ಸಿಂಗಾಪುರ: ಮದ್ಯದ ಅಮಲಿನಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ಸಿಂಗಾಪುರದ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯ ಭಾರತೀಯ ಮೂಲದ ವ್ಯಕ್ತಿಗೆ ಐದು ವಾರಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ಮಾಡಿದೆ ಎಂದು ವರದಿಯಾಗಿದೆ. 24 ವರ್ಷದ ದೇವೇಶ್ ರಾಜ್ ರಾಜಶೇಖರನ್ ಐದು ವಾರಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.
ಸಿಂಗಾಪುರದಲ್ಲಿ ನೆಲೆಸಿರುವ ರಾಜಶೇಖರನ್ 2022ರಲ್ಲಿ ತನ್ನ ಸ್ನೇಹಿತನಾದ ರವಿ ಎಂಬಾತನ ಜೊತೆ ಸೇರಿ ಇತರರೊಂದಿಗೆ ಜಗಳವಾಡುತ್ತಿದ್ದ. ಇದನ್ನು ಗಮನಿಸಿದ ಪೊಲೀಸ್ ಅಧಿಕಾರಿಯೊಬ್ಬರು ವಿಚಾರಿಸಲು ತೆರಳಿದ್ದಾರೆ. ಈ ವೇಳೆ, ಪಾನಮತ್ತನಾಗಿದ್ದ ರಾಜಶೇಖರನ್ ಅಧಿಕಾರಿಯೊಂದಿಗೆ ಜಗಳಕ್ಕಿಳಿದು ಮುಖಕ್ಕೆ ಬಲವಾಗಿ ಹೊಡೆದಿದ್ದ. ಪರಿಣಾಮ ಪೊಲೀಸ್ ಅಧಿಕಾರಿ ಸ್ಥಳದಲ್ಲೇ ಪ್ರಜ್ಞೆತಪ್ಪಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೂ ಸಾಗಿಸಲಾಗಿತ್ತು. ಹಲವು ದಿನಗಳ ಬಳಿಕ ಚೇತರಿಸಿಕೊಂಡಿದ್ದರು.
ಈ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನು ವಿಚಾರಿಸಿದ್ದರು. ಈ ವೇಳೆ ಈ ವರ್ಷದ ಮಾರ್ಚ್ ತಿಂಗಳಲ್ಲಿ ಆರೋಪಿ ರಾಜಶೇಖರನ್ ತಾನು ಪೊಲೀಸ್ ಅಧಿಕಾರಿಗೆ ಹೊಡೆದಿರುವುದಾಗಿ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕಣವನ್ನು ಆಲಿಸಿದ ನ್ಯಾಯಾಲಯ ಆರೋಪಿಗೆ 5 ವಾರಗಳ ಕಾಲ ಜೈಲುಶಿಕ್ಷೆ ವಿಧಿಸಿ ಆದೇಶ ಮಾಡಿದೆ. ಇದೇ ಪ್ರಕರಣದಲ್ಲಿ 3 ವರ್ಷ ಜೈಲು ಶಿಕ್ಷೆ ಮತ್ತು 5000 ಸಿಂಗಾಪುರ ಡಾಲರ್ ಶಿಕ್ಷೆ ವಿಧಿಸುವ ಸಾಧ್ಯತೆ ಇತ್ತು. ಆದರೇ ಆರೋಪಿ ಪಾನಮತ್ತನಾಗಿದ್ದು ಮತ್ತು ಮಾಡಿರುವ ತಪ್ಪನ್ನು ಒಪ್ಪಿಕೊಂಡದ್ದಕ್ಕೆ ಶಿಕ್ಷೆಯ ಪ್ರಮಾಣ ಕಡಿತಗೊಳಿಸಲಾಗಿದೆ.