ಟೆಲ್ ಅವಿವ್(ಇಸ್ರೇಲ್): "ಗಾಜಾದಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಕುರಿತು ಹಮಾಸ್ ಜೊತೆಗಿನ ಒಪ್ಪಂದದ ತೀರಾ ಸಮೀಪದಲ್ಲಿದ್ದೇವೆ" ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಸೋಮವಾರ ನೆಸೆಟ್ ಶಾಸಕರಿಗೆ ತಿಳಿಸಿದ್ದಾರೆ.
ನೆಸ್ಸೆಟ್ ವಿದೇಶಾಂಗ ವ್ಯವಹಾರಗಳು ಮತ್ತು ರಕ್ಷಣಾ ಸಮಿತಿ ಸದಸ್ಯರ ಜೊತೆಗಿನ ಗುಪ್ತ ಸಭೆಯಲ್ಲಿ ಕಾಟ್ಜ್ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರ ಹೇಳಿಕೆಗಳು ಮಾಧ್ಯಮಗಳಿಗೆ ಸೋರಿಕೆಯಾಗಿವೆ.
"ಇಸ್ರೇಲ್ ಮತ್ತೊಂದು ಒತ್ತೆಯಾಳುಗಳನ್ನು ವಾಪಸ್ ಕರೆತರುವ ಒಪ್ಪಂದಕ್ಕೆ ಹಿಂದೆಂದಿಗಿಂತಲೂ ತುಂಬಾ ಸಮೀಪದಲ್ಲಿದೆ" ಎಂದು ಕಾಟ್ಜ್ ಉಲ್ಲೇಖಿಸಿದ್ದಾರೆ.
ಗಾಜಾದಲ್ಲಿ ಹಮಾಸ್ ವಶಪಡಿಸಿಕೊಂಡಿರುವ ಒತ್ತೆಯಾಳುಗಳನ್ನು ಮುಕ್ತಗೊಳಿಸಲು ನಡೆಯುತ್ತಿರುವ ಪ್ರಯತ್ನಗಳ ಕುರಿತು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಚರ್ಚಿಸಿದ ನಂತರ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾನುವಾರ ಹೇಳಿಕೆಗಳನ್ನು ನೀಡಿದ್ದರು. ಇದರ ಬೆನ್ನಲ್ಲೇ ಇಸ್ರೇಲ್ ಕಾಟ್ಜ್, ಈ ಬಗ್ಗೆ "ಕಡಿಮೆ ಹೇಳಿದರೆ ಉತ್ತಮ" ಎಂದು ಹೇಳಿದ್ದರು. "ಯಾವುದೇ ವಿಶ್ರಾಂತಿ ಇಲ್ಲದೆ, ಅವಿರತವಾಗಿ ಒತ್ತೆಯಾಳುಗಳನ್ನು ವಾಪಸ್ ಕರೆತರಲು ಶ್ರಮಿಸುತ್ತಿದ್ದೇವೆ" ಎಂದು ಪಿಎಂ ನೆತನ್ಯಾಹು ಹೇಳಿದ್ದರು.
"ನಾವು ಅದರ ಬಗ್ಗೆ ಕಡಿಮೆ ಮಾತನಾಡುವುದು ಉತ್ತಮ. ಆ ಮೂಲಕ ದೇವರ ದಯೆಯಿಂದ ಆದಷ್ಟು ಬೇಗ ನಾವು ಯಶಸ್ವಿಯಾಗುತ್ತೇವೆ." ಎಂದು ಕಾಟ್ಜ್ ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಜನವರಿ 20 ರಂದು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಳ್ಳುವ ವೇಳೆಗೆ ಹಮಾಸ್ ಗಾಜಾದಲ್ಲಿ ಒತ್ತೆಯಾಳಾಗಿರಿಸಿಕೊಂಡವರನ್ನು ಬಿಡುಗಡೆ ಮಾಡದೇ ಇದ್ದರೆ, ಎಲ್ಲಾ ರೀತಿಯ ನರಕವನ್ನೂ ನೋಡಬೇಕಾದೀತು ಎಂದು ಡೊನಾಲ್ಡ್ ಟ್ರಂಪ್ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಗೋಲನ್ ಹೈಟ್ಸ್ನಲ್ಲಿ ಜನವಸತಿ ದ್ವಿಗುಣಗೊಳಿಸುವ ಇಸ್ರೇಲ್ ಕ್ರಮಕ್ಕೆ ಸೌದಿ, ಕತಾರ್ ವಿರೋಧ
ಇನ್ನೊಂದು ಕಡೆ ಇತ್ತೀಚೆಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಸದಸ್ಯ ರಾಷ್ಟ್ರಗಳು ಗಾಜಾದಲ್ಲಿ ತಕ್ಷಣವೇ ಕದನ ವಿರಾಮವನ್ನು ಘೋಷಿಸುವ ಹೊಸ ನಿರ್ಣಯವನ್ನು ಈ ವಾರ ಅಂಗೀಕರಿಸಿವೆ. ಈ ಮೂಲಕ ಇಸ್ರೇಲ್ ಗಾಜಾ ಮೇಲೆ ನಡೆಸುತ್ತಿರುವ ನಿರಂತರ ದಾಳಿ ತಡೆದು ಶಾಂತಿ ಸ್ಥಾಪನೆ ಮಾಡಬೇಕು ಎಂದು ವಿಶ್ವದ ಅನೇಕ ರಾಷ್ಟ್ರಗಳ ಒತ್ತಾಸೆಯಾಗಿದೆ. ಈ ನಿಟ್ಟಿನಲ್ಲಿ ಸತತ ಪ್ರಯತ್ನಗಳು ಮುಂದುವರೆದಿವೆ.
ಒಂದು ವರ್ಷಕ್ಕಿಂತಲೂ ಹೆಚ್ಚಿನ ಕಾಲದಿಂದ ಮುಂದುವರೆದಿರುವ ಯುದ್ಧ: ಅಕ್ಟೋಬರ್ 7, 2023 ರಂದು ದಕ್ಷಿಣ ಇಸ್ರೇಲ್ ಗಡಿಯ ಮೂಲಕ ಹಮಾಸ್ ದಾಳಿ ಮಾಡಿತ್ತು. ಈ ಸಂದರ್ಭದಲ್ಲಿ ಸುಮಾರು 1,200 ಜನರು ಸಾವನ್ನಪ್ಪಿದರು ಮತ್ತು ಸುಮಾರು 250 ಇಸ್ರೇಲಿಗರನ್ನು ಹಮಾಸ್ ಬಂಡುಕೋರರು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಸೇನೆ ಗಾಜಾಪಟ್ಟಿಯ ಮೇಲೆ ಮುಗಿ ಬಿದ್ದಿತ್ತು. ಅಷ್ಟೇ ಅಲ್ಲ ಹಮಾಸ್ ನಿರ್ನಾಮಕ್ಕೆ ಪಣತೊಟ್ಟಿದೆ. 2023ರ ಅಕ್ಟೋಬರ್ನಲ್ಲಿ ಆರಂಭವಾದ ಯುದ್ಧ ಇದುವರೆಗೂ ನಿಂತಿಲ್ಲ. ನಿಲ್ಲುವ ಲಕ್ಷಣಗಳು ಕಂಡು ಬರುತ್ತಿಲ್ಲ. ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಇಸ್ರೇಲ್ ದಾಳಿಯಿಂದ ಪ್ಯಾಲೆಸ್ಟೈನ್ ನಾಗರಿಕರ ಸಾವಿನ ಸಂಖ್ಯೆ 45ಸಾವಿರಕ್ಕಿಂತ ಹೆಚ್ಚಾಗಿದೆ.