ಚಿಕಾಗೋ, ಅಮೆರಿಕ: ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಚಿಕಾಗೋದಲ್ಲಿ ಮಂಗಳವಾರ ಭಾರತೀಯ ವಿದ್ಯಾರ್ಥಿಯ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ. ದಾಳಿಯ ನಂತರ, ಚಿಕಾಗೋದಲ್ಲಿರುವ ಭಾರತೀಯ ದೂತಾವಾಸವು ಸಂತ್ರಸ್ತ ಸೈಯದ್ ಮಜಾಹಿರ್ ಅಲಿ ಮತ್ತು ಭಾರತದಲ್ಲಿನ ಅವರ ಪತ್ನಿಯೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿದೆ. ಭಾರತೀಯ ರಾಯಭಾರ ಕಚೇರಿಯು ಹೈದರಾಬಾದ್‌ನ ನಿವಾಸಿಯಾಗಿರುವ ಅಲಿ ಮತ್ತು ಅವರ ಕುಟುಂಬಕ್ಕೆ ಸಾಧ್ಯ ಇರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದೆ.
"ನಾವು ಸೈಯದ್ ಮಜಾಹಿರ್ ಅಲಿ ಮತ್ತು ಅವರ ಪತ್ನಿ ಸೈಯದಾ ರುಕಿಯಾ ಫಾತಿಮಾ ರಜ್ವಿ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಸಾಧ್ಯವಿರುವ ಎಲ್ಲ ಸಹಾಯ ಮಾಡುವ ಭರವಸೆ ನೀಡಿದ್ದೇವೆ" ಎಂದು ಚಿಕಾಗೋದಲ್ಲಿರುವ ಭಾರತೀಯ ಕಾನ್ಸುಲೇಟ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಸ್ಥಳೀಯ ಅಧಿಕಾರಿಗಳನ್ನು ಕಾನ್ಸುಲೇಟ್ ಕೂಡ ಸಂಪರ್ಕಿಸಿದೆ ಎಂದು ಹೇಳಲಾಗಿದೆ.
ದಾಳಿಯ ವಿಡಿಯೋ ವೈರಲ್: ಇಂಡಿಯಾನಾ ವೆಸ್ಲಿಯನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅಲಿ ಕೆಲವು ತಿಂಗಳ ಹಿಂದೆ ಅಲ್ಲಿಗೆ ತೆರಳಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ, ಅಲಿ ತೀವ್ರ ರಕ್ತಸ್ರಾವವಾದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಘಟನೆಯ ಸಿಸಿಟಿವಿ ಫೂಟೇಜ್‌ನಂತೆ ಕಂಡು ಬರುವ ಮತ್ತೊಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಚಿಕಾಗೋದ ಬೀದಿಗಳಲ್ಲಿ ಮೂವರು ದಾಳಿಕೋರರು ಅಲಿಯನ್ನು ಬೆನ್ನಟ್ಟುತ್ತಿರುವುದು ಆ ವಿಡಿಯೋದಲ್ಲಿ ಸೆರೆಯಾಗಿದೆ.
ಭಾರತೀಯ ವಿದ್ಯಾರ್ಥಿಗಳ ಮೇಲಿನ ಹೆಚ್ಚಾದ ದಾಳಿಗಳು: ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಳೆದ ವಾರ, ಓಹಿಯೋದ ಸಿನ್ಸಿನಾಟಿಯಲ್ಲಿ ಶ್ರೇಯಸ್ ರೆಡ್ಡಿ ಎಂಬ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದರು. ಆದರೆ, ಅವರ ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ವರದಿಗಳ ಪ್ರಕಾರ, ರೆಡ್ಡಿ ಅವರು ಲಿಂಡರ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ವಿದ್ಯಾರ್ಥಿಯಾಗಿದ್ದರು.
ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿತ್ತು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿದೆ ಮತ್ತು ಅವರಿಗೆ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದೆ ಎಂದು ಹೇಳಿತ್ತು. ಇದು ಒಂದು ವಾರದೊಳಗೆ ಭಾರತೀಯ ವಿದ್ಯಾರ್ಥಿಯ ಮೂರನೇ ದಾಳಿ ಇದು ಎಂಬುದು ಕಳವಳಕಾರಿ ವಿಚಾರವಾಗಿದೆ.
ಒಂದು ವಾರದಲ್ಲಿ ಮೂವರು ವಿದ್ಯಾರ್ಥಿಗಳ ಸಾವು: ಪರ್ಡ್ಯೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನೀಲ್ ಆಚಾರ್ಯ ಜನವರಿ 30 ರಂದು ಹಲವಾರು ದಿನಗಳಿಂದ ಕಾಣೆಯಾದ ನಂತರ ಶವವಾಗಿ ಪತ್ತೆಯಾಗಿದ್ದರು ಎಂದು ಟಿಪ್ಪೆಕಾನೋ ಕೌಂಟಿ ಕರೋನರ್ ತಿಳಿಸಿದ್ದಾರೆ. ಅದೇ ರೀತಿ, ಜನವರಿ 29 ರಂದು, ವಿವೇಕ್ ಸೈನಿ ಎಂದು ಗುರುತಿಸಲಾದ ಇನ್ನೊಬ್ಬ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕದ ಜಾರ್ಜಿಯಾದ ಲಿಥೋನಿಯಾದ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬ ಸುತ್ತಿಗೆಯಿಂದ ಬರ್ಬರವಾಗಿ ಕೊಂದಿದ್ದನು. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಓದಿ: ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ: 50ಕ್ಕೂ ಹೆಚ್ಚು ಮನೆಗಳು ಭಸ್ಮ, ಏಳು ಜನ ಸಾವು, 60ಕ್ಕೂ ಹೆಚ್ಚು ಜನರಿಗೆ ಗಾಯ