ಕಜಾನ್(ರಷ್ಯಾ): ರಷ್ಯಾ-ಉಕ್ರೇನ್ ನಡುವಿನ ಸಂಘರ್ಷ ಕೊನೆಗೆ ಸಾಧ್ಯವಿರುವ ಎಲ್ಲ ಸಹಕಾರವನ್ನು ನೀಡಲು ಭಾರತ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ತಿಳಿಸಿದ್ದಾರೆ.
16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾದ ಕಜಾನ್ ನಗರಕ್ಕೆ ಆಗಮಿಸಿರುವ ಮೋದಿ, ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಇದೇ ವೇಳೆ ಉಕ್ರೇನ್ ಸಂಘರ್ಷದ ಬಗ್ಗೆ ಪ್ರಸ್ತಾಪವಾಗಿದ್ದು, ಯುದ್ಧ ನಿಲುಗಡೆಗೆ ಸಹಕಾರ ನೀಡುವುದಾಗಿ ಹೇಳಿದರು.
ತಮ್ಮ ಭಾಷಣದಲ್ಲಿ ಮೋದಿ, "ರಷ್ಯಾ ಮತ್ತು ಉಕ್ರೇನ್ನಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಲು ಭಾರತ ಸಂಪೂರ್ಣ ಬೆಂಬಲ ನೀಡುತ್ತದೆ. ಸಂಘರ್ಷಪೀಡಿತ ಉಭಯ ರಾಷ್ಟ್ರಗಳ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ನಾನು ಮೊದಲೇ ಹೇಳಿದಂತೆ, ಸಮಸ್ಯೆಗಳನ್ನು ಶಾಂತಿಯುತ ರೀತಿಯಲ್ಲಿ ಪರಿಹರಿಸಿಕೊಳ್ಳಬೇಕು ಎಂದು ಭಾವಿಸುತ್ತೇನೆ. ಶಾಂತಿ ಮತ್ತು ಸ್ಥಿರತೆ ಮರಳುವಿಕೆಗಾಗಿ ನಾವು ಸಂಪೂರ್ಣ ಬೆಂಬಲ ನೀಡುವೆವು. ನಮ್ಮೆಲ್ಲಾ ಪ್ರಯತ್ನಗಳು ಮಾನವೀಯತೆಗೆ ಆದ್ಯತೆಯಾಗಿವೆ. ಮುಂದಿನ ದಿನಗಳಲ್ಲಿ, ಸಾಧ್ಯವಿರುವ ಎಲ್ಲ ಸಹಕಾರವನ್ನು ನೀಡಲು ಭಾರತ ಸಿದ್ಧವಾಗಿದೆ" ಎಂದರು.
ಉಕ್ರೇನ್-ರಷ್ಯಾ ನಡುವೆ ಶಾಂತಿ ಸ್ಥಾಪನೆಗಾಗಿ ಚರ್ಚಿಸಲು ಅವಕಾಶವಿದೆ ಎಂದ ಪ್ರಧಾನಿ, ಜುಲೈ ತಿಂಗಳಲ್ಲಿ ಮಾಸ್ಕೋದಲ್ಲಿ ನಡೆದ ಪುಟಿನ್ ಜೊತೆಗಿನ ಮಾತುಕತೆಗಳನ್ನು ಇದೇ ವೇಳೆ ಉಲ್ಲೇಖಿಸಿದರು. ವಾರ್ಷಿಕ ಶೃಂಗಸಭೆಯು ಎರಡೂ ರಾಷ್ಟ್ರಗಳ ನಡುವಿನ ಪ್ರತಿಯೊಂದು ಕ್ಷೇತ್ರದಲ್ಲೂ ಸಹಕಾರವನ್ನು ಬಲಪಡಿಸಲು ಕಾರಣವಾಗಿದೆ ಎಂದು ತಿಳಿಸಿದರು.
ರಷ್ಯಾವು ಬ್ರಿಕ್ಸ್ ಶೃಂಗಸಭೆಯ ಯಶಸ್ವಿ ಅಧ್ಯಕ್ಷತೆ ವಹಿಸಿದ್ದಕ್ಕೆ ಪ್ರಧಾನಿ ಮೋದಿ ಅವರು, ಪುಟಿನ್ ಅವರಿಗೆ ಅಭಿನಂದಿಸಿದರು. ಅನೇಕ ದೇಶಗಳು ಈ ಗುಂಪಿಗೆ ಸೇರಲು ಬಯಸುತ್ತಿವೆ ಎಂದು ಹೇಳಿದರು.
ಇದನ್ನೂ ಓದಿ: ರಷ್ಯಾ ಸೇನೆಯಿಂದ 85 ಭಾರತೀಯರ ಬಿಡುಗಡೆ, ಉಳಿದ 20 ಮಂದಿಗಾಗಿ ಪ್ರಯತ್ನ: ಕೇಂದ್ರ ಸರ್ಕಾರ