ಪಾಕಿಸ್ತಾನ: ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸಂಸ್ಥಾಪಕ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರಾವಲ್ಪಿಂಡಿಯ ಅಡಿಯಲ ಜೈಲಿನಲ್ಲಿ 2023ರ ಸೆಪ್ಟೆಂಬರ್ 28 ರಿಂದ 2024ರ ಮೇ 30 ರವರೆಗೆ ಒಟ್ಟು 246 ದಿನಗಳಲ್ಲಿ ಕನಿಷ್ಠ 403 ಜನರೊಂದಿಗೆ 105 ಸಭೆಗಳನ್ನು ನಡೆಸಿದ್ದಾರೆ ಎಂದು ಅಲ್ಲಿನ ಅಧಿಕೃತ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ನೀಡಿದ ಆದೇಶದ ಒಂದು ದಿನದ ಬಳಿಕ ಮಾಜಿ ಪ್ರಧಾನಿಯನ್ನು ಅಟಾಕ್ ಜೈಲಿನಿಂದ ಅಡಿಯಲ ಜೈಲಿಗೆ ಸ್ಥಳಾಂತರಿಸಲಾಯಿತು. ಇಮ್ರಾನ್ ಆಗಸ್ಟ್ 2023 ರಿಂದ ಜೈಲಿನಲ್ಲಿದ್ದಾರೆ. ಸೆಪ್ಟೆಂಬರ್ 28 ರಂದು ಸುಪ್ರೀಂ ಕೋರ್ಟ್‌ಗೆ ಸರ್ಕಾರ ಸಲ್ಲಿಸಿರುವ ಮಾಹಿತಿಯ ಪ್ರಕಾರ, ಇಮ್ರಾನ್ ಖಾನ್ 6 ಜನರನ್ನು ಭೇಟಿ ಮಾಡಲು ಅವಕಾಶ ಹೊಂದಿದ್ದನು. ಆದರೆ, ಇಮ್ರಾನ್ 2023ರ ಅಕ್ಟೋಬರ್‌ನಲ್ಲಿ 12 ಪ್ರತ್ಯೇಕ ಸಭೆಗಳಲ್ಲಿ ಒಟ್ಟು 43 ಜನರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
71 ವರ್ಷದ ಇಮ್ರಾನ್ 2023ರ ನವೆಂಬರ್‌ನಲ್ಲಿ 52 ಜನರೊಂದಿಗೆ 13 ಸಭೆಗಳನ್ನು ನಡೆಸಿದ್ದಾರೆ. ಡಿಸೆಂಬರ್ 2023 ರಲ್ಲಿ 48 ಜನರೊಂದಿಗೆ 12 ಸಭೆಗಳನ್ನು, ಹಾಗೂ ಪ್ರಸಕ್ತ ವರ್ಷದ ಮೊದಲ ತಿಂಗಳಲ್ಲಿ 8 ಸಭೆಗಳಲ್ಲಿ 17 ಜನರನ್ನು ಭೇಟಿ ಮಾಡಿದ್ದಾರೆ ಎಂಬ ಮಾಹಿತಿಯನ್ನು ಡೇಟಾ ತೆರೆದಿಟ್ಟಿದೆ.
ಇನ್ನು ಇತ್ತೀಚಿನ ವರದಿಯ ಪ್ರಕಾರ, ಈ ವರ್ಷದ ಫೆಬ್ರವರಿಯಲ್ಲಿ ಇಮ್ರಾನ್ 74 ಜನರೊಂದಿಗೆ ಮತ್ತು 19 ಸಭೆ, ಅದಾದ ನಂತರದ ತಿಂಗಳಲ್ಲಿ ಖಾನ್ 11 ಸಭೆಗಳಲ್ಲಿ 53 ಜನರನ್ನು, ಏಪ್ರಿಲ್‌ನಲ್ಲಿ 15 ಸಭೆಗಳಲ್ಲಿ 54 ಜನರನ್ನು, ಮೇ ತಿಂಗಳಲ್ಲಿ 13 ಸಭೆಗಳಿಂದ 56 ಜನರನ್ನು ಭೇಟಿ ಮಾಡಿದ್ದಾರೆಂದು ವರದಿಯಾಗಿದೆ.
ಇವುಗಳ ಆಧಾರದಿಂದ ಪಾಕಿಸ್ತಾನದ ಫೆಡರಲ್ ಸರ್ಕಾರವು ಇಮ್ರಾನ್ ಖಾನ್ ಅವರಿಗೆ ಜನರನ್ನು ಭೇಟಿಯಾಗಲು ನೀಡಿದ ಸೌಲಭ್ಯಗಳ ಸಾಕ್ಷ್ಯಚಿತ್ರ ಪುರಾವೆಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದು, ಇಮ್ರಾನ್ ಅವರನ್ನು ಏಕಾಂತ ಸೆರೆಯಲ್ಲಿ ಇರಿಸಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿದೆ. ಅಲ್ಲದೇ, ಈ ಬಗ್ಗೆ ಸತ್ಯಗಳನ್ನು ಪರಿಶೀಲಿಸಲು ಆಯೋಗದ ರೂಪದಲ್ಲಿ ನ್ಯಾಯಾಂಗ ಅಧಿಕಾರಿಯನ್ನು ನೇಮಿಸಬಹುದು ಎಂದು ಸರ್ಕಾರ ಹೇಳಿದೆ.