ಟೆಲ್ ಅವೀವ್( ಇಸ್ರೇಲ್): ಹಮಾಸ್ ಜೊತೆ ಪರೋಕ್ಷ ಮಧ್ಯಸ್ಥಿಕೆ ಮಾತುಕತೆ ನಡೆಸಲು ಮೊಸ್ಸಾದ್ ಮುಖ್ಯಸ್ಥ ಡೇವಿಡ್ ಬಾರ್ನಿಯಾ ನೇತೃತ್ವದ ಇಸ್ರೇಲ್ನ ಹಿರಿಯ ಅಧಿಕಾರಿಗಳ ನಿಯೋಗ ಸೋಮವಾರ ಕೈರೋ ತಲುಪಲಿದೆ. ಅಲ್ಲದೆ ಹಮಾಸ್ ನಿಯೋಗ ಕೂಡ ಸೋಮವಾರ ಕೈರೋಗೆ ಬರಲಿದೆ. ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಒತ್ತೆಯಾಳುಗಳ ಬಿಡುಗಡೆ ಮತ್ತು ತಾತ್ಕಾಲಿಕ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಕತಾರ್ ಮತ್ತು ಈಜಿಪ್ಟ್ನ ಮಧ್ಯಸ್ಥಿಕೆಯಲ್ಲಿ ಮಾತುಕತೆಗಳು ನಡೆಯಲಿವೆ.
ಅರಬ್ ಮಾಧ್ಯಮಗಳ ಪ್ರಕಾರ, ಕನಿಷ್ಠ 33 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ತಾತ್ವಿಕವಾಗಿ ಒಪ್ಪಿಕೊಂಡಿದೆ. ಒತ್ತೆಯಾಳುಗಳಲ್ಲಿ ಮಹಿಳೆಯರು, ವೃದ್ಧರು, ರೋಗಿಗಳು ಮತ್ತು ಐವತ್ತು ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಸೇರಿದ್ದಾರೆ. ಇದಕ್ಕೆ ಬದಲಾಗಿ ಇಸ್ರೇಲಿ ಜೈಲುಗಳಲ್ಲಿರುವ ಪ್ಯಾಲೆಸ್ಟೈನ್ ಕೈದಿಗಳನ್ನು ಬಿಡುಗಡೆ ಮಾಡುವಂತೆ ಹಮಾಸ್ ಒತ್ತಾಯಿಸಿದೆ. ಇದರಲ್ಲಿ ಕೊಲೆ ಸೇರಿದಂತೆ ಗಂಭೀರ ಅಪರಾಧಗಳಿಗಾಗಿ ಬಂಧಿಸಲ್ಪಟ್ಟವರು ಕೂಡ ಸೇರಿದ್ದಾರೆ.
ಗಾಜಾ ಪಟ್ಟಿಯಿಂದ ಸೇನಾಪಡೆಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಮಧ್ಯವರ್ತಿಗಳಿಗೆ ತಿಳಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯದ ಮೂಲಗಳು ಐಎಎನ್ಎಸ್ಗೆ ತಿಳಿಸಿವೆ. ಒತ್ತೆಯಾಳುಗಳ ಬಿಡುಗಡೆಯಿಂದ ನುಣುಚಿಕೊಳ್ಳದಂತೆ ಇಸ್ರೇಲ್ ಈಗಾಗಲೇ ಹಮಾಸ್ಗೆ ಸೂಚಿಸಿದೆ. ಒಂದು ವೇಳೆ ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಒಪ್ಪದಿದ್ದಲ್ಲಿ ರಫಾದಲ್ಲಿ ನೆಲದ ಕಾರ್ಯಾಚರಣೆ ಆರಂಭಿಸುವುದು ಅನಿವಾರ್ಯವಾಗುತ್ತದೆ ಎಂದು ಇಸ್ರೇಲ್ ಎಚ್ಚರಿಕೆ ನೀಡಿದೆ.
ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಈಗಾಗಲೇ ತನ್ನ ಯುದ್ಧ ಪರಿಣಿತ ನಹಾಲ್ ಬ್ರಿಗೇಡ್ ಅನ್ನು ರಫಾ ಪ್ರದೇಶದಲ್ಲಿ ನಿಯೋಜಿಸಿದೆ ಮತ್ತು ನೆಲದ ಕಾರ್ಯಾಚರಣೆ ಆರಂಭಕ್ಕೂ ಮುನ್ನ ಕೈರೋದಲ್ಲಿ ನಡೆಯುವ ಮಾತುಕತೆಗಳ ಫಲಿತಾಂಶಕ್ಕಾಗಿ ಕಾಯುತ್ತಿದೆ.
ಪರಿಹಾರ ಕಾರ್ಯಾಚರಣೆ ಪುನಾರಂಭಿಸಿದ ವರ್ಲ್ಡ್ ಸೆಂಟ್ರಲ್ ಕಿಚನ್ : ಗಾಜಾ ಪಟ್ಟಿಯಲ್ಲಿ ತನ್ನ ಪರಿಹಾರ ಕಾರ್ಯಗಳನ್ನು ಪುನರಾರಂಭಿಸುವುದಾಗಿ ಅಮೆರಿಕ ಮೂಲದ ಸಮಾಜ ಸೇವಾ ಸಂಸ್ಥೆ ವರ್ಲ್ಡ್ ಸೆಂಟ್ರಲ್ ಕಿಚನ್ (ಡಬ್ಲ್ಯುಸಿಕೆ) ಘೋಷಿಸಿದೆ. ಇಸ್ರೇಲ್ನ ವೈಮಾನಿಕ ದಾಳಿಯಲ್ಲಿ ಏಳು ಸಿಬ್ಬಂದಿ ಸಾವಿಗೀಡಾದ ನಂತರ ವರ್ಲ್ಡ್ ಸೆಂಟ್ರಲ್ ಕಿಚನ್ ಗಾಜಾದಲ್ಲಿ ಒಂದು ತಿಂಗಳ ಹಿಂದೆ ತನ್ನ ಪರಿಹಾರ ಕಾರ್ಯಾಚರಣೆಗಳನ್ನು ನಿಲ್ಲಿಸಿತ್ತು. ಉತ್ತರ ಗಾಜಾಗೆ ಆಹಾರ ಸಹಾಯ ತಲುಪಿಸುವುದು ತುರ್ತು ಅಗತ್ಯವಾಗಿದೆ ಎಂದಿರುವ ಸಂಸ್ಥೆ, ಸುಮಾರು 8 ಮಿಲಿಯನ್ ಊಟಕ್ಕೆ ಸಮನಾದ ಆಹಾರ ಸಾಮಗ್ರಿಗಳನ್ನು ಹೊತ್ತ ತನ್ನ 276 ಟ್ರಕ್ಗಳು ರಫಾ ಗಡಿ ದಾಟುವ ಮೂಲಕ ಗಾಜಾ ಪ್ರವೇಶಿಸಲು ಸಿದ್ಧವಾಗಿವೆ ಎಂದು ತಿಳಿಸಿದೆ.
ಇದನ್ನೂ ಓದಿ : ಇರಾಕ್ನಲ್ಲಿ ಸಲಿಂಗಕಾಮಕ್ಕೆ ನಿರ್ಬಂಧ: ನಿಯಮ ಉಲ್ಲಂಘಿಸಿದರೆ 15 ವರ್ಷ ಜೈಲು ಶಿಕ್ಷೆ - HOMOSEXUALITY