ಹೈದರಾಬಾದ್: ಶಾಖದ ಅಲೆಗೆ ತುತ್ತಾಗಿದ್ದ ಚೀನಾದಲ್ಲಿ ಇದೀಗ ಪ್ರವಾಹ ಪರಿಸ್ಥಿತಿ ತಲೆದೋರಿದೆ. ರಸ್ತೆಗಳು, ಮನೆಗಳು, ಕೃಷಿ ಭೂಮಿಗಳು ಜಲಾವೃತಗೊಂಡಿವೆ. ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಹುನಾನ್ ಪ್ರಾಂತ್ಯದಲ್ಲಿ 1.15 ಮಿಲಿಯನ್ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರವಾಹದಿಂದಾಗಿ ಅಪಾರ ಆರ್ಥಿಕ ನಷ್ಟ ಉಂಟಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿರುವುದಾಗಿ ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹುನಾನ್ ಪ್ರಾಂತ್ಯದಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ 95 ಸಾವಿರ ಜನರ ಸ್ಥಳಾಂತರ ಕಾರ್ಯ ನಡೆಸಲಾಗಿದೆ. ಟೈಫೂನ್ ಗೇಮಿ ಪ್ರಾಂತ್ಯದಲ್ಲಿ 95,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಪ್ರಾಂತ್ಯದ ಪ್ರವಾಹ ನಿಯಂತ್ರಣ ಮುಖ್ಯ ಕಚೇರಿಯ ಪ್ರಾಥಮಿಕ ಅಂಕಿಅಂಶಗಳು ತಿಳಿಸಿವೆ. ಹುನಾನ್‌ನಲ್ಲಿ ಮುಂದಿನ ಎರಡು ದಿನ ಕೂಡ ಭಾರೀ ಮಳೆಯಾಗಲಿದ್ದು, ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗುವಂತೆ ತಿಳಿಸಲಾಗಿದೆ.
ಮಯಾನ್ಮಾರ್ನಲ್ಲೂ ಪ್ರವಾಹ: ನೆರೆ ದೇಶ ಮಯನ್ಮಾರ್ನಲ್ಲೂ ಕೂಡ ಜೋರು ಮಳೆಯಾಗುತ್ತಿದೆ. ದಕ್ಷಿಣ ಮಯನ್ಮಾರ್ನಲ್ಲಿ ಕಳೆದೆರಡು ವಾರದಿಂದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಗ್ವೇ ಪ್ರದೇಶವನ್ನು ಪ್ರವಾಹ ಆವರಿಸಿದೆ.
ಆಯೆರ್ವಾಡಿ ಪ್ರದೇಶದ ಪಂತನಾವ್ ಮತ್ತು ಕ್ಯೋನ್‌ಪ್ಯಾವ್ ನಗರಗಳಲ್ಲಿ ನೆರೆ ಪರಿಸ್ಥಿತಿ ಇದೆ. ಅಯೆರ್ವಾಡಿಯಲ್ಲಿ ಜುಲೈ 18ರಿಂದ ಸುರಿಯುತ್ತಿರುವ ಜಡಿಮಳೆಗೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. 113 ಶಾಲೆಗಳನ್ನು ಬಂದ್ ಮಾಡಲಾಗಿದೆ. ಪ್ರವಾಹಕ್ಕ ಸಂಕಷ್ಟಕ್ಕೊಳಗಾದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ಸಾಗಿದೆ.
ವಿಯೆಟ್ನಾಂನಲ್ಲಿ ಭೂಕುಸಿತ: ವಿಯೆಟ್ನಾಂನ ಉತ್ತರ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಆರು ಮಂದಿ ಅಸುನೀಗಿದ್ದಾರೆ. ಹಾ ಜಿಯಂಗ್ ಪ್ರಾಂತ್ಯದಲ್ಲಿ ಭೂಕುಸಿತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಸುಮಾರು 82 ಮನೆಗಳು ಹಾನಿಗೊಂಡಿದ್ದು, 71 ಹೆಕ್ಟೇರ್ ಪ್ರದೇಶದಲ್ಲಿದ್ದ ಭತ್ತ ನಾಶವಾಗಿದೆ. ಮುಂದಿನ ಕೆಲವು ದಿನಗಳೂ ಕೂಡ ಉತ್ತರ ಪ್ರಾಂತ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಇಲ್ಲಿನ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.(ಐಎಎನ್ಎಸ್)
ಇದನ್ನೂ ಓದಿ: ಅಮೆರಿಕದ ವನ್ಯಜೀವಿಗಳಲ್ಲಿ ವ್ಯಾಪಕ ಪ್ರಮಾಣದ ಕೋವಿಡ್ ಸೋಂಕು ಪತ್ತೆ