ಬ್ಯಾಂಕಾಕ್: ಚೀನಾದ ವುಹಾನ್ನಿಂದ ಕೋವಿಡ್ 19 ಸಾಂಕ್ರಾಮಿಕ ಸೋಂಕು ಜಗತ್ತಿಗೆ ಹರಡಿತು ಎಂಬ ಕುರಿತು ದಿಟ್ಟವಾಗಿ ವರದಿ ಮಾಡಿ, ಪ್ರಪಂಚದಲ್ಲೆಲ್ಲಾ ಸುದ್ದಿಯಾದ ವರದಿಗಾರ್ತಿ ಜಾಂಗ್ ಜಾನ್ ಅವರು ನಾಲ್ಕು ವರ್ಷ ಸೆರೆವಾಸ ಅನುಭವಿಸಿ ಇದೀಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಕೋವಿಡ್ ಕುರಿತು ವರದಿ ಮಾಡಿ ಗಮನ ಸೆಳೆದಿದ್ದ ಜಾನ್ ವಿರುದ್ದ ಸಾಮಾನ್ಯವಾಗಿ ರಾಜಕೀಯ ಪ್ರಕರಣದಲ್ಲಿ ಬಳಸುವ ಸಂಘರ್ಷ ಅಥವಾ ಗಲಭೆಯನ್ನು ಪ್ರಚೋದಿಸುವ ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ತಳ್ಳಲಾಗಿತ್ತು. ಇದೀಗ ಜಾನ್ ತಮ್ಮ ಜೈಲುವಾಸ ಪೂರ್ಣಗೊಳಿಸಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಸಣ್ಣ ವಿಡಿಯೋ ರಿಲೀಸ್ ಮಾಡಿರುವ ಜಾನ್, ಪೊಲೀಸರು ನನ್ನನ್ನು (ಮೇ 13ರಂದು) ಸಹೋದರ ಜಾಂಗ್ ಜು ಮನೆಗೆ ಕರೆತಂದು ಬಿಟ್ಟರು. ನನಗೆ ಸಹಾಯ ಮಾಡಿದ ಮತ್ತು ಕಾಳಜಿ ತೋರಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ತಿಳಿಸಿದ್ದಾರೆ.
ಜಾನ್ ಬಿಡುಗಡೆ ಕೋರಿ ಯುನೈಟೆಡ್ ಕಿಂಗ್ಡಮ್ (ಬ್ರಿಟನ್)ನಲ್ಲಿ ದೊಡ್ಡ ಮಟ್ಟದ ಅಭಿಯಾನ ನಡೆಸಲಾಗಿತ್ತು. ಜಾಂಗ್ ಜೈಲುವಾಸದಿಂದ ಮುಕ್ತಿ ಪಡೆದರೂ ಪೂರ್ಣ ಸ್ವಾತಂತ್ರ್ಯ ಸಿಕ್ಕಿಲ್ಲ. ಏಕೆಂದರೆ, ಪೊಲೀಸರು ಆಕೆಯ ಮೇಲೆ ಇನ್ನೂ ನಿಯಂತ್ರಣ ಹೊಂದಿದ್ದಾರೆ ಎಂದು ವಕೀಲ ವಾಂಗ್ ತಿಳಿಸಿದ್ದಾರೆ.
ಜಾಂಗ್ 2021ರಲ್ಲಿ ಸೆರೆವಾಸದಲ್ಲಿದ್ದಾಗ ಉಪವಾಸ ಸತ್ಯಾಗ್ರಹ ಕೈಗೊಂಡು ಆಸ್ಪತ್ರೆ ಸೇರಿದ್ದರು. ಈ ವೇಳೆ ಕುಟುಂಬಸ್ಥರು ಕೂಡ ಪೊಲೀಸರ ಒತ್ತಡದಿಂದಾಗಿ ಅಪರೂಪಕ್ಕೊಮ್ಮೆ ಎಂಬಂತೆ ಆಕೆಯೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದರು.
ಜಾಂಗ್ ಜಾನ್ ಕುರಿತು ಮತ್ತಷ್ಟು: ಚೀನಾದ ಪತ್ರಕರ್ತೆಯಾಗಿರುವ ಜಾಂಗ್ ಜಾನ್ ಕೋವಿಡ್ ಪೂರ್ವ ದಿನಗಳಲ್ಲಿ (ಫೆ. 2020) ವುಹಾನ್ ನಗರದಲ್ಲಿ ಪ್ರಯಾಣಿಸಿದ್ದರು. ನಗರ ಸುತ್ತಿದ ಅವರು ಕೋವಿಡ್ ವೈರಸ್ ಕುರಿತು ಸಾರ್ವಜನಿಕರ ಆತಂಕ, ಕಳವಳದ ಕುರಿತು ದಾಖಲಿಸಿಕೊಂಡಿದ್ದರು. ಇವರು ಚಿತ್ರೀಕರಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದು ಚೀನಾ ಸರ್ಕಾರವನ್ನು ಕೆರಳಿಸಿತ್ತು.
ಇದನ್ನೂ ಓದಿ: ಕೊರೊನಾ ವೈರಸ್ ಕುರಿತು ಚೀನಾ ಮುಖ್ಯ ಮಾಹಿತಿ ಹಂಚಿಕೊಂಡಿಲ್ಲ: ಮತ್ತೆ ಗುಡುಗಿದ ಅಮೆರಿಕ