ಟೆಹ್ರಾನ್(ಇರಾನ್): ಇರಾನ್ ಮತ್ತು ಪಾಕಿಸ್ತಾನದ ನಡುವೆ ಮತ್ತೆ ಉದ್ವಿಗ್ನ ವಾತಾವರಣ ಉಂಟಾಗಿದೆ. ಆಗ್ನೇಯ ಇರಾನ್‌ನಲ್ಲಿ ಬಂದೂಕುಧಾರಿಗಳು 9 ಪಾಕ್ ಜನರನ್ನು ಹತ್ಯೆ ಮಾಡಿದ್ದಾರೆ. ಇರಾನ್‌ನಲ್ಲಿರುವ ಪಾಕ್ ರಾಯಭಾರಿ ಮೃತರನ್ನು ಪಾಕಿಸ್ತಾನಿ ಪ್ರಜೆಗಳೆಂದು ಗುರುತಿಸಿರುವುದಾಗಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಇರಾನ್‌ನ ಮೆಹರ್ ಸುದ್ದಿ ಸಂಸ್ಥೆಯ ವರದಿಯಂತೆ, "ಸಾಕ್ಷಿಗಳ ಪ್ರಕಾರ ಶನಿವಾರ ಸಿಸ್ತಾನ್-ಬಲುಚೆಸ್ತಾನ್ ಪ್ರಾಂತ್ಯದ ಸರ್ವಾನ್ ನಗರದ ಸಿರ್ಕನ್ ನೆರೆಹೊರೆಯ ಮನೆಯೊಂದರಲ್ಲಿ ಶಸ್ತ್ರಸಜ್ಜಿತ ಅಪರಿಚಿತರು ಒಂಬತ್ತು ಮಂದಿಯನ್ನು ಕೊಂದಿದ್ದಾರೆ" ಎಂದು ವರದಿ ಮಾಡಿದೆ.
ಈವರೆಗೆ ಯಾವುದೇ ಗುಂಪು ಹತ್ಯೆಯ ಹೊಣೆ ಹೊತ್ತುಕೊಂಡಿಲ್ಲ ಎಂದು ಅಲ್ಲಿನ ಮಾಧ್ಯಮಗಳು ತಿಳಿಸಿವೆ. ಟೆಹ್ರಾನ್‌ನಲ್ಲಿರುವ ಪಾಕಿಸ್ತಾನಿ ರಾಯಭಾರಿ ಮುಹಮ್ಮದ್ ಮುದಾಸಿರ್ ಟಿಪ್ಪು ಟ್ವಿಟರ್‌ನಲ್ಲಿ, "ಸರವನ್‌ನಲ್ಲಿ 9 ಪಾಕಿಸ್ತಾನಿಗಳ ಭೀಕರ ಹತ್ಯೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದೇನೆ. ರಾಯಭಾರ ಕಚೇರಿ ದುಃಖಿತ ಕುಟುಂಬಗಳಿಗೆ ಸಂಪೂರ್ಣ ಬೆಂಬಲ ನೀಡುತ್ತದೆ. ಈ ವಿಷಯದಲ್ಲಿ ಸಂಪೂರ್ಣ ಸಹಕಾರ ನೀಡುವಂತೆ ಇರಾನ್‌ಗೆ ಮನವಿ ಮಾಡಿದ್ದೇವೆ" ಎಂದು ಹೇಳಿದ್ದಾರೆ.
ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ಮುಮ್ತಾಜ್ ಜಹ್ರಾ ಬಲೂಚ್ ಈ ದಾಳಿಯನ್ನು, "ಭಯಾನಕ ಮತ್ತು ಹೇಯ" ಎಂದು ಖಂಡಿಸಿದ್ದಾರೆ. ಘಟನೆಯ ತನಿಖೆ ಮತ್ತು ಅಪರಾಧದಲ್ಲಿ ಭಾಗಿಯಾದವರನ್ನು ಹೊಣೆಗಾರರನ್ನಾಗಿ ಮಾಡುವಂತೆಯೂ ಅವರು ಇರಾನ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
"ಸಾಧ್ಯವಾದಷ್ಟು ಬೇಗ ಮೃತದೇಹಗಳನ್ನು ವಶಕ್ಕೆ ಪಡೆದು ಸ್ವಗ್ರಾಮಕ್ಕೆ ಕಳಿಸುವ ಪ್ರಯತ್ನ ಮಾಡಲಾಗುತ್ತದೆ" ಎಂದು ಇರಾನ್‌ನಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿ ಹೇಳಿದೆ. ಇಂತಹ ಹೇಡಿತನದ ದಾಳಿಗಳು ಪಾಕಿಸ್ತಾನವನ್ನು ಭಯೋತ್ಪಾದನೆಯ ವಿರುದ್ಧದ ಹೋರಾಟದ ಸಂಕಲ್ಪದಿಂದ ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಇಸ್ರೇಲ್-ಹಮಾಸ್ ಯುದ್ಧದಿಂದಾಗಿ ಈಗಾಗಲೇ ಪ್ರಾದೇಶಿಕ ಉದ್ವಿಗ್ನತೆ ಹೆಚ್ಚಿಸಿದ್ದ ಉಭಯ ದೇಶಗಳ ನಡುವೆ ಹಂಚಿಹೋಗಿರುವ ಬಲೂಚಿಸ್ತಾನದ ಮುಕ್ತ ಗಡಿ ಪ್ರದೇಶದಲ್ಲಿ ಇರಾನ್ ಮಿಲಿಟರಿ ಕಾರ್ಯಾಚರಣೆಯ ನಂತರ ಈ ದಾಳಿ ನಡೆದಿದೆ. ಶಿಯಾ ಬಹುಸಂಖ್ಯಾತ ಇರಾನ್‌ನಲ್ಲಿ ಕೆಲವು ಪ್ರಧಾನವಾಗಿ ಸುನ್ನಿ ಮುಸ್ಲಿಂ ಪ್ರಾಂತ್ಯಗಳಲ್ಲಿ ಒಂದಾದ ಸಿಸ್ತಾನ್-ಬಲೂಚಿಸ್ತಾನ್, ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಗ್ಯಾಂಗ್‌ಗಳು ಮತ್ತು ಬಲೂಚಿ ಜನಾಂಗೀಯ ಅಲ್ಪಸಂಖ್ಯಾತರ ಬಂಡುಕೋರರು ಮತ್ತು ಜಿಹಾದಿಗಳನ್ನು ಒಳಗೊಂಡಿದ್ದರಿಂದ ಇಲ್ಲಿ ನಿರಂತರ ಅಶಾಂತಿ ನಡೆಯುತ್ತಿದೆ.
ಪಾಕಿಸ್ತಾನದ ಮೇಲೆ ಇರಾನ್ ದಾಳಿ: ಜನವರಿ 18ರಂದು ಇರಾನ್ ತನ್ನ ಭೂಪ್ರದೇಶದ ಮೇಲೆ ದಾಳಿ ಪ್ರಾರಂಭಿಸಿದ ಎರಡು ದಿನಗಳ ನಂತರ ಪಾಕಿಸ್ತಾನವು ಇರಾನ್‌ನಲ್ಲಿ "ಭಯೋತ್ಪಾದಕ ನೆಲೆಗಳ" ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಇತ್ತೀಚಿನ ತಿಂಗಳುಗಳಲ್ಲಿ ಇರಾನ್‌ನಲ್ಲಿ ಹಲವಾರು ಮಾರಣಾಂತಿಕ ದಾಳಿಗಳನ್ನು ನಡೆಸಿರುವ ಮತ್ತು ಇರಾನ್‌ನಿಂದ "ಭಯೋತ್ಪಾದಕ" ಸಂಘಟನೆ ಎಂದು ಕಪ್ಪುಪಟ್ಟಿಗೆ ಸೇರಿಸಿರುವ ಜಿಹಾದಿಸ್ಟ್ ಗುಂಪು ಜೈಶ್ ಅಲ್-ಅದ್ಲ್ ಅನ್ನು ಇರಾನ್ ಗುರಿಯಾಗಿಸಿಕೊಂಡಿದೆ ಎಂದು ಟೆಹ್ರಾನ್ ಹೇಳಿದೆ. ಈ ಘಟನೆಯಲ್ಲಿ ಕನಿಷ್ಠ ಇಬ್ಬರು ಮಕ್ಕಳನ್ನು ಹತ್ಯೆ ಮಾಡಲಾಗಿದೆ ಎಂದು ಪಾಕ್ ಆಕ್ರೋಶ ವ್ಯಕ್ತಪಡಿಸಿತ್ತು. ಬಳಿಕ ಟೆಹ್ರಾನ್‌ನಿಂದ ತನ್ನ ರಾಯಭಾರಿಯನ್ನೂ ಪಾಕ್ ಹಿಂತೆಗೆದುಕೊಂಡಿತ್ತು.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ಗೆ ಭಾರಿ ದಂಡ: 'ಅವರಿಗೆ ನೀವು 692 ಕೋಟಿ ಕಟ್ಟಲೇ ಬೇಕು’