ಟೆಲ್ ಅವೀವ್ (ಇಸ್ರೇಲ್): ಇಸ್ರೇಲ್ ಮತ್ತು ಹಮಾಸ್ ಉಗ್ರರ ಯುದ್ಧವು ಗಾಜಾ ಪಟ್ಟಿಯಲ್ಲಿ ತೀವ್ರ ಆಹಾರ ಕೊರತೆ ಉಂಟು ಮಾಡಿದೆ. ನಿರಾಶ್ರಿತರಿಗೆ ಆಹಾರ ಪೊಟ್ಟಣಗಳ ವಿತರಣೆಯ ವೇಳೆ ದುರಂತ ಸಂಭವಿಸಿ ಐವರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ.
ಗಾಜಾ ಪಟ್ಟಿಗೆ ಆಹಾರ, ಸೌಕರ್ಯಗಳನ್ನು ಒದಗಿಸಲು ಇಸ್ರೇಲ್ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಅಂಗಸಂಸ್ಥೆಯೊಂದು ಅಲ್ಲಿನ ಜನರಿಗೆ ಪ್ಯಾರಾಚೂಟ್ ಮೂಲಕ ಆಹಾರವನ್ನು ಏರ್ಡ್ರಾಪ್ ಮಾಡುತ್ತಿದ್ದಾಗ, ಪ್ಯಾರಾಚೂಟ್ ತೆರೆದುಕೊಳ್ಳದೇ ಆಹಾರ ಸಾಮಗ್ರಿಗಳ ಬಾಕ್ಸ್ ನಿರಾಶ್ರಿತರ ಮೇಲೆ ಅಪ್ಪಳಿಸಿದೆ. ಇದರಿಂದ ಸ್ಥಳದಲ್ಲೇ ಸಾವು ಸಂಭವಿಸಿದೆ.
ಶುಕ್ರವಾರ ನಡೆದ ಈ ಘಟನೆಯನ್ನು ಟೀಕಿಸಿರುವ ಅಂತಾರಾಷ್ಟ್ರೀಯ ಮಾಧ್ಯಮಗಳು, ಇದೊಂದು ಅನುಪಯುಕ್ತ ಮತ್ತು ತೋರಿಕೆಯ ಪ್ರಚಾರಕ್ಕಾಗಿ ನಡೆಸುತ್ತಿರುವ ಕಾರ್ಯವಾಗಿದೆ ಎಂದು ಟೀಕಿಸಿವೆ.
ನಾಲ್ವರಲ್ಲಿ ಓರ್ವನಿಗೆ ಆಹಾರವಿಲ್ಲ: ವಿಶ್ವಸಂಸ್ಥೆಯು ಆಹಾರ ಕಾರ್ಯಕ್ರಮದಡಿ ಗಾಜಾದ ಉತ್ತರ ಭಾಗಕ್ಕೆ ಸಾಮಗ್ರಿಗಳನ್ನು ಸರಬರಾಜು ಮಾಡಲು ಮುಂದಾಗಿತ್ತು. ಆದರೆ, ಭದ್ರತಾ ಕಾರಣಗಳಿಗಾಗಿ ಇಸ್ರೇಲ್ ಇದನ್ನು ನಿರಾಕರಿಸಿತ್ತು. ಹೀಗಾಗಿ ಈಜಿಪ್ಟ್, ಯುನೈಟೆಡ್ ಸ್ಟೇಟ್ಸ್, ಜೋರ್ಡಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನ ನೆರವಿನಿಂದ ಸಾಮಗ್ರಿಳ ಏರ್ಡ್ರಾಪ್ ಮಾಡಲಾಗುತ್ತಿದೆ. ಯುದ್ಧದಿಂದಾಗಿ ಗಾಜಾ ಪಟ್ಟಿಯಲ್ಲಿ ಕನಿಷ್ಠ ಅರ್ಧ ಮಿಲಿಯನ್ ಅಥವಾ 4 ಜನರಲ್ಲಿ ಒಬ್ಬರು ತೀವ್ರ ಆಹಾರದ ಕೊರತೆ ಅನುಭವಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
ಆಹಾರ ಮತ್ತು ವೈದ್ಯಕೀಯ ಸರಬರಾಜುಗಳನ್ನು ಒದಗಿಸಲು ಮಾಡಲಾಗುತ್ತಿರುವ ಇಂತಹ ಪ್ರಯತ್ನಗಳು ಅಸಮರ್ಪಕವಾಗಿವೆ ಎಂದು ಟೀಕೆ ವ್ಯಕ್ತವಾದರೆ, ಏನನ್ನೂ ಮಾಡದಿದ್ದರೆ ಗಾಜಾ ಪಟ್ಟಿಯಲ್ಲಿ ವ್ಯಾಪಕ ಆಹಾರ ಕ್ಷಾಮ ಉಂಟಾಗಲಿದೆ. ಈಗಾಗಲೇ ಅಕ್ಟೋಬರ್ 7 ರಿಂದ ಆರಂಭವಾದ ಯುದ್ಧದಲ್ಲಿ 30 ಸಾವಿರಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ. ಇದು ದುಪ್ಪಟ್ಟಾಗಲಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ನಡೆಯುತ್ತಿರುವ ಯುದ್ಧದಲ್ಲಿ ಇಸ್ರೇಲ್ ನರಮೇಧ ನಡೆಸುತ್ತಿದೆ ಎಂದು ಆರೋಪಿಸಿ ದಕ್ಷಿಣ ಆಫ್ರಿಕಾ ಅಂತಾರಾಷ್ಟ್ರೀಯ ಕೋರ್ಟ್ಗೆ ದೂರು ಸಲ್ಲಿಸಿದೆ.
ನೆರವಿಗೆ ಕಾಯುತ್ತಿದ್ದವರ ಮೇಲೆ ದಾಳಿ: ಗಾಜಾ ನಗರದಲ್ಲಿ ಈಚೆಗೆ ಮಾನವೀಯ ನೆರವಿಗಾಗಿ ಕಾಯುತ್ತಿದ್ದ ಜನರ ಮೇಲೆ ಇಸ್ರೇಲ್ ಸೇನೆ ನಡೆಸಿದ ವೈಮಾನಿಕ ಮತ್ತು ಗುಂಡಿನ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಮೊದಲು ವೈಮಾನಿಕ ದಾಳಿ ನಡೆಸಿದ ಇಸ್ರೇಲ್ ಸೇನೆಯು, ನಂತರ ಆಹಾರ ಪೂರೈಕೆಗಾಗಿ ಬಂದಿದ್ದ ಟ್ರಕ್‌ಗಳ ಬಳಿ ತೆರಳಿದ್ದ ಸಂತಸ್ತರ ಮೇಲೆ ಗುಂಡಿನ ದಾಳಿ ನಡೆಸಿತು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಸಹಾಯಕ್ಕೆ ಕಾಯುತ್ತಿದ್ದವರ ಮೇಲೆ ಇಸ್ರೇಲ್ ದಾಳಿ: ಗಾಜಾದಲ್ಲಿ 100ಕ್ಕೂ ಹೆಚ್ಚು ಜನರು ಸಾವು