ಬೀಜಿಂಗ್: ಭಾರತದ ಅವಿಭಾಜ್ಯ ಅಂಗ ಅರುಣಾಚಲ ಪ್ರದೇಶ ಮತ್ತು ಎಲ್ಎಸಿಯಲ್ಲಿ ಕ್ಯಾತೆ ತೆಗೆಯುವ ನೆರೆಯ ರಾಷ್ಟ್ರ ಚೀನಾ ಈಗ ಮತ್ತೊಂದು ವಿಚಾರದಲ್ಲಿ ಮೂಗು ತೂರಿಸಿದೆ. ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಕೂಟ ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿದ್ದಕ್ಕೆ ಹಲವು ರಾಷ್ಟ್ರಗಳ ನಾಯಕರು ಹಂಗಾಮಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದರು. ದ್ವೀಪರಾಷ್ಟ್ರ ತೈವಾನ್ ಕೂಡ ಶುಭಾಶಯ ಕೋರಿತ್ತು. ಇದಕ್ಕೆ ಪ್ರತಿಯಾಗಿ ನರೇಂದ್ರ ಮೋದಿ ಅವರು ಧನ್ಯವಾದ ಸಲ್ಲಿಸಿದ್ದರು. ತೈವಾನ್ ಮತ್ತು ಭಾರತದ ನಡುವಿನ ಶುಭಾಶಯ ವಿನಿಮಯಕ್ಕೆ ಚೀನಾ ಉರಿದುಬಿದ್ದಿದೆ.
"ತೈವಾನ್ ಜೊತೆಗೆ ಭಾರತ ಯಾವುದೇ ಸಂಪರ್ಕ ಹೊಂದಿರಬಾರದು. ಅದು ಚೀನಾದ ಭೂಭಾಗವಾಗಿದೆ. ತೈವಾನ್ನಲ್ಲಿ ಯಾವುದೇ ಅಧ್ಯಕ್ಷರೂ ಇಲ್ಲ. ಮೋದಿ ಅವರ ತೈವಾನ್ ಜೊತೆಗಿನ ಸಂಬಂಧ ಮುಂದುವರಿಕೆ ಹೇಳಿಕೆಗೆ ಆಕ್ಷೇಪವಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಹೇಳಿದ್ದಾರೆ.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿರುವ ಅವರು, ತೈವಾನ್ ಜೊತೆಗೆ ರಾಜತಾಂತ್ರಿಕ ಸಂಬಂಧ ಹೊಂದಿರುವ ಯಾವುದೇ ರಾಷ್ಟ್ರಗಳ ಅಧಿಕೃತ ಮಾತುಕತೆಯನ್ನು ಚೀನಾ ವಿರೋಧಿಸುತ್ತದೆ. ತೈವಾನ್ ದ್ವೀಪ ಚೀನಾ ಭೂಪ್ರದೇಶದ ಬೇರ್ಪಡಿಸಲಾಗದ ಭಾಗವಾಗಿದೆ. 'ಒನ್ ಚೀನಾ' ತತ್ವಕ್ಕೆ ಯಾವುದೇ ರಾಷ್ಟ್ರಗಳು ಅಡ್ಡಿಯಾಗಬಾರದು. ಭಾರತವು ತೈವಾನ್ ಜೊತೆಗೆ ರಾಜತಾಂತ್ರಿಕ ಮತ್ತು ವ್ಯಾಪಾರ ಸಂಬಂಧಗಳನ್ನು ವೃದ್ಧಿಸುವ ಬಗ್ಗೆ ಮಾತನಾಡಿದೆ. ತೈವಾನ್ ಅಧಿಕಾರಿಗಳ ರಾಜಕೀಯ ಹೇಳಿಕೆಗಳನ್ನು ಅದು ವಿರೋಧಿಸಬೇಕು. ಇಲ್ಲವಾದಲ್ಲಿ ಚೀನಾದ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ತೈವಾನ್- ಮೋದಿ ನಡುವಿನ ಮಾತುಕತೆ: ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕೆ ಹಂಗಾಮಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತೈವಾನ್ ದ್ವೀಪರಾಷ್ಟ್ರ ಅಧ್ಯಕ್ಷ ಲೈ ಚಿಂಗ್ ಟೆ ಅವರು ಅಭಿನಂದನೆ ಸಲ್ಲಿಸಿದ್ದರು. ಚುನಾವಣೆಯಲ್ಲಿ ವಿಜಯ ಸಾಧಿಸಿದ್ದಕ್ಕಾಗಿ ಮೋದಿ ಅವರಿಗೆ ಹೃತ್ಪೂರ್ವಕ ಶುಭಾಶಯಗಳು ಎಂದಿದ್ದರು. ಇದಕ್ಕೆ ಪ್ರತಿಯಾಗಿ ಮೋದಿ ಅವರು ಧನ್ಯವಾದ ತಿಳಿಸಿ, ತೈವಾನ್‌ನೊಂದಿಗೆ ನಿಕಟ ಸಂಬಂಧವನ್ನು ಹೊಂದಲು ಭಾರತ ಎದುರು ನೋಡುತ್ತಿದೆ ಎಂದಿದ್ದರು.
ದ್ವೀಪರಾಷ್ಟ್ರ ತೈವಾನ್ ಅನ್ನು ವಶಪಡಿಸಿಕೊಳ್ಳಲು ಚೀನಾ ಹವಣಿಸುತ್ತಿದ್ದು, ಆ ದೇಶದ ಸುತ್ತಲೂ ವಿಮಾನ, ಯುದ್ಧ ನೌಕೆಗಳನ್ನು ಗಸ್ತು ತಿರುಗಿಸುತ್ತಿದೆ. ಇದನ್ನು ತೈವಾನ್ ಸರ್ಕಾರ ತೀವ್ರವಾಗಿ ವಿರೋಧಿಸುತ್ತಿದೆ. ತೈವಾನ್ ಸ್ವತಂತ್ರ ರಾಷ್ಟ್ರವಾಗಿರಲು ಬಯಸುತ್ತದೆ ಎಂಬುದು ಅಲ್ಲಿನ ಸರ್ಕಾರದ ಅಭಿಮತ.
ಇದನ್ನೂ ಓದಿ: 'ಭಾರತದೊಂದಿಗೆ ಸಂಬಂಧ ಸರಿಪಡಿಸಿಕೊಳ್ಳಲು ಇದು ಸಕಾಲ': ಚೀನಾದ ಸರ್ಕಾರಿ ಮಾಧ್ಯಮ ಅಚ್ಚರಿಯ ಹೇಳಿಕೆ - India China Relations