ಕೈರೋ : ಗಾಜಾ ಪಟ್ಟಿಗೆ ಕಳೆದ ಮೂರು ವಾರಗಳಿಂದ ಸ್ತಬ್ಧವಾಗಿದ್ದ ಪರಿಹಾರ ಸಾಮಗ್ರಿಗಳ ಪೂರೈಕೆ ಭಾನುವಾರದಿಂದ ಮತ್ತೆ ಆರಂಭವಾಗಿದೆ ಎಂದು ಈಜಿಪ್ಟ್ನ ಟಿವಿ ಮಾಧ್ಯಮಗಳು ವರದಿ ಮಾಡಿವೆ. ಗಾಜಾಗೆ ಅತ್ಯಂತ ಅಗತ್ಯವಾಗಿ ಬೇಕಾಗಿರುವ ನೆರವು ಈಜಿಪ್ಟ್ನಿಂದ ಕೆರೆಮ್ ಶಲೋಮ್ ಕ್ರಾಸಿಂಗ್ ಮೂಲಕ ಗಾಜಾಗೆ ಹರಿದು ಬರಲಾರಂಭಿಸಿದೆ.
ಮಾನವೀಯ ನೆರವಿನ ಸಾಮಗ್ರಿಗಳನ್ನು ಹೊತ್ತ 200 ಟ್ರಕ್ಗಳು ಈಜಿಪ್ಟ್ ಕಡೆಯಿಂದ ರಫಾ ಗಡಿ ದಾಟುವ ಸ್ಥಳದಿಂದ ಕರ್ಮ್ ಅಬು ಸಲೇಂ ಕ್ರಾಸಿಂಗ್ ಅಥವಾ ಕೆರೆಮ್ ಶಲೋಮ್ಗೆ ಹೋಗುತ್ತಿವೆ ಎಂದು ಸರ್ಕಾರಿ ಒಡೆತನದ ಮಾಧ್ಯಮ ಅಲ್-ಖಹೇರಾ ನ್ಯೂಸ್ ಟಿವಿ ತಿಳಿಸಿದೆ. ಇವುಗಳಲ್ಲಿ ನಾಲ್ಕು ಇಂಧನ ತುಂಬಿದ ಟ್ರಕ್ಗಳು ಕೂಡ ಸೇರಿದ್ದು, ಇವು ಕೆರೆಮ್ ಶಲೋಮ್ ಕಡೆಗೆ ಚಲಿಸಲು ಪ್ರಾರಂಭಿಸಿವೆ.
ಈ ತಿಂಗಳ ಆರಂಭದಲ್ಲಿ, ಈಜಿಪ್ಟ್ಗೆ ಹತ್ತಿರವಿರುವ ರಫಾದ ಗಾಜಾ ಭಾಗವನ್ನು ಇಸ್ರೇಲ್ ನಿಯಂತ್ರಣಕ್ಕೆ ಪಡೆದಿತ್ತು. ಇದರ ನಂತರ ಅತ್ಯಂತ ಜನದಟ್ಟಣೆಯ ರಫಾ ಪ್ರದೇಶಕ್ಕೆ ಈಜಿಪ್ಟ್ನಿಂದ ಪೂರೈಕೆಯಾಗುತ್ತಿದ್ದ ಪರಿಹಾರ ಸಾಮಗ್ರಿಗಳ ಸರಬರಾಜು ನಿಂತು ಹೋಗಿತ್ತು. ಇಸ್ರೇಲಿ ಪಡೆಗಳು ಹಿಂದೆ ಸರಿಯುವವರೆಗೂ ರಫಾ ಮೂಲಕ ಪರಿಹಾರ ಸಾಮಗ್ರಿಗಳನ್ನು ಕಳುಹಿಸುವುದಿಲ್ಲ ಎಂದು ಈಜಿಪ್ಟ್ ಹೇಳಿತ್ತು.
ಏತನ್ಮಧ್ಯೆ ಇತ್ತೀಚೆಗೆ ಹಮಾಸ್ ಉಗ್ರರು ಕೆರೆಮ್ ಶಲೋಮ್ ಕ್ರಾಸಿಂಗ್ ಮತ್ತು ಇಸ್ರೇಲಿ ಸೇನಾ ನೆಲೆಗಳ ಮೇಲೆ ರಾಕೆಟ್ ದಾಳಿ ನಡೆಸಿದ್ದಾರೆ.
ಕೆರೆಮ್ ಶಾಲೋಮ್ ಕ್ರಾಸಿಂಗ್ ಮೂಲಕ ಗಾಜಾಗೆ ಪರಿಹಾರ ಸಾಮಗ್ರಿಗಳ ಸಾಗಣೆಯನ್ನು ಪುನಾರಂಭಿಸಲು ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಈಜಿಪ್ಟ್ ಅಧ್ಯಕ್ಷ ಅಬ್ದೆಲ್-ಫತಾಹ್ ಅಲ್-ಸಿಸ್ಸಿ ಈ ವಾರದ ಆರಂಭದಲ್ಲಿ ಒಪ್ಪಂದಕ್ಕೆ ಬಂದಿದ್ದಾರೆ.
ತಾತ್ಕಾಲಿಕ ವ್ಯವಸ್ಥೆಯಡಿ ಪ್ಯಾಲೆಸ್ಟೈನ್ ಕಡೆಯಿಂದ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಅಧಿಕೃತ ನಿಯಮಗಳನ್ನು ರೂಪಿಸುವವರೆಗೂ ಈಜಿಪ್ಟ್ ಕೆರೆಮ್ ಶಲೋಮ್ ಕ್ರಾಸಿಂಗ್ನಲ್ಲಿ ತನ್ನ ಪರಿಹಾರ ಸಾಮಗ್ರಿಗಳನ್ನು ವಿಶ್ವಸಂಸ್ಥೆಗೆ ಹಸ್ತಾಂತರಿಸಲಿದೆ ಎಂದು ಈಜಿಪ್ಟ್ ಅಧ್ಯಕ್ಷರ ಹೇಳಿಕೆ ತಿಳಿಸಿದೆ.
ಹಮಾಸ್ನಿಂದ ಇಸ್ರೇಲ್ ಸೈನಿಕರ ಬಂಧನ: ಉತ್ತರ ಗಾಜಾ ಪಟ್ಟಿಯ ಜಬಾಲಿಯಾ ಶಿಬಿರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಸ್ರೇಲಿ ಸೈನಿಕರನ್ನು ತಾನು ಬಂಧಿಸಿರುವುದಾಗಿ ಹಮಾಸ್ ನ ಮಿಲಿಟರಿ ವಿಭಾಗವಾದ ಅಲ್-ಖಸ್ಸಾಮ್ ಬ್ರಿಗೇಡ್ಸ್ ರವಿವಾರ ಹೇಳಿದೆ. ಆದರೆ ಎಷ್ಟು ಸೈನಿಕರನ್ನು ಬಂಧಿಸಲಾಗಿದೆ ಎಂಬ ಬಗ್ಗೆ ಅಲ್-ಖಸ್ಸಾಮ್ ಮಾಹಿತಿ ನೀಡಿಲ್ಲ.
ಹಮಾಸ್ ಬಿಡುಗಡೆ ಮಾಡಿದ ವೀಡಿಯೊ ಕ್ಲಿಪ್ನಲ್ಲಿ ಇಸ್ರೇಲಿ ಸೈನಿಕನೆಂದು ಹೇಳಲಾದ ವ್ಯಕ್ತಿಯನ್ನು ಸುರಂಗದಲ್ಲಿ ಎಳೆದೊಯ್ಯುತ್ತಿರುವುದು ಕಾಣಿಸುತ್ತದೆ. ಆದರೆ ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇಸ್ರೇಲಿ ಸೈನಿಕರು ಬಳಸುತ್ತಿದ್ದಾರೆಂದು ಹೇಳಲಾದ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳನ್ನು ಸಹ ವೀಡಿಯೊದಲ್ಲಿ ತೋರಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಸೇನಾ ವಕ್ತಾರ ಅವಿಚೈ ಅದ್ರಾಯಿ, ಗಾಜಾದಲ್ಲಿ ಸೈನಿಕರನ್ನು ಅಪಹರಿಸಿದ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಪಪುವಾ ನ್ಯೂ ಗಿನಿಯಾ ಭೂಕುಸಿತದಲ್ಲಿ ಮೃತರ ಸಂಖ್ಯೆ 670ಕ್ಕೆ ಏರಿಕೆ - Papua New Guinea landslide