ವಾಷಿಂಗ್ಟನ್, ಅಮೆರಿಕ: ಅಮೆರಿಕದಲ್ಲಿ ಭಾರತೀಯರು ಮತ್ತು ಭಾರತೀಯ - ಅಮೆರಿಕನ್ನರ ಮೇಲೆ ದಾಳಿಗಳು ಮತ್ತು ಸಾವಿನ ಘಟನೆಗಳ ನಡುವೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ನಗರದಲ್ಲಿ ಮತ್ತೊಂದು ಆಘಾತಕಾರಿ ಘಟನೆಯಲ್ಲಿ 41 ವರ್ಷದ ಭಾರತೀಯ ಮೂಲದ ಕಾರ್ಯ ನಿರ್ವಾಹಕರೊಬ್ಬರು ಸಾವನ್ನಪ್ಪಿದ್ದಾರೆ.
ವಾಷಿಂಗ್ಟನ್ ಡೌನ್‌ಟೌನ್‌ನಲ್ಲಿರುವ ರೆಸ್ಟೋರೆಂಟ್‌ನ ಹೊರಗೆ ನಡೆದ ವಾಗ್ವಾದದ ಸಂದರ್ಭದಲ್ಲಿ ಹಲ್ಲೆಗೊಳಗಾದ ವ್ಯಕ್ತಿ ಕೆಲವು ದಿನಗಳ ನಂತರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಫೆಬ್ರವರಿ 2ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತನಿಖಾಧಿಕಾರಿಗಳ ಪ್ರಕಾರ, ವರ್ಜೀನಿಯಾದ ನಿವಾಸಿ ವಿವೇಕ್ ತನೇಜಾ ಅವರು ಫೆಬ್ರವರಿ 2 ರಂದು ಟು ಸಿಸ್ಟರ್ಸ್ ಹೆಸರಿನ ಜಪಾನೀಸ್ ರೆಸ್ಟೋರೆಂಟ್‌ಗೆ ತೆರಳಿದ್ದರು. ವಿವೇಕ ತನೇಜಾ ಮತ್ತು ಶಂಕಿತನ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ವೇಳೆ, ಶಂಕಿತ ವ್ಯಕ್ತಿ ವಿವೇಕ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ವಿವೇಕ್ ತಲೆಗೆ ಏಟು ಬಿದ್ದಿದ್ದರಿಂದ ಗಂಭೀರವಾಗಿ ಗಾಯಗೊಂಡು ನರಳುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಈ ದಾಳಿ ಏಕೆ ನಡೆದಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ದಾಳಿಯ ನಂತರ ವಿವೇಕ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ರಸ್ತೆಯಲ್ಲಿ ವಿವೇಕ್ ಪ್ರಾಣಾಪಾಯದಿಂದ ನರಳುತ್ತಿರುವುದು ಕಂಡು ಬಂದಿದೆ. ಪೊಲೀಸರು ಕೂಡಲೇ ಆಸ್ಪತ್ರೆಗೆ ದಾಖಲಿದ್ದರು. ಆದರೆ ಬುಧವಾರ ಆಸ್ಪತ್ರೆಯಲ್ಲಿ ವಿವೇಕ್ ತನೇಜಾ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾಗಿರುವ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಈತನ ಗುರುತು ಪತ್ತೆಯಾಗಿಲ್ಲ. ಅಮೆರಿಕ ಪಾಸ್‌ಪೋರ್ಟ್ ಹೊಂದಿದ್ದ 19 ವರ್ಷದ ವಿದ್ಯಾರ್ಥಿ ಶ್ರೇಯಸ್ ರೆಡ್ಡಿ ಬೆನ್ನಿಗೇರ್ ಕಳೆದ ವಾರ ಶವವಾಗಿ ಪತ್ತೆಯಾಗಿದ್ದನು. ಮತ್ತೊಬ್ಬ ವಿದ್ಯಾರ್ಥಿ ನೀಲ್ ಆಚಾರ್ಯ ಈ ವಾರದ ಆರಂಭದಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದನು. ಇದಕ್ಕೂ ಮೊದಲು ಜನವರಿ 16 ರಂದು ಹರಿಯಾಣದ 25 ವರ್ಷದ ವಿದ್ಯಾರ್ಥಿ ವಿವೇಕ್ ಸೈನಿಯನ್ನು ಜಾರ್ಜಿಯಾದ ಲಿಥೋನಿಯಾದಲ್ಲಿ ವ್ಯಕ್ತಿಯೊಬ್ಬರು ಹೊಡೆದು ಕೊಂದಿದ್ದರು.
ಈ ವಾರದ ಆರಂಭದಲ್ಲಿ, ಚಿಕಾಗೋದಲ್ಲಿ ಭಾರತೀಯ ವಿದ್ಯಾರ್ಥಿ ಸೈಯದ್ ಮಜಾಹಿರ್ ಅಲಿ ದರೋಡೆಕೋರರಿಂದ ದಾಳಿಗೊಳಗಾದರು. ಈ ವರ್ಷ ಅಮೆರಿಕದಲ್ಲಿ ನಾಲ್ವರು ಭಾರತೀಯ ಮೂಲದ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಸರಣಿ ಘಟನೆಗಳು ಭಾರತೀಯ ವಿದ್ಯಾರ್ಥಿಗಳು ಹಾಗೂ ಅಮೆರಿಕ ವಾಸಿಗಳಲ್ಲಿ ಆತಂಕ ಹೆಚ್ಚುವಂತೆ ಮಾಡಿವೆ.
ಓದಿ: ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ; ತಿಂಗಳಲ್ಲಿ 6ನೇ ಘಟನೆ