ಕೊಲೊಂಬೊ: ಶ್ರೀಲಂಕಾದೊಂದಿಗೆ ಸುಧಾರಿತ ರಕ್ಷಣಾ ಸಾಧನಗಳನ್ನು ಹಂಚಿಕೊಳ್ಳಲು ಭಾರತ ಸಿದ್ಧವಾಗಿದೆ ಎಂದು ಕೊಲೊಂಬೊದಲ್ಲಿರುವ ಭಾರತದ ಹೈಕಮಿಷನರ್ ಸಂತೋಷ್ ಝಾ ತಿಳಿಸಿದರು.
ನಾವು ಕೇವಲ ನಮ್ಮ ದೇಶಕ್ಕೆ ಅಗತ್ಯವಾಗುವಷ್ಟು ಸಾಧನಗಳನ್ನು ಮಾತ್ರ ತಯಾರಿಸುತ್ತಿಲ್ಲ. ಶ್ರೀಲಂಕಾದಂತಹ ಸ್ನೇಹ ಸಹಭಾಗಿತ್ವದ ದೇಶಗಳಿಗೂ ಲಭ್ಯವಾಗುವಷ್ಟು ಸಾಮರ್ಥ್ಯದಲ್ಲಿ ತಯಾರಿ ನಡೆಸುತ್ತಿದ್ದೇವೆ. ಭಾರತದ ರಕ್ಷಣಾ ರಫ್ತು ವಾರ್ಷಿಕವಾಗಿ 2.6 ಬಿಲಿಯನ್ ಡಾಲರ್ ಆಗಿದೆ ಎಂದು ತಿಳಿಸಿದರು.
ಆತ್ಮನಿರ್ಭರ್ ಭಾರತದ ದೃಷ್ಟಿಯಿಂದಾಗಿ ಭಾರತ ರಕ್ಷಣಾ ಉದ್ಯಮದಲ್ಲಿ ಗಮನಾರ್ಹ ಸಾಮರ್ಥ್ಯದ ಅಭಿವೃದ್ಧಿ ಸಾಧಿಸುತ್ತಿದೆ. ರಕ್ಷಣಾ ಉದ್ಯಮದ ಕಾರಿಡಾರ್ ಸ್ಥಾಪನೆಯಂತಹ ಉಪಕ್ರಮದಿಂದಾಗಿ ನೀತಿಗಳು ಮತ್ತು ಚೌಕಟ್ಟುಗಳನ್ನು ಸಾಕಾರ ಮಾಡಲು ನಮ್ಮ ಸರ್ಕಾರ ಉತ್ತೇಜನ ನೀಡುತ್ತಿದೆ. ಭಾರತ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುತ್ತಿದೆ. ಅವಿಷ್ಕಾರಗಳ ಬಳಕೆ ಮತ್ತು ಹೊಸ ಯುಗದ ತಂತ್ರಜ್ಞಾನದ ಮೂಲಕ ಭವಿಷ್ಯ ಸಿದ್ಧತೆ ಸಾಮರ್ಥ್ಯವನ್ನು ನಿರ್ಮಾಣ ಮಾಡುತ್ತಿದೆ.
ಭಾರತದ ರಕ್ಷಣಾ ವಲಯ ಇಂದು ಅಭಿವೃದ್ಧಿ ಹೊಂದಿದ ತಂತ್ರಜ್ಞಾನ, ವಿಶ್ವದರ್ಜೆ ಮಟ್ಟದ ಸಾಧನಗಳಿಂದ ಚಾಲಿತವಾಗಿದೆ. ಅನೇಕ ಸ್ತರದ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳಿಂದ ನೌಕಾ ಹಡಗುಗಳವರೆಗೂ ಈ ಅಭಿವೃದ್ಧಿಯನ್ನು ಕಾಣಬಬಹುದು. ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳಿಂದ ಸೈಬರ್ ಭದ್ರತಾ ಪರಿಹಾರಗಳವರೆಗೆ ಮತ್ತು ಸಣ್ಣ ಶಸ್ತ್ರಾಸ್ತ್ರಗಳಿಂದ ದೊಡ್ಡ-ಕ್ಯಾಲಿಬರ್ ನಿಖರವಾದ ದೀರ್ಘ ಶ್ರೇಣಿಯ ಫಿರಂಗಿ ವ್ಯವಸ್ಥೆಗಳು ನಮ್ಮಲ್ಲಿವೆ.
ಕಳೆದ ಐದು ವರ್ಷದಲ್ಲಿ ರಕ್ಷಣಾ ರಫ್ತಿನಲ್ಲಿ 10 ಪಟ್ಟು ಹೆಚ್ಚಳ ಕಾಣಬಹುದಾಗಿದೆ. ಭಾರತ ರಕ್ಷಣಾ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಸಾಧನವನ್ನು 85ಕ್ಕೂ ಅಧಿಕ ದೇಶಕ್ಕೆ ರಫ್ತು ಮಾಡುತ್ತಿದೆ. ಈ ಕ್ಷೇತ್ರದಲ್ಲಿ 100ಕ್ಕೂ ಹೆಚ್ಚು ದೇಶಿಕ ಘಟಕಗಳು ಕಾರ್ಯ ನಿರ್ವಹಿಸುತ್ತಿದೆ. ಇದೇ ವೇಳೆ ಭಾರತದ ರಾಯಭಾರಿ, ಕೋವಿಡ್ 19 ಸಾಂಕ್ರಾಮಿಕ ಮತ್ತು ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಶ್ರೀಲಂಕಾಕ್ಕೆ ನೀಡಿದ ಬೆಂಬಲ ವಿಸ್ತರಣೆ ಕುರಿತು ತಿಳಿಸಿದರು.
ಶ್ರೀಲಂಕಾಕ್ಕೆ ಭಾರತದ ನೆರವು ನೆರೆಹೊರೆ ಮೊದಲು ಮತ್ತು ಸಾಗರ ಯೋಜನೆ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟಿದೆ ಎಂದು ಹೈಕಮಿಷನರ್ ಪುನರುಚ್ಚರಿಸಿದರು. ನಮಗೆ, ನಿಕಟ ಮತ್ತು ಹತ್ತಿರದ ನೆರೆಹೊರೆಯವರಾಗಿ, ಸಹಕಾರವು ಏಕೈಕ ಆಯ್ಕೆಯಾಗಿದೆ. ಇದು ಆಯ್ಕೆ ಮತ್ತು ಅವಕಾಶದಿಂದ ಮಾತ್ರ ನಡೆಸಲ್ಪಡುವುದಿಲ್ಲ ಎಂದು ತಿಳಿಸಿದರು. (ಐಎಎನ್ಎಸ್)
ಇದನ್ನೂ ಓದಿ: ಭಾರತದಿಂದ ತೈಲ ದರ ಪಾವತಿ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ: ರಷ್ಯಾ ಸ್ಪಷ್ಟನೆ