ಡಮಾಸ್ಕಸ್, ಸಿರಿಯಾ: ಸಿರಿಯಾದ ಹಯಾತ್ ತಹ್ರಿರ್ ಅಲ್-ಶಾಮ್ (ಎಚ್ ಟಿಎಸ್) ನಾಯಕ ಅಹ್ಮದ್ ಅಲ್-ಶಾರಾ ಅವರು ಸಿರಿಯಾದಲ್ಲಿನ ವಿಶ್ವಸಂಸ್ಥೆಯ ವಿಶೇಷ ರಾಯಭಾರಿ ಗೀರ್ ಪೆಡರ್ಸನ್ ಅವರನ್ನು ಡಮಾಸ್ಕಸ್ನಲ್ಲಿ ಭೇಟಿಯಾಗಿದ್ದಾರೆ. ಸಭೆಯಲ್ಲಿ ದೇಶದಲ್ಲಿನ ರಾಜಕೀಯ ಪರಿವರ್ತನೆಯ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಸ್ಥಳೀಯ ಅಲ್-ವತನ್ ಆನ್ ಲೈನ್ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಿರಿಯಾದಲ್ಲಿ ರಾಜಕೀಯ ಪರಿವರ್ತನೆ: ಅಬು ಮೊಹಮ್ಮದ್ ಅಲ್-ಜುಲಾನಿ ಎಂದೂ ಕರೆಯಲ್ಪಡುವ ಅಲ್-ಶಾರಾ, ಸಿರಿಯಾದ ರಾಜಕೀಯ ಪರಿವರ್ತನೆಗೆ ಸಂಬಂಧಿಸಿದಂತೆ, 2015 ರಲ್ಲಿ ಅಂಗೀಕರಿಸಲಾದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ 2254 ಕ್ಕೆ ಈಗ ದೇಶದ ಪ್ರಸ್ತುತ ವಾಸ್ತವ ಸ್ಥಿತಿಗತಿಗಳಿಗೆ ಅನುಗುಣವಾಗಿ ಬದಲಾವಣೆ ತರುವ ಅಗತ್ಯವಿದೆ ಎಂದು ಹೇಳಿದರು. ಸಿರಿಯಾದ ಹೊಸ ನಾಯಕತ್ವ ಮತ್ತು ವಿಕಸನಗೊಳ್ಳುತ್ತಿರುವ ಸಂದರ್ಭಗಳೊಂದಿಗೆ ಹೊಂದಿಕೆಯಾಗುವ ಹೊಸ ವಿಧಾನದ ಅಳವಡಿಕೆಗೆ ಅವರು ಒತ್ತಾಯಿಸಿದರು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ದೇಶದ ಪ್ರಾದೇಶಿಕ ಏಕತೆ ಪುನಃಸ್ಥಾಪಿಸಲು ಪ್ರಯತ್ನ: ಸಿರಿಯನ್ ನಾಗರಿಕರ ಅಗತ್ಯಗಳನ್ನು ಪೂರೈಸಲು, ದೇಶದ ಪ್ರಾದೇಶಿಕ ಏಕತೆಯನ್ನು ಪುನಃಸ್ಥಾಪಿಸಲು ಮತ್ತು ಪುನರ್ ನಿರ್ಮಾಣ ಮತ್ತು ಆರ್ಥಿಕ ಅಭಿವೃದ್ಧಿಗೆ ದಾರಿ ಮಾಡಿಕೊಡಲು ತ್ವರಿತ ಮತ್ತು ಪರಿಣಾಮಕಾರಿ ಸಹಕಾರದ ಮಹತ್ವವನ್ನು ಸಭೆಯಲ್ಲಿ ಅಲ್-ಶಾರಾ ಒತ್ತಿಹೇಳಿದರು. ಬಲವಾದ ಮತ್ತು ದಕ್ಷ ಆಡಳಿತ ವ್ಯವಸ್ಥೆಯನ್ನು ರೂಪಿಸುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರಿ ಇಲಾಖೆಗಳಿಗೆ ಪುನರ್ವಸತಿ ಕಲ್ಪಿಸುವಲ್ಲಿ ಜಾಗರೂಕ, ಉದ್ದೇಶಪೂರ್ವಕ ಕ್ರಮಗಳು ಅಗತ್ಯ ಎಂದು ತಿಳಿಸಿದರು.
ನಿರಾಶ್ರಿತರ ಮರಳುವಿಕೆಗೆ ಪೂರಕ ಮತ್ತು ಸುರಕ್ಷಿತ ವಾತಾವರಣ ಸೃಷ್ಟಿಸುವುದಾಗಿ ಎಚ್ಟಿಎಸ್ ನಾಯಕ ಅಲ್-ಜುಲಾನಿ ಭರವಸೆ ನೀಡಿದರು. ರಾಷ್ಟ್ರದ ಉತ್ತಮ ಭವಿಷ್ಯಕ್ಕಾಗಿ ಸೂಕ್ತ ಕ್ರಮಗಳನ್ನು ಹೆಚ್ಚಿನ ಎಚ್ಚರಿಕೆಯಿಂದ ಜಾರಿಗೆ ತರಲಾಗುತ್ತಿದೆ ಮತ್ತು ವಿಶೇಷ ತಂಡಗಳಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ವಿಶ್ವಸಂಸ್ಥೆ: ದೇಶದಲ್ಲಿ ವೇಗವಾಗಿ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯನ್ನು ವಿಶ್ವಸಂಸ್ಥೆ ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಸಿರಿಯಾದ ಮಾಜಿ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಅವರನ್ನು ಪದಚ್ಯುತಗೊಳಿಸಿದ ನಂತರ ರಾಜಕೀಯ ಪರಿವರ್ತನೆಯ ಮುಂದಿನ ಹೆಜ್ಜೆಗಳನ್ನು ಎದುರು ನೋಡುತ್ತಿದೆ ಎಂದು ಪೆಡರ್ಸನ್ ಹೇಳಿದರು.
ಇದಕ್ಕೂ ಮುನ್ನ ಡಮಾಸ್ಕಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೆಡರ್ಸನ್, ಸಿರಿಯಾದ ಸರ್ಕಾರಿ ಇಲಾಖೆಗಳು ಸುರಕ್ಷಿತ ಪರಿಸ್ಥಿತಿಗಳಲ್ಲಿ ತಮ್ಮ ಕಾರ್ಯಗಳನ್ನು ಸಂಪೂರ್ಣವಾಗಿ ಪುನರಾರಂಭಿಸುವ ಮಹತ್ವವನ್ನು ಒತ್ತಿ ಹೇಳಿದರು. "ನಾವು ಸಿರಿಯಾದ ಎಲ್ಲಾ ವರ್ಗಗಳ ಜನರೊಂದಿಗೆ ಮಾತನಾಡುತ್ತಿದ್ದೇವೆ. ಸೇಡಿನ ಯಾವುದೇ ಕೃತ್ಯಗಳನ್ನು ಬಯಸುವುದಿಲ್ಲ. ಬದಲಾಗಿ, ಅಗತ್ಯ ಭದ್ರತಾ ಕ್ರಮಗಳ ಬೆಂಬಲದೊಂದಿಗೆ ಸಂಸ್ಥೆಗಳು ಕೆಲಸಕ್ಕೆ ಮರಳುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು" ಎಂದು ಅವರು ಹೇಳಿದರು.
ಇದನ್ನೂ ಓದಿ : ಟ್ರಂಪ್ ಅಚ್ಚರಿಯ ನಡೆ: ಪದಗ್ರಹಣ ಸಮಾರಂಭಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್‌ಗೆ ಆಹ್ವಾನ - TRUMP INVITES XI JINPING