ಮ್ಯಾಡ್ರಿಡ್,ಸ್ಪೇನ್: ದೇಶದ ಪೂರ್ವ ಮತ್ತು ಆಗ್ನೇಯ ಭಾಗಗಳಲ್ಲಿನ ವೆಲೆನ್ಸಿಯಾ, ಕ್ಯಾಸ್ಟಿಲ್ಲಾ-ಲಾ ಮಂಚ ಮತ್ತು ಆಂಡಲೂಸಿಯಾ ಪ್ರದೇಶಗಳಲ್ಲಿ 205 ಜನರು ಸಾವನ್ನಪ್ಪಿದ್ದಾರೆ. ಮಾರಣಾಂತಿಕ ಪ್ರವಾಹದಿಂದ ಸ್ಪೇನ್ ಭಾರಿ ನಷ್ಟ ಅನುಭವಿಸಿದ್ದು, ರಾಷ್ಟ್ರೀಯ ವಿಕೋಪದಿಂದ ತತ್ತರಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ವಿಡಿಯೋಗಳು ಅಲ್ಲಿನ ಪ್ರವಾಹದ ಭೀಕರತೆ ತೋರಿಸುತ್ತಿವೆ. ಕಾರುಗಳನ್ನು ಆಟಿಕೆಗಳಂತೆ ರಾಶಿ ಹಾಕಿರುವುದು ಕಂಡು ಬಂದಿದ್ದು, ಭಾರಿ ವಿನಾಶಕ್ಕೆ ಸಾಕ್ಷಿ ಒದಗಿಸಿದಂತಿದೆ. ಜನರು ಆಶ್ರಯ ಪಡೆಯಲು ತಮ್ಮ ಮನೆಗಳು ಮತ್ತು ಕಾರುಗಳ ಮೇಲ್ಛಾವಣಿಗಳ ಮೇಲೆ ಹತ್ತಿ ನಿಂತಿರುವ ದೃಶ್ಯಗಳು ಕಂಡಿ ಬಂದಿವೆ. ಸೇತುವೆಗಳು, ರೈಲ್ವೆ ಸುರಂಗಗಳು ಕುಸಿದಿದ್ದು, ಜಮೀನುಗಳು ಜೌಗು ಹಿಡಿದಿವೆ.
ಸೆಂಟರ್ ಫಾರ್ ಆರ್ಡಿನೇಟೆಡ್ ಮತ್ತು ಇಂಟಿಗ್ರೇಟೆಡ್ ಆಪರೇಷನ್ಸ್ ವರದಿಯ ಪ್ರಕಾರ ಬುಧವಾರ ಬೆಳಗ್ಗೆ ಅಧಿಕೃತ ಸಾವಿನ ಸಂಖ್ಯೆ 205 ಕ್ಕೆ ಏರಿದೆ, ವೇಲೆನ್ಸಿಯಾ ಪ್ರದೇಶದಲ್ಲಿ 202 ಸಾವುಗಳು, ಕ್ಯಾಸ್ಟಿಲ್ಲಾ-ಲಾ ಮಂಚಾದಲ್ಲಿ ಎರಡು ಮತ್ತು ಆಂಡಲೂಸಿಯಾದಲ್ಲಿ ಒಂದು ಸಾವು ಸಂಭವಿಸಿದೆ ಎಂದು ವರದಿ ಮಾಡಿದೆ.
ಫೆರಿಯಾ ಡಿ ವೇಲೆನ್ಸಿಯಾ ಪ್ರದರ್ಶನ ಕೇಂದ್ರವನ್ನು ತಾತ್ಕಾಲಿಕ ಶವಾಗಾರವಾಗಿ ಬಳಸಲಾಗಿದೆ. ಪ್ರವಾಹದಲ್ಲಿ ಇನ್ನೂ ಹಲವು ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. 1,900 ಜನರು ನಾಪತ್ತೆಯಾಗಿದ್ದಾರೆ ಎಂದು ಸ್ಪ್ಯಾನಿಷ್ ಪತ್ರಿಕೆ Eldiario.es ಶುಕ್ರವಾರ ವರದಿ ಮಾಡಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಪ್ರತ್ಯಕ್ಷದರ್ಶಿಗಳು ತಮ್ಮ ಕಾರುಗಳನ್ನು ಉಳಿಸಲು ಅನೇಕ ಜನರು ಭೂಗತ ಗ್ಯಾರೇಜ್‌ಗಳ ಮೊರೆ ಹೋಗಿದ್ದಾರೆ. ಪ್ರವಾಹದ ಸಮಯದಲ್ಲಿ 130,000 ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಶುಕ್ರವಾರದ ವೇಳೆಗೆ 23,000 ಮನೆಗಳು ಇನ್ನೂ ವಿದ್ಯುತ್ ಇಲ್ಲದೆ ಉಳಿದಿವೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಹೈಸ್ಪೀಡ್ ರೈಲು ಸಂಪರ್ಕ ಸ್ಥಗಿತ: ಎರಡು ಸುರಂಗಗಳ ಕುಸಿತದ ನಂತರ ರಾಜಧಾನಿ ಮ್ಯಾಡ್ರಿಡ್ ಮತ್ತು ವೇಲೆನ್ಸಿಯಾ ನಡುವಿನ ಹೈ-ಸ್ಪೀಡ್ ರೈಲು ಸಂಪರ್ಕವನ್ನು ಮೂರು ವಾರಗಳವರೆಗೆ ಮುಚ್ಚಲಾಗಿದೆ. ಸುಮಾರು 80 ಕಿಮೀ ಸ್ಥಳೀಯ ರೈಲು ಮಾರ್ಗಗಳು ಮತ್ತು 100 ರಸ್ತೆಗಳು ಹಾನಿಗೊಳಗಾಗಿವೆ. ತುರ್ತು ದುರಸ್ತಿಗಾಗಿ ಶುಕ್ರವಾರ 25 ಮಿಲಿಯನ್ ಯುರೋಗಳನ್ನು ($27 ಮಿಲಿಯನ್) ನಿಯೋಜಿಸಲು ಸರ್ಕಾರ ನಿರ್ಧರಿದೆ.
ಸಮಗ್ರ ನೆರವಿನ ವಾಗ್ದಾನ: ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರು ಗುರುವಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಸಮಗ್ರ ನೆರವು ನೀಡುವುದಾಗಿ ವಾಗ್ದಾನ ಮಾಡಿದರು. ವೇಲೆನ್ಸಿಯಾ ಪ್ರದೇಶದಲ್ಲಿ ಕ್ರೀಡಾಕೂಟಗಳನ್ನು ಮುಂದೂಡಿದ್ದರಿಂದ ಸರ್ಕಾರ ಮೂರು ದಿನಗಳ ಅಧಿಕೃತ ಶೋಕಾಚರಣೆ ಘೋಷಿಸಿದೆ.
ಸಮರೋಪಾದಿಯಲ್ಲಿ ಸಾಗಿದ ರಕ್ಷಣಾ ಕಾರ್ಯಾಚರಣೆ: ಏತನ್ಮಧ್ಯೆ, 400 ವಾಹನಗಳು ಮತ್ತು 15 ಹೆಲಿಕಾಪ್ಟರ್‌ಗಳ ಬೆಂಬಲದೊಂದಿಗೆ ಸುಮಾರು 2,000 ಸೇನಾ ಸಿಬ್ಬಂದಿ ರಕ್ಷಣಾ ಮತ್ತು ಚೇತರಿಕೆ ಕಾರ್ಯಾಚರಣೆಗಳಲ್ಲಿ ಸಮರೋಪಾದಿಯಲ್ಲಿ ಪಾಲ್ಗೊಂಡಿದೆ. ನೂರಾರು ವೆಲೆನ್ಸಿಯಾ ಸ್ವಯಂಸೇವಕರು ಸಲಿಕೆಗಳು ಮತ್ತು ಪೊರಕೆಗಳೊಂದಿಗೆ ಬೀದಿಗಳು ಮತ್ತು ಮನೆಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತಿರುವುದು ಕಂಡು ಬಂದಿದೆ.
ಪ್ರವಾಹದ ಸಂಕಷ್ಟದಲ್ಲೂ ಲೂಟಿಕೋರರ ಹಾವಳಿ; ಒಂದು ಕಡೆ ಪ್ರವಾಹ ಬಂದು ಜನ ಬದುಕು ಕಟ್ಟಿಕೊಳ್ಳುವ ಚಿಂತೆಯಲ್ಲಿದ್ದರೆ, ಲೂಟಿಕೋರರಿಗೆ ಇದು ಸ್ವರ್ಗವಾಗಿ ಮಾರ್ಪಟ್ಟಿದೆ. ಪ್ರವಾಹದ ಹಿನ್ನೆಲೆಯಲ್ಲಿ ಲೂಟಿ ಮಾಡಿದ್ದಕ್ಕಾಗಿ ಸುಮಾರು 60 ಜನರನ್ನು ಸ್ಪೇನ್ ಪೊಲೀಸರು ಬಂಧಿಸಿದ್ದಾರೆ.
ಇದನ್ನು ಓದಿ:ಭಾರತ - ಚೀನಾ ಯೋಧರ ವಾಪಸಾತಿ ಪ್ರಕ್ರಿಯೆ ಪೂರ್ಣ: ಪೂರ್ವ ಲಡಾಖ್ನಲ್ಲಿ ಭಾರತದಿಂದ ಗಸ್ತು