ಆವರಿಸಿದೆ ಎಂದು ಅಂತಾರಾಷ್ಟ್ರೀಯ ತಜ್ಞರು ಹೇಳಿದ್ದಾರೆ.