ನ್ಯೂಯಾರ್ಕ್/ಕೈರೋ (ಈಜಿಪ್ಟ್): ಭಾರತ ಮೂಲದ ನ್ಯೂಯಾರ್ಕ್ನ ಟೆಕ್ ಬಿಲಿಯನೇರ್ ಮತ್ತು ಬಿಲ್ಟ್ ರಿವಾರ್ಡ್ಸ್ ಸಿಇಒ ಅಂಕುರ್ ಜೈನ್ ಅವರು ಮಾಜಿ ಡಬ್ಲ್ಯೂಡಬ್ಲ್ಯೂಇ ತಾರೆ ಎರಿಕಾ ಹ್ಯಾಮಂಡ್ ಅವರನ್ನು ವರಿಸಿದ್ದಾರೆ. ಈಜಿಫ್ಟ್ನ ಐಕಾನಿಕ್ ಪಿರಮಿಡ್ನ ಗ್ರೇಟ್ ಸ್ಫಿಂಕ್ಸ್ ಮುಂದೆ ನಡೆದ ಅದ್ಧೂರಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅಂಕುರ್ ಜೈನ್ ತಮ್ಮ ಮದುವೆಯ ವಿಡಿಯೋಗಳು ಮತ್ತು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. "ನಮ್ಮ ಮದುವೆ ಈಜಿಪ್ಟ್ನಲ್ಲಿ 4/26/2024ರಂದು ನೆರವೇರಿತು. ನಮ್ಮೊಂದಿಗೆ ಆಚರಿಸಲು ಬಂದ ಎಲ್ಲರಿಗೂ, ನಮ್ಮ ಕುಟುಂಬಗಳಿಗೂ!! ಮತ್ತು ನನ್ನನ್ನು ಮದುವೆಯಾಗಿದ್ದಕ್ಕಾಗಿ ಎರಿಕಾ ಹ್ಯಾಮಂಡ್ ಅವರಿಗೂ ಧನ್ಯವಾದಗಳು!! ಮತ್ತು ನಮ್ಮ ಮದುವೆಯನ್ನು ಸಾಧ್ಯವಾಗಿಸಿದ ಎಲ್ಲರಿಗೆ ಧನ್ಯವಾದಗಳು ಎಂದು ಅವರು ಪೋಸ್ಟ್ ಹಾಕಿದ್ದಾರೆ.
ಅಂಕುರ್ ಅವರ ತಂದೆ ನವೀನ್ ಕೆ. ಜೈನ್ ಅವರು ಉತ್ತರ ಪ್ರದೇಶದಿಂದ ಮೂಲದವರು. ರೂರ್ಕಿ ಐಐಟಿಯಲ್ಲಿ ವ್ಯಾಸಂಗ ಮಾಡಿರುವ ಇವರು ಯಶಸ್ವಿ ಭಾರತೀಯ ಅಮೆರಿಕನ್ ವ್ಯಾಪಾರ ಕಾರ್ಯನಿರ್ವಾಹಕರಾಗಿದ್ದಾರೆ. ತಮ್ಮ ಅದ್ಧೂರಿ ಏಪ್ರಿಲ್ 26ರ ವಿವಾಹದ ಕುರಿತು ಎರಿಕಾ ಹ್ಯಾಮಂಡ್ ಪೀಪಲ್ ಮ್ಯಾಗಜೀನ್ನೊಂದಿಗೆ ಮಾತನಾಡಿ, ಇದು ಜೀವಮಾನದಲ್ಲಿ ಒಮ್ಮೆ ಮಾತ್ರ ಆಗುವ ಅನುಭವ ಎಂದು ಹೇಳಿದರು.
ಖ್ಯಾತ ಈಜಿಪ್ಟೋಲಾಜಿಸ್ಟ್ ಡಾ. ಜಹಿ ಹವಾಸ್ ಅವರು ಅಂಕುರ್ ಜೈನ್ ಮತ್ತು ಎರಿಕಾ ಹ್ಯಾಮಂಡ್ ವಿವಾಹ ಕಾರ್ಯವನ್ನು ನೆರವೇರಿಸಿದರು. ಇವರು ಅಂಕುರ್ ಜೈನ್ ಕುಟುಂಬದ ಸ್ನೇಹಿತರಾಗಿದ್ದಾರೆ. ತಮ್ಮ ಹದಿಹರೆಯದಲ್ಲಿ ಪಿರಮಿಡ್ಗಳಿಗೆ ಭೇಟಿ ನೀಡಿದ್ದ ಜೈನ್, ಪ್ರಾಚೀನ ಜೀವನ ಮತ್ತು ಇತಿಹಾಸದ ಬಗ್ಗೆ ಆಕರ್ಷಿತರಾಗಿದ್ದರು.
ವಿವಾಹ ಸಮಾರಂಭದಲ್ಲಿ ಅಂಕುರ್ ಜೈನ್ ಪೋಷಕರಾದ ನವೀನ್ ಮತ್ತು ಅನು ಜೈನ್, ಎರಿಕಾ ಹ್ಯಾಮಂಡ್ ಪೋಷಕರಾದ ಟೋನ್ಯಾ ಮತ್ತು ವಿಲ್ ಹ್ಯಾಮಂಡ್ ಸೇರಿ ಅನೇಕ ಗಣ್ಯರು ಪಾಲ್ಗೊಂಡಿದ್ದರು. ತಮ್ಮ ಮದುವೆ ಸಮಾರಂಭದಲ್ಲಿ ಜೈನ್ ಅವರ ಭಾರತೀಯ ಸಂಸ್ಕೃತಿಯನ್ನೂ ಪ್ರತಿಬಿಂಬಿಸಿದ್ದಾರೆ. ಎರಿಕಾ ಹ್ಯಾಮಂಡ್ ಭಾರತೀಯ ವಿನ್ಯಾಸಕ ರಾಹುಲ್ ಮಿಶ್ರಾ ವಿನ್ಯಾಸಗೊಳಿಸಿದ ಮದುವೆಯ ಗೌನ್ ಅನ್ನು ಧರಿಸಿದ್ದರು.
ಇದನ್ನೂ ಓದಿ: ನಿರ್ದೇಶಕ ಶಂಕರ್ ಪುತ್ರಿ ಐಶ್ವರ್ಯಾ ಮದುವೆ: ಸಿಎಂ ಸ್ಟಾಲಿನ್, ರಜನಿಕಾಂತ್, ಕಮಲ್ ಹಾಸನ್ ಭಾಗಿ