ಗಾಜಾ: ಉತ್ತರ ಗಾಜಾದಲ್ಲಿ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿ ಮೂವರು ಮಕ್ಕಳಲ್ಲಿ ಓರ್ವ ಮಗು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದೆ ಮತ್ತು ಆಹಾರ ಕ್ಷಾಮದ ಆತಂಕ ಎದುರಾಗಿದೆ ಎಂದು ಪ್ಯಾಲೆಸ್ಟೈನ್ ಎನ್ಕ್ಲೇವ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವಸಂಸ್ಥೆಯ ಪ್ರಮುಖ ಅಂಗ ಸಂಸ್ಥೆ ತಿಳಿಸಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
"ಮಕ್ಕಳಲ್ಲಿ ಅಪೌಷ್ಟಿಕತೆ ವೇಗವಾಗಿ ಹರಡುತ್ತಿದೆ ಮತ್ತು ಗಾಜಾದಲ್ಲಿ ಇದು ಆತಂಕಕಾರಿ ಮಟ್ಟವನ್ನು ತಲುಪುತ್ತಿದೆ" ಎಂದು ಪ್ಯಾಲೆಸ್ಟೈನ್ ನಿರಾಶ್ರಿತರ ಯುಎನ್ ರಿಲೀಫ್ ಆ್ಯಂಡ್ ವರ್ಕ್ಸ್ ಏಜೆನ್ಸಿ (ಯುಎನ್ಆರ್ಡಬ್ಲ್ಯೂಎ) ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದೆ.
ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ವಿನಾಶಕಾರಿ ದಾಳಿಯ ನಂತರ, ಐದು ತಿಂಗಳ ಹಿಂದೆ ಗಾಜಾದಲ್ಲಿ ಇಸ್ರೇಲ್ ಆರಂಭಿಸಿದ ವಾಯು ಮತ್ತು ನೆಲದ ಕಾರ್ಯಾಚರಣೆಯಲ್ಲಿ ಗಾಜಾದ 2.3 ಮಿಲಿಯನ್ ಜನಸಂಖ್ಯೆಯ ಪೈಕಿ ಬಹುತೇಕರು ಸ್ಥಳಾಂತರಗೊಂಡಿದ್ದಾರೆ ಮತ್ತು ಪ್ರದೇಶದಲ್ಲಿ ಹಿಂದೆಂದೂ ಕಾಣದಂಥ ಮಾನವೀಯ ಬಿಕ್ಕಟ್ಟು ಎದುರಾಗಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಪ್ಯಾಲೆಸ್ಟೈನ್ಗೆ ಹೆಚ್ಚಿನ ಪ್ರಮಾಣದ ಪರಿಹಾರ ಸಾಮಗ್ರಿಗಳು ತಲುಪಲು ಸಹಕಾರ ನೀಡುವಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಇಸ್ರೇಲ್ಗೆ ಒತ್ತಾಯಿಸಿವೆ. ಗಡಿಗಳನ್ನು ಬಂದ್ ಮಾಡುವುದು, ಸಾರಿಗೆ ಮೇಲಿನ ನಿರ್ಬಂಧ ಮತ್ತು ಗಾಜಾದೊಳಗಿನ ಅಶಾಂತಿ ಮುಂತಾದ ಕಾರಣಗಳಿಂದ ಪ್ಯಾಲೆಸ್ಟೈನ್ಗೆ ಪರಿಹಾರ ಸಾಮಗ್ರಿಗಳನ್ನು ತಲುಪಿಸಲು ತೀವ್ರವಾದ ಅಡೆತಡೆಗಳು ಎದುರಾಗುತ್ತಿವೆ ಎಂದು ಯುಎನ್ಆರ್ಡಬ್ಲ್ಯೂಎ ಹೇಳಿದೆ.
ಗಾಜಾದಲ್ಲಿನ ಜನತೆಗೆ ಪರಿಹಾರ ತಲುಪಿಸಲು ತಾನು ಯಾವುದೇ ಅಡ್ಡಿ ಉಂಟು ಮಾಡುತ್ತಿಲ್ಲ ಎಂದು ಹೇಳಿರುವ ಇಸ್ರೇಲ್, ಯುಎನ್ಆರ್ಡಬ್ಲ್ಯೂಎ ದ ಅಸಮರ್ಥತೆಯಿಂದಲೇ ಪರಿಹಾರ ಸಾಮಗ್ರಿಗಳು ವೇಗವಾಗಿ ಸಂತ್ರಸ್ತರಿಗೆ ತಲುಪುತ್ತಿಲ್ಲ ಎಂದು ಆರೋಪಿಸಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಗಾಜಾಕ್ಕೆ ವಾಯು ಮತ್ತು ಸಮುದ್ರ ಮಾರ್ಗದ ಮೂಲಕ ಪರಿಹಾರ ಸಾಮಗ್ರಿಗಳನ್ನು ತಲುಪಿಸಲಾಗುತ್ತಿದೆ. ಆದರೆ ಭೂಮಿಯ ಮೂಲಕ ಪರಿಹಾರ ತಲುಪಿಸುವುದಕ್ಕೆ ಇವು ಸಾಟಿಯಾಗಲಾರವು ಎಂದು ಸಹಾಯ ಸಂಸ್ಥೆಗಳು ಹೇಳಿವೆ.
ಯುಎನ್ಆರ್ಡಬ್ಲ್ಯೂಎ ಹಮಾಸ್ನೊಂದಿಗೆ ಶಾಮೀಲಾಗಿದೆ ಎಂದು ಇಸ್ರೇಲ್ ಆರೋಪಿಸಿದೆ. ಅಕ್ಟೋಬರ್ 7ರ ದಾಳಿಯಲ್ಲಿ ಅದರ ಕೆಲ ಸಿಬ್ಬಂದಿ ಸದಸ್ಯರು ಭಾಗವಹಿಸಿದ್ದು, ಏಜೆನ್ಸಿಯನ್ನು ಪರಿಹಾರ ಕಾರ್ಯಾಚರಣೆಗಳಿಂದ ಹೊರಗಿಡುವಂತೆ ಕರೆ ನೀಡಿದೆ. ಈ ಆರೋಪಗಳ ಹಿನ್ನೆಲೆಯಲ್ಲಿ ಹಲವಾರು ಪ್ರಮುಖ ದಾನಿಗಳು ಯುಎನ್ಆರ್ಡಬ್ಲ್ಯೂಎಗೆ ನೀಡುತ್ತಿದ್ದ ಧನಸಹಾಯವನ್ನು ಸ್ಥಗಿತಗೊಳಿಸಿದ್ದಾರೆ.
ಇದನ್ನೂ ಓದಿ: ರಷ್ಯಾದ ಸಾರ್ವಭೌಮತೆಗೆ ಧಕ್ಕೆ ಬಂದರೆ ಪರಮಾಣು ಬಾಂಬ್ ಬಳಕೆಗೆ ಸಿದ್ಧ: ಪುಟಿನ್ ಎಚ್ಚರಿಕೆ