ವಾಶಿಂಗ್ಟನ್: ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ)ನ ನಿರ್ದೇಶಕರಾಗಿ ಕಾಶ್ ಪಟೇಲ್ ಅವರ ಹೆಸರನ್ನು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಘೋಷಿಸಿದ್ದಾರೆ. ಈ ಮೂಲಕ ಭಾರತೀಯ-ಅಮೆರಿಕನ್ ಸಂಜಾತ ಪೆಂಟಗನ್ ಅಧಿಕಾರಿಯಾಗಿರುವ ಕಶ್ಯಪ್ 'ಕಾಶ್' ಪಟೇಲ್ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಅಡಿಯಲ್ಲಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ)ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಟ್ರಂಪ್ ಅವರ ನಿಷ್ಠಾವಂತ ಬೆಂಬಲಿಗರಾಗಿರುವ ಪಟೇಲ್, ಯುಎಸ್ ಸರ್ಕಾರದೊಳಗೇ ಕೆಲಸ ಮಾಡುತ್ತಿರುವ "ಆಳ ಸಂಚಿನ ಕಾರ್ಯಾಚರಣೆ" ಎಂದು ಹೇಳಲಾಗುವ ಡೀಪ್ ಸ್ಟೇಟ್ ಕಾರ್ಯಾಚರಣೆಗಳನ್ನು ನಿರ್ಮೂಲನೆ ಮಾಡುವುದಾಗಿ ಪ್ರತಿಪಾದಿಸಿದ್ದಾರೆ.
ಕಾಶ್ ಪಟೇಲ್ ಹಿನ್ನೆಲೆ: ಪೂರ್ವ ಆಫ್ರಿಕಾದ ಗುಜರಾತಿ ವಲಸಿಗ ಪೋಷಕರಿಗೆ 1980 ರಲ್ಲಿ ನ್ಯೂಯಾರ್ಕ್ನ ಕ್ವೀನ್ಸ್ನಲ್ಲಿ ಜನಿಸಿದ ಪಟೇಲ್ ಕಾನೂನು ಪದವಿ ಪಡೆದು ಫ್ಲೋರಿಡಾದಲ್ಲಿ ಸರ್ಕಾರಿ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಪ್ರಾಂತ್ಯ ಮತ್ತು ಫೆಡರಲ್ ನ್ಯಾಯಾಲಯಗಳಲ್ಲಿ ಕಕ್ಷಿದಾರರನ್ನು ಪ್ರತಿನಿಧಿಸಿದರು. ನಂತರ ಅವರು ಪೂರ್ವ ಆಫ್ರಿಕಾ ಮತ್ತು ಯುನೈಟೆಡ್ ಸ್ಟೇಟ್ಸ್ನಲ್ಲಿ ಅಂತರರಾಷ್ಟ್ರೀಯ ಭಯೋತ್ಪಾದನೆ ಪ್ರಕರಣಗಳಲ್ಲಿ ಪರಿಣತಿ ಹೊಂದಿರುವ ಪ್ರಾಸಿಕ್ಯೂಟರ್ ಆಗಿ ನ್ಯಾಯಾಂಗ ಇಲಾಖೆಗೆ ಸೇರಿದರು.
ಭಯೋತ್ಪಾದನೆ ನಿಗ್ರಹ ದಳಕ್ಕೆ ನೇಮಕ: ರಕ್ಷಣಾ ಇಲಾಖೆಯಲ್ಲಿ ಸರ್ಕಾರಿ ವಕೀಲರಾಗಿ ತಮ್ಮ ಅಧಿಕಾರಾವಧಿಯಲ್ಲಿ ಅವರು ಜಾಗತಿಕ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ವಿಷಯದಲ್ಲಿ ಹೆಚ್ಚಾಗಿ ಕೆಲಸ ಮಾಡಿದರು. ಕಾಂಗ್ರೆಸ್ ಸದಸ್ಯ ಡೆವಿನ್ ನ್ಯೂನ್ಸ್ ಅವರು ಕಾಶ್ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದರು. ಹೀಗಾಗಿ ನ್ಯೂನ್ಸ್ ತಾವು ಹೌಸ್ ಇಂಟೆಲಿಜೆನ್ಸ್ ಕಮಿಟಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪಟೇಲ್ ಅವರನ್ನು ಭಯೋತ್ಪಾದನೆ ನಿಗ್ರಹ ವಿಭಾಗದ ಹಿರಿಯ ಸಲಹೆಗಾರರನ್ನಾಗಿ ನೇಮಿಸಿದರು.
ಕಾಶ್ ಮೆಮೋ: ಡೊನಾಲ್ಡ್ ಟ್ರಂಪ್ ಅವರ ಮೊದಲ ಅಧಿಕಾರಾವಧಿಯಲ್ಲಿ ಕಾಶ್ ಪಟೇಲ್ ಪ್ರಾಮುಖ್ಯತೆಯನ್ನು ಪಡೆದರು ಮತ್ತು ರಷ್ಯಾದ ಬಗ್ಗೆ ಎಫ್ಬಿಐ ನಡೆಸಿದ ತನಿಖೆಯ ವಿಚಾರಣೆ ನಡೆಸಿದ ಹೌಸ್ ರಿಪಬ್ಲಿಕನ್ನರ ತನಿಖೆಯಲ್ಲಿ ಭಾಗಿಯಾಗಿದ್ದರು. ಟ್ರಂಪ್ ಅವರ 2016 ರ ಅಧ್ಯಕ್ಷೀಯ ಪ್ರಚಾರದ ಬಗ್ಗೆ ಎಫ್ಬಿಐ ತನಿಖೆ ಪಕ್ಷಪಾತದಿಂದ ಕೂಡಿತ್ತು ಎಂದು ಆರೋಪಿಸಿದ ವಿವಾದಾತ್ಮಕ ಜಿಒಪಿ ಮೆಮೋವನ್ನು ತಯಾರಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು.
ಅಮೆರಿಕದ ಮಾಧ್ಯಮಗಳಿಂದ "ಕಾಶ್ ಮೆಮೋ" ಎಂದೇ ಕರೆಯಲ್ಪಡುವ ಈ ದಾಖಲೆಯು ರಷ್ಯಾದ ತನಿಖೆಯ ವಿಷಯದಲ್ಲಿ ಪಕ್ಷಪಾತದ ಸಂಘರ್ಷದಲ್ಲಿ ಮಹತ್ವದ ವಿವಾದದ ಬಿಂದುವಾಯಿತು.
44 ವರ್ಷದ ಪಟೇಲ್ ಅವರು ಹಂಗಾಮಿ ರಕ್ಷಣಾ ಕಾರ್ಯದರ್ಶಿಗೆ ಸಿಬ್ಬಂದಿ ಮುಖ್ಯಸ್ಥರಾಗಿ (Chief of Staff) ಟ್ರಂಪ್ ಅವರ ರಾಷ್ಟ್ರೀಯ ಭದ್ರತಾ ನೀತಿಗಳ ಮೇಲೆ ಪ್ರಭಾವ ಬೀರುವುದನ್ನು ಮುಂದುವರಿಸಿದ್ದರು. ಈ ಸಮಯದಲ್ಲಿ, ಅವರು ಉಕ್ರೇನ್ಗೆ ಅನಧಿಕೃತ ಬ್ಯಾಕ್ ಚಾನಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದೂ ಆರೋಪಿಸಲಾಗಿದೆ.
ಎಫ್ಬಿಐ ನಲ್ಲಿ ಸಮಗ್ರ ಸುಧಾರಣೆಗಳನ್ನು ತರಬೇಕೆಂಬ ನಿಲುವನ್ನು ಅವರು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. ಕನ್ಸರ್ವೇಟಿವ್ ಪಕ್ಷದ ಪರವಾಗಿರುವ ಶಾನ್ ರಯಾನ್ ಶೋಗೆ ನೀಡಿದ ಸಂದರ್ಶನದಲ್ಲಿ, ಪಟೇಲ್ ಎಫ್ಬಿಐನ ಗುಪ್ತಚರ ಸಂಗ್ರಹಣಾ ಕಾರ್ಯಾಚರಣೆಗಳನ್ನು ತೆಗೆದುಹಾಕುವುದು ಮತ್ತು ಅದರ ಪ್ರಧಾನ ಕಚೇರಿಯನ್ನು ಮರುಸ್ಥಾಪನೆ ಮಾಡುವುದು ಸೇರಿದಂತೆ ಮಹತ್ವದ ಬದಲಾವಣೆಗಳನ್ನು ಸೂಚಿಸಿದ್ದಾರೆ. ಪಟೇಲ್ ಅವರ ನಾಮನಿರ್ದೇಶನವು ಅಮೆರಿಕದ ಆಡಳಿತ ವ್ಯವಸ್ಥೆಯಲ್ಲಿ ಭಾರತೀಯ-ಅಮೆರಿಕನ್ ಸಮುದಾಯದ ಪ್ರಭಾವ ಹೆಚ್ಚಾಗುತ್ತಿರುವುದರ ಸೂಚನೆಯಾಗಿದೆ.
ಇದನ್ನೂ ಓದಿ : ಜರ್ಮನಿಯಲ್ಲಿ ಕನ್ನಡ ಕಲರವ.. ಬ್ರಾವೋ ಕನ್ನಡ ಬಳಗದಿಂದ ಕನ್ನಡ ಡಿಂಡಿಮ: ಸಪ್ತಸಾಗರದಾಚೆ ರಾಜ್ಯೋತ್ಸವ ಸಂಭ್ರಮ