ಸ್ಯಾನ್ ಫ್ರಾನ್ಸಿಸ್ಕೋ : ಎಲೋನ್ ಮಸ್ಕ್ ಮಾದಕ ವಸ್ತುಗಳನ್ನು ಸೇವಿಸುವ ವಿಷಯ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ನ ಆಡಳಿತ ಮಂಡಳಿಯ ಕೆಲ ಸದಸ್ಯರಿಗೆ ತಿಳಿದಿದೆ ಮತ್ತು ಅವರು ಕೂಡ ಮಸ್ಕ್ರೊಂದಿಗೆ ಮಾದಕ ವಸ್ತುಗಳ ಸೇವನೆ ಮಾಡುತ್ತಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಒಂದು ವೇಳೆ ಮಸ್ಕ್ರೊಂದಿಗೆ ಮಾದಕ ವಸ್ತು ಸೇವಿಸದಿದ್ದರೆ ಅವರಿಗೆ ಅಸಮಾಧಾನವಾಗಬಹುದು ಹಾಗೂ ಮಸ್ಕ್ರಿಂದ ತಾವು ಸಾಕಷ್ಟು ಆದಾಯ ಪಡೆಯುತ್ತಿರುವುದರಿಂದ ಹಾಗೆ ಮಾಡಲು ಸಾಧ್ಯವಿಲ್ಲ ಎಂಬುದು ಕೆಲ ಸದಸ್ಯರ ಅಭಿಪ್ರಾಯವಾಗಿದೆ.
"ಮಸ್ಕ್ ಗೆ ಹತ್ತಿರವಾಗುವುದರಿಂದ ಬರುವ ಸಾಮಾಜಿಕ ಲಾಭವನ್ನು ಕಳೆದುಕೊಳ್ಳುವ ಅಪಾಯವನ್ನು ಅವರು ಬಯಸುವುದಿಲ್ಲ. ಇದೊಂಥರ ರಾಜನ ಸಾಮೀಪ್ಯದಲ್ಲಿ ಇರುವುದನ್ನು ಹೋಲುತ್ತದೆ" ಎಂದು ವಾಲ್ ಸ್ಟ್ರೀಟ್ ಜರ್ನಲ್ (ಡಬ್ಲ್ಯುಎಸ್ ಜೆ) ವರದಿ ಮಾಡಿದೆ.
"ಮಂಡಳಿಯ ಸದಸ್ಯರು ತಮಗೆ ಕೊಡುಗೆಯಾಗಿ ಸಿಕ್ಕ ಷೇರುಗಳು ಸ್ಟಾಕ್ ಮತ್ತು ಪ್ರತ್ಯೇಕ ಹೂಡಿಕೆಗಳಿಂದ ನೂರಾರು ಮಿಲಿಯನ್ಗಳನ್ನು ಗಳಿಸಿದ್ದಾರೆ. ಇದರಲ್ಲಿ ಕೆಲವರು ಮಸ್ಕ್ ಅವರೊಂದಿಗೆ ಮಾದಕ ವಸ್ತು ಸೇವಿಸಿದ್ದಾರೆ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಡಬ್ಲ್ಯುಎಸ್ಜೆ ವರದಿಯ ಪ್ರಕಾರ, ಮಸ್ಕ್ ಅವರ ಮಾದಕ ವಸ್ತುಗಳ ವ್ಯಸನ ಹೆಚ್ಚಾಗುತ್ತಿದ್ದು ಅವರ ಆರೋಗ್ಯ ಹದಗೆಡುವ ಬಗ್ಗೆ ಸಹೋದ್ಯೋಗಿಗಳು ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೇ ವ್ಯಸನ ಮುಕ್ತಿ ಕೇಂದ್ರಕ್ಕೆ ದಾಖಲಾಗುವಂತೆ ಕೂಡ ಕೆಲವರು ಮಸ್ಕ್ಗೆ ಸಲಹೆ ನೀಡಿದ್ದರು.
ಈ ಆರೋಪದ ಬಗ್ಗೆ ಮಸ್ಕ್ ಹೇಳಿದ್ದಿಷ್ಟು: ಈ ಬಗ್ಗೆ ಪ್ರತಿಕ್ರಿಯಿಸಿರುವ ಮಸ್ಕ್, ಯಾರೂ ನನಗೆ ವ್ಯಸನ ಮುಕ್ತಿ ಕೇಂದ್ರಕ್ಕೆ ಹೋಗುವಂತೆ ಸಲಹೆ ನೀಡಿಲ್ಲ ಎಂದಿದ್ದಾರೆ. "ಮೊದಲನೆಯದಾಗಿ, ಯಾರೂ ನನಗೆ ವ್ಯಸನ ಮುಕ್ತಿಯ ಬಗ್ಗೆ ಎಂದಿಗೂ ಪ್ರಸ್ತಾಪಿಸಿಲ್ಲ" ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. "ಎರಡನೆಯದಾಗಿ, ಟೆಸ್ಲಾವನ್ನು ಅತ್ಯಂತ ಮೌಲ್ಯಯುತ ಕಾರು ತಯಾರಕ ಮತ್ತು ಸ್ಪೇಸ್ಎಕ್ಸ್ ಅನ್ನು ಅತ್ಯಂತ ಮೌಲ್ಯಯುತ ಬಾಹ್ಯಾಕಾಶ ಕಂಪನಿಯಾಗಿ ಮುನ್ನಡೆಸಲು ನನಗೆ ಸಾಧ್ಯವಾಗಿದೆ ಎಂದಾದರೆ ಅದು ನಾನು ಪಡೆದ ಅತಿದೊಡ್ಡ ಅಭಿನಂದನೆಯಾಗಿದೆ" ಎಂದು ಅವರು ಬರೆದಿದ್ದಾರೆ.
ಮಸ್ಕ್ ಅವರ ಕಂಪನಿಗಳ ಇತರ ಅನೇಕ ನಿರ್ದೇಶಕರು ಮಸ್ಕ್ ಅವರೊಂದಿಗೆ ಆಳವಾದ ವೈಯಕ್ತಿಕ ಮತ್ತು ಆರ್ಥಿಕ ಸಂಬಂಧಗಳನ್ನು ಹೊಂದಿದ್ದಾರೆ ಮತ್ತು ಈ ಸಂಬಂಧದಿಂದ ಅಪಾರ ಲಾಭ ಪಡೆದಿದ್ದಾರೆ ಎಂದು ಡಬ್ಲ್ಯುಎಸ್ಜೆ ವರದಿ ಹೇಳಿದೆ. "ಟೆಸ್ಲಾ ಮಂಡಳಿಯ ಪ್ರಸ್ತುತ ಎಂಟು ಸದಸ್ಯರ ಮಂಡಳಿಯ ಹೆಚ್ಚಿನ ಸದಸ್ಯರು ಕಳೆದ ಕೆಲ ವರ್ಷಗಳಲ್ಲಿ ತಮ್ಮ ಹುದ್ದೆಯ ಕಾರಣದಿಂದ ಮಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ಪಡೆದುಕೊಂಡಿದ್ದಾರೆ." ಎಂದು ವರದಿ ತಿಳಿಸಿದೆ. ಈ ಆರೋಪಗಳಿಗೆ ಮಸ್ಕ್ ಇನ್ನೂ ಪ್ರತಿಕ್ರಿಯಿಸಿಲ್ಲ.
ಇದನ್ನೂ ಓದಿ : ಜನವರಿಯಲ್ಲಿ $732 ಮಿಲಿಯನ್ ಫಂಡಿಂಗ್ ಸಂಗ್ರಹಿಸಿದ ಭಾರತೀಯ ಸ್ಟಾರ್ಟಪ್ಗಳು