ಬೈರುತ್: ಲೆಬನಾನ್ನಾದ್ಯಂತ ಮಂಗಳವಾರ ಮತ್ತು ಬುಧವಾರ ಸಂಭವಿಸಿದ ಪೇಜರ್ಗಳು ಮತ್ತು ವಾಕಿಟಾಕಿಗಳ ಸ್ಪೋಟ ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 37ಕ್ಕೆ ಏರಿಕೆಯಾಗಿದ್ದು, ಗಾಯಗೊಂಡವರ ಸಂಖ್ಯೆ 2,931ಕ್ಕೆ ತಲುಪಿದೆ ಎಂದು ಲೆಬನಾನ್ ಆರೋಗ್ಯ ಸಚಿವ ಫಿರಾಸ್ ಅಬಿಯಾದ್ ಗುರುವಾರ ತಿಳಿಸಿದ್ದಾರೆ.
ಲೆಬನಾನ್ನಲ್ಲಿ ಮಂಗಳವಾರ ನಡೆದ ಪೇಜರ್ ಸ್ಫೋಟದಲ್ಲಿ 12 ಜನರು ಸಾವನ್ನಪ್ಪಿದ್ದು, 2,323 ಜನ ಗಾಯಗೊಂಡಿದ್ದಾರೆ ಎಂದು ಅಬಿಯಾದ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಮಂಗಳವಾರ ಮತ್ತೆ 226 ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದರು. ಏತನ್ಮಧ್ಯೆ, ಬುಧವಾರ ಮಧ್ಯಾಹ್ನ ದೇಶಾದ್ಯಂತ ಘಟಿಸಿದ ಮೊಬೈಲ್ ಸಾಧನಗಳ ಸ್ಫೋಟದಲ್ಲಿ 25 ಜನ ಸಾವಿಗೀಡಾಗಿದ್ದು, 608 ಜನ ಗಾಯಗೊಂಡಿದ್ದಾರೆ ಎಂದು ಅಬಿಯಾದ್ ಹೇಳಿದರು.
ಸುತ್ತೋಲೆ ಹೊರಡಿಸಿದ ಲೆಬನಾನ್: "ಬೈರುತ್ ರಫೀಕ್ ಹರಿರಿ (ಅಂತಾರಾಷ್ಟ್ರೀಯ) ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನದಲ್ಲಿ ಯಾವುದೇ ಪೇಜರ್ ಅಥವಾ ವಾಕಿ-ಟಾಕಿ ಸಾಧನಗಳನ್ನು ಸಾಗಿಸಕೂಡದು" ಎಂದು ಲೆಬನಾನ್ನ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಗುರುವಾರ ಸುತ್ತೋಲೆ ಹೊರಡಿಸಿದೆ.
2023ರ ಅಕ್ಟೋಬರ್ 8ರಂದು ಹಮಾಸ್ ಇಸ್ರೇಲ್ ಮೇಲೆ ನಡೆಸಿದ ದಾಳಿಯನ್ನು ಬೆಂಬಲಿಸಿ ಹಿಜ್ಬುಲ್ಲಾ ಇಸ್ರೇಲ್ ಮೇಲೆ ರಾಕೆಟ್ ದಾಳಿ ಆರಂಭಿಸಿದ ನಂತರ ಲೆಬನಾನ್-ಇಸ್ರೇಲ್ ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಇಸ್ರೇಲ್ ಲೆಬನಾನ್ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಈ ಸಂಘರ್ಷದಿಂದಾಗಿ ಲೆಬನಾನ್ ನಲ್ಲಿ ನೂರಾರು ಜನ ಸಾವಿಗೀಡಾಗಿದ್ದಾರೆ. ತನ್ನ ದಾಳಿಗಳಿಂದ ಇಸ್ರೇಲ್ನಲ್ಲಿ ಸಾವು ನೋವುಗಳು ಉಂಟಾಗಿವೆ ಎಂದು ಹಿಜ್ಬುಲ್ಲಾ ಹೇಳಿಕೊಂಡಿದೆ.
ಈಗ ಸಂಭವಿಸುತ್ತಿರುವ ಮೊಬೈಲ್ ಸಾಧನಗಳ ಸ್ಫೋಟಗಳು ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ನಡೆಯುತ್ತಿರುವ 11 ತಿಂಗಳ ಸಂಘರ್ಷವನ್ನು ಮತ್ತೂ ತೀವ್ರಗೊಳಿಸಿದೆ.
ಬುಧವಾರ ಇಸ್ರೇಲಿ ಪಡೆಗಳೊಂದಿಗೆ ಮಾತನಾಡಿದ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ಹಿಜ್ಬುಲ್ಲಾ ಜೊತೆಗಿನ ಸಂಘರ್ಷವು ಹೊಸ ಹಂತಕ್ಕೆ ಪ್ರವೇಶಿಸಿದೆ ಎಂದು ಹೇಳಿದರು. ಆದರೆ ಲೆಬನಾನ್ನಲ್ಲಿ ಸಂಭವಿಸಿದ ಸ್ಫೋಟಗಳಿಗೆ ತಾನೇ ಕಾರಣ ಎಂದು ಈವರೆಗೂ ಇಸ್ರೇಲ್ ಹೇಳಿಕೊಂಡಿಲ್ಲ. ಆದರೆ ಇದಕ್ಕೆ ಇಸ್ರೇಲ್ ಕಾರಣ ಎಂದು ಹಿಜ್ಬುಲ್ಲಾ ಆರೋಪಿಸಿದೆ. ಹಿಜ್ಬುಲ್ಲಾ ಖರೀದಿಸಿದ ಪೇಜರ್ ಹಾಗೂ ವಾಕಿ ಟಾಕಿಗಳಲ್ಲಿ ಇಸ್ರೇಲ್ ಸ್ಪೋಟಕಗಳನ್ನು ಅಡಗಿಸಿಟ್ಟು ದೂರದಿಂದಲೇ ಸಂದೇಶ ಕಳುಹಿಸುವ ಮೂಲಕ ಏಕಕಾಲಕ್ಕೆ ಅವನ್ನು ಸ್ಪೋಟಿಸಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಇದನ್ನೂ ಓದಿ : ಅತ್ಯಾಚಾರ ಆರೋಪ ಸುಳ್ಳು, ನಡೆದಿದ್ದರೂ ಒಪ್ಪಿತ ಲೈಂಗಿಕ ಕ್ರಿಯೆ: ಪ್ರಜ್ವಲ್ ಪರ ವಕೀಲರ ವಾದ - Prajwal Revanna Case