ಮಿಸೌರಿ(ಯುಎಸ್): ಅಮೆರಿಕದಲ್ಲಿ ಭಾರತೀಯರ ಹತ್ಯಾ ಸರಣಿ ಮುಂದುವರಿದಿದೆ. ವಾಷಿಂಗ್ಟನ್ ವಿವಿಯಲ್ಲಿ ಪಿಹೆಚ್‌ಡಿ ವ್ಯಾಸಂಗ ಮಾಡುತ್ತಿದ್ದ ಅಮರನಾಥ್ ಘೋಷ್ ಎಂಬವರನ್ನು ಮಿಸೌರಿಯ ಸೇಂಟ್ ಲೂಯಿಸ್‌ನಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಇದನ್ನು ಚಿಕಾಗೋದಲ್ಲಿರುವ ಭಾರತೀಯ ಕಾನ್ಸುಲೇಟ್ ದೃಢಪಡಿಸಿದೆ.
ಮೃತ ಅಮರನಾಥ್ ಘೋಷ್ ಅವರು, ಕೋಲ್ಕತ್ತಾ ಮೂಲದವರು. ವೃತ್ತಿಪರ ಭರತನಾಟ್ಯ ಮತ್ತು ಕೂಚಿಪುಡಿ ಶಾಸ್ತ್ರೀಯ ನೃತ್ಯಗಾರರಾಗಿದ್ದರು. ನೃತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಿಸೌರಿಯ ಸೇಂಟ್ ಲೂಯಿಸ್‌ಗೆ ತೆರಳಿದ್ದಾಗ ಗುಂಡಿನ ದಾಳಿ ಮಾಡಿ ಹತ್ಯೆ ಮಾಡಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಸಾವಿನ ಮಾಹಿತಿ ಹಂಚಿಕೊಂಡ ನಟಿ: ಅಮರನಾಥ್ ಘೋಷ್ ಹತ್ಯೆಗೀಡಾಗಿದ್ದನ್ನು ನಟಿ ದೇವೋಲೀನಾ ಭಟ್ಟಾಚಾರ್ಜಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಮೆರಿಕದಲ್ಲಿ ಪಿಹೆಚ್‌ಡಿ ವ್ಯಾಸಂಗ ಮಾಡುತ್ತಿದ್ದ ಭರತನಾಟ್ಯ ಕಲಾವಿದ, ತಮ್ಮ ಆಪ್ತ ಸ್ನೇಹಿತ ಘೋಷ್ ಅವರನ್ನು ಮಂಗಳವಾರ ಸೇಂಟ್ ಲೂಯಿಸ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಕುಟುಂಬದಲ್ಲಿ ಆತ ಒಬ್ಬನೇ ಪುತ್ರನಾಗಿದ್ದ. ಅವರ ತಾಯಿ 3 ವರ್ಷಗಳ ಹಿಂದೆ ನಿಧನರಾಗಿದ್ದರು. ತಂದೆಯನ್ನು ಬಾಲ್ಯದಲ್ಲಿಯೇ ಕಳೆದುಕೊಂಡಿದ್ದರು. ಆರೋಪಿಗಳ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಘೋಷ್ಗಾಗಿ ಹೋರಾಡುವವರು ಕೆಲ ಸ್ನೇಹಿತರು ಬಿಟ್ಟರೆ ಯಾರೂ ಇಲ್ಲ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಭಾರತೀಯ ರಾಯಭಾರ ಕಚೇರಿ ಮತ್ತು ವಿದೇಶ ಇಲಾಖೆ ಸಚಿವ ಎಸ್.ಜೈಶಂಕರ್ ಅವರಿಗೆ ಟ್ಯಾಗ್ ಮಾಡಿ, ಪ್ರಕರಣದ ತನಿಖೆ ನಡೆಸಲು ಕೋರಿದ್ದಾರೆ.
ಭಾರತೀಯ ಕಾನ್ಸುಲೇಟ್ ಸಂತಾಪ: ಚಿಕಾಗೋದಲ್ಲಿರುವ ಭಾರತೀಯ ಕಾನ್ಸುಲೇಟ್ ಅಮರನಾಥ್ ಘೋಷ್ ಅವರ ಸಾವನ್ನು ದೃಢಪಡಿಸಿದ್ದು, ಸಂತಾಪ ಸೂಚಿಸಿದೆ. ಮಿಸೌರಿಯ ಸೇಂಟ್ ಲೂಯಿಸ್‌ನಲ್ಲಿ ಅಮರನಾಥ್ ಘೋಷ್ ನಿಧನರಾಗಿದ್ದಾರೆ. ಇದೊಂದು ಕಳವಳಕಾರಿ ಸಂಗತಿ. ವಿಧಿವಿಜ್ಞಾನ, ಪೊಲೀಸರೊಂದಿಗೆ ತನಿಖೆ ನಡೆಸುತ್ತಿದ್ದೇವೆ ಎಂದು ಕಾನ್ಸುಲೇಟ್ ತಿಳಿಸಿದೆ.
3 ತಿಂಗಳಲ್ಲಿ 6ನೇ ಭಾರತೀಯನ ಸಾವು: ಅಮೆರಿಕದಲ್ಲಿ ಈ ವರ್ಷದ ಮೂರು ತಿಂಗಳಲ್ಲಿ ನಡೆದ 6ನೇ ಭಾರತೀಯರ ಸಾವು ಇದಾಗಿದೆ. ಈಚೆಗಷ್ಟೇ ವಾಷಿಂಗ್ಟನ್‌ನಲ್ಲಿ 41 ವರ್ಷದ ವಿವೇಕ್ ತನೇಜಾ ಎಂಬಾತನ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದರು. ತೀವ್ರ ಗಾಯಗೊಂಡಿದ್ದ ಆತ ಸಾವಿಗೀಡಾಗಿದ್ದ. ಫೆಬ್ರುವರಿ 4ರಂದು ಚಿಕಾಗೋದಲ್ಲಿ ಭಾರತೀಯ ವಿದ್ಯಾರ್ಥಿ ಸೈಯದ್ ಮಜಾಹಿರ್ ಅಲಿ ದಾಳಿಗೀಡಾಗಿ ಹತ್ಯೆಯಾಗಿದ್ದ. ಭಾರತೀಯರ ಮೇಲೆ ನಡೆಯುತ್ತಿರುವ ಸತತ ದಾಳಿಗಳು ಆತಂಕ ಮೂಡಿಸಿವೆ. ಈ ಬಗ್ಗೆ ತೀವ್ರ ಎಚ್ಚರಿಕೆ ವಹಿಸಲಾಗುವುದು ಎಂದು ಅಮೆರಿಕ ಸರ್ಕಾರ ತಿಳಿಸಿದೆ.