ನ್ಯೂಯಾರ್ಕ್: ಅಮೆರಿಕ ವಿಶ್ವವಿದ್ಯಾನಿಲಯದಲ್ಲಿ ಅಭ್ಯಾಸ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿ ಶುಕ್ರವಾರ ವರದಿ ಮಾಡಿದೆ. ಓಹಿಯೋದ ಕ್ಲೀವ್‌ಲ್ಯಾಂಡ್‌ನಲ್ಲಿರುವ ಭಾರತೀಯ ವಿದ್ಯಾರ್ಥಿ ಶ್ರೀ ಉಮಾ ಸತ್ಯ ಸಾಯಿ ಗಡ್ಡೆ ಅವರ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಅದು ಎಕ್ಸ್ ಪೋಸ್ಟ್‌ನಲ್ಲಿ ಕಳವಳ ವ್ಯಕ್ತಪಡಿಸಿದೆ.
ಪೊಲೀಸ್ ತನಿಖೆಗಳು ನಡೆಯುತ್ತಿವೆ ಮತ್ತು ಮೃತದೇಹವನ್ನು ಭಾರತಕ್ಕೆ ರವಾನಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಕಾನ್ಸುಲೇಟ್ ತಿಳಿಸಿದೆ. 2024ರ ಆರಂಭದಿಂದ, ಅಮೆರಿಕದಲ್ಲಿ ಕನಿಷ್ಠ ಭಾರತೀಯ ಮೂಲದ ಆರು ವಿದ್ಯಾರ್ಥಿಗಳ ಸಾವಿನ ಪ್ರಕರಣಗಳು ವರದಿಯಾಗಿವೆ. ದಾಳಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಭಾರತೀಯರ ಆತಂಕಕ್ಕೆ ಕಾರಣವಾಗಿದೆ.
ಕಳೆದ ತಿಂಗಳು, ಮಿಸೌರಿಯ ಸೇಂಟ್ ಲೂಯಿಸ್‌ನಲ್ಲಿ ಭಾರತದ 34 ವರ್ಷದ ತರಬೇತಿ ಪಡೆದ ಶಾಸ್ತ್ರೀಯ ನೃತ್ಯಗಾರ ಅಮರನಾಥ್ ಘೋಷ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಪರ್ಡ್ಯೂ ವಿಶ್ವವಿದ್ಯಾನಿಲಯದಲ್ಲಿ 23 ವರ್ಷದ ಭಾರತೀಯ - ಅಮೆರಿಕನ್ ವಿದ್ಯಾರ್ಥಿ ಸಮೀರ್ ಕಾಮತ್ ಫೆಬ್ರವರಿ 5 ರಂದು ಇಂಡಿಯಾನಾದ ಕಾಡಿನಲ್ಲಿ ಶವವಾಗಿ ಪತ್ತೆಯಾಗಿದ್ದರು.
ಫೆಬ್ರವರಿ 2ರಂದು, 41 ವರ್ಷದ ಭಾರತೀಯ ಮೂಲದ ಐಟಿ ಎಕ್ಸಿಕ್ಯೂಟಿವ್ ವಿವೇಕ್ ತನೇಜಾ ಅವರು ವಾಷಿಂಗ್ಟನ್‌ನ ರೆಸ್ಟೋರೆಂಟ್‌ನ ಹೊರಗೆ ನಡೆದ ದಾಳಿಯ ಸಂದರ್ಭದಲ್ಲಿ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಮೃತಪಟ್ಟಿದ್ದರು. ಇದು ಇತ್ತೀಚಿನ ತಿಂಗಳುಗಳಲ್ಲಿ ಭಾರತೀಯ ಮೂಲದ ವ್ಯಕ್ತಿಯ ಏಳನೇ ಸಾವಿನ ಪ್ರಕರಣವಾಗಿದೆ.
ಭಾರತೀಯ ವಿದ್ಯಾರ್ಥಿಗಳೊಂದಿಗೆ ರಾಯಭಾರ ಕಚೇರಿಗಳ ಸಂವಹನ: ಭಾರತೀಯ ಮೂಲದ ವ್ಯಕ್ತಿಗಳು/ವಿದ್ಯಾರ್ಥಿಗಳ ಮೇಲಿನ ಸರಣಿ ದಾಳಿಗಳ ಹಿನ್ನೆಲೆ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ವಿವಿಧ ಸ್ಥಳಗಳಲ್ಲಿರುವ ಅದರ ರಾಯಭಾರ ಕಚೇರಿಗಳು ಅಮೆರಿಕದಾದ್ಯಂತ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುತ್ತಿವೆ.
ವಿದ್ಯಾರ್ಥಿಗಳ ಯೋಗಕ್ಷೇಮ ಸೇರಿದಂತೆ ವಿವಿಧ ಅಂಶಗಳ ಕುರಿತು ಚರ್ಚಿಸುತ್ತಿವೆ. ಪ್ರಭಾರ ರಾಯಭಾರಿ ಶ್ರೀಪ್ರಿಯಾ ರಂಗನಾಥನ್ ನೇತೃತ್ವದಲ್ಲಿ ನಡೆದ ಸಂವಾದದಲ್ಲಿ ಸುಮಾರು 150 ಭಾರತೀಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು 90 ಅಮೆರಿಕ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಟ್ಲಾಂಟಾ, ಚಿಕಾಗೋ, ಹೂಸ್ಟನ್, ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಸಿಯಾಟಲ್‌ನ ಭಾರತದ ಕಾನ್ಸುಲ್ ಜನರಲ್‌ಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ನ್ಯೂಯಾರ್ಕ್ನಲ್ಲಿ 4.8 ಪ್ರಾಥಮಿಕ ತೀವ್ರತೆಯ ಭೂಕಂಪನ: ಜಮ್ಮು ಕಾಶ್ಮೀರದಲ್ಲೂ ನಡುಗಿದ ಭೂಮಿ - earthquake