ಗಾಜಾ: ಗಾಜಾ ಪಟ್ಟಿಯಲ್ಲಿ ಕದನ ವಿರಾಮ ಅಥವಾ ಕೈದಿಗಳ ವಿನಿಮಯ ಒಪ್ಪಂದ ಕುರಿತಂತೆ ಇಸ್ರೇಲ್ನೊಂದಿಗೆ ಯಾವುದೇ ಮಾತುಕತೆ ನಡೆಸಲ್ಲ ಎಂದು ಹಮಾಸ್ ಮಧ್ಯವರ್ತಿಗಳಿಗೆ ತಿಳಿಸಿದೆ ಎಂದು ವರದಿಯಾಗಿದೆ. ಗಾಜಾದ ದಕ್ಷಿಣದ ತುದಿಯಲ್ಲಿರುವ ರಫಾ ನಗರದ ಮೇಲೆ ಭಾನುವಾರ ರಾತ್ರಿ ಇಸ್ರೇಲ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಹಮಾಸ್ ಈ ನಿರ್ಧಾರ ತಳೆದಿದೆ.
"ರಫಾದ ವಾಯುವ್ಯದಲ್ಲಿ ಸ್ಥಳಾಂತರಗೊಂಡ ನಾಗರಿಕರನ್ನು ಹೊಂದಿರುವ ಡೇರೆಗಳ ಮೇಲೆ ಇಸ್ರೇಲ್ ಸೇನೆ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಸ್ರೇಲ್ ದಾಳಿಯಲ್ಲಿ ಡಜನ್ಗಟ್ಟಲೆ ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ" ಎಂದು ಹಮಾಸ್ ತಿಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಾತುಕತೆಗಳನ್ನು ಪುನಾರಂಭಿಸುವ ಬಗ್ಗೆ ಈಜಿಪ್ಟ್ ಅಥವಾ ಕತಾರ್ನ ಮಧ್ಯವರ್ತಿಗಳಿಂದ ಹಮಾಸ್ ನಾಯಕತ್ವಕ್ಕೆ ಯಾವುದೇ ಅಧಿಕೃತ ಅಧಿಸೂಚನೆ ಕೂಡ ಬಂದಿಲ್ಲ ಎಂದು ಮೂಲಗಳು ಸೋಮವಾರ ತಿಳಿಸಿವೆ. ಗಾಜಾದ ರಫಾ ನಗರದ ಬಳಿ ಸ್ಥಳಾಂತರಗೊಂಡ ಜನತೆ ವಾಸಿಸುವ ಡೇರೆಗಳ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಕನಿಷ್ಠ 45 ಪ್ಯಾಲೆಸ್ಟೈನಿಯರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಅಧಿಕಾರಿಗಳು ಸೋಮವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಮಾಸ್ನ ಹಿರಿಯ ಅಧಿಕಾರಿ ಒಸಾಮಾ ಹಮ್ದಾನ್ ಸೋಮವಾರ ಬೈರುತ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಧ್ಯವರ್ತಿಗಳಿಗೆ ನಾವು ತಿಳಿಸಿದ ನಮ್ಮ ಷರತ್ತುಗಳನ್ನು ಒಪ್ಪದಿದ್ದರೆ ಇಸ್ರೇಲ್ನ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಿಲ್ಲ" ಎಂದು ಹೇಳಿದರು. ಶಾಶ್ವತ ಕದನ ವಿರಾಮ ಸೇರಿದಂತೆ ನಮ್ಮ ಇತರ ಷರತ್ತುಗಳು ಹಿಂದಿನಂತೆಯೇ ಇವೆ ಎಂದು ಹಮ್ದಾನ್ ತಿಳಿಸಿದರು.
ನಾಗರಿಕರ ಸಾವು ವಿಷಾದನೀಯ ಎಂದ ಇಸ್ರೇಲ್ ಪ್ರಧಾನಿ: ರಫಾದಲ್ಲಿ ಭಾನುವಾರ ನಡೆದ ದಾಳಿಯಲ್ಲಿ ಹಲವಾರು ನಿರಾಶ್ರಿತ ಪ್ಯಾಲೆಸ್ಟೈನಿಯರು ಮೃತಪಟ್ಟಿರುವುದು ವಿಷಾದನೀಯ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಸೋಮವಾರ ಇಸ್ರೇಲ್ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ನೆತನ್ಯಾಹು, ಗಾಜಾ ಹೋರಾಟದಲ್ಲಿ ಸಿಲುಕಿರುವ ನಾಗರಿಕರನ್ನು ರಕ್ಷಿಸಲು ಇಸ್ರೇಲ್ ಸಾಧ್ಯವಿರುವ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು. ಆದಾಗ್ಯೂ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಯುದ್ಧದಲ್ಲಿ ಭಾಗಿಯಾಗದ ಸಾಮಾನ್ಯ ನಾಗರಿಕರಿಗೆ ಆದಷ್ಟೂ ಅಪಾಯವಾಗದಂತೆ ಎಚ್ಚರಿಕೆ ವಹಿಸಿವೆ ಎಂದು ತಿಳಿಸಿದ ಅವರು ಹಮಾಸ್ ವಿರುದ್ಧದ ಸಂಘರ್ಷವನ್ನು ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಿದರು.
ಇದನ್ನೂ ಓದಿ : ಇಸ್ರೇಲ್ ಮೇಲೆ ಅಕ್ಟೋಬರ್ 7ರ ಹಮಾಸ್ ದಾಳಿಗೆ ಇರಾನ್, ಚೀನಾ, ರಷ್ಯಾ ಕಾರಣ: ನಿಕ್ಕಿ ಹ್ಯಾಲೆ ಆರೋಪ - Nikki Haley