ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ನೀಡಲಾದ 2 ಬಿಲಿಯನ್ ಡಾಲರ್ ಸಾಲ ಮರುಪಾವತಿಯ ಅವಧಿಯನ್ನು ಚೀನಾ ಮತ್ತೊಂದು ವರ್ಷ ವಿಸ್ತರಿಸಿದೆ ಎಂದು ದೇಶದ ಹಣಕಾಸು ಸಚಿವ ಶಂಶಾದ್ ಅಖ್ತರ್ ಗುರುವಾರ ಹೇಳಿದ್ದಾರೆ. ಜಿಯೋ ನ್ಯೂಸ್ ವರದಿಯ ಪ್ರಕಾರ, ಮಾರ್ಚ್ ನಲ್ಲಿ ಪಾವತಿಸಬೇಕಿದ್ದ ಸಾಲದ ಅವಧಿಯನ್ನು ಮತ್ತೊಂದು ವರ್ಷ ವಿಸ್ತರಿಸಲಾಗಿದೆ.
ಮಾರ್ಚ್ 23 ರಂದು ಮುಕ್ತಾಯಗೊಳ್ಳಲಿರುವ ಸಾಲದ ಮರುಪಾವತಿ ದಿನಾಂಕವನ್ನು ವಿಸ್ತರಿಸಲು ಬೀಜಿಂಗ್ ಮತ್ತು ಇಸ್ಲಾಮಾಬಾದ್ ಒಪ್ಪಂದಕ್ಕೆ ಬಂದಿವೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳನ್ನು ಉಲ್ಲೇಖಿಸಿ ಪಾಕಿಸ್ತಾನದ ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಪಾಕಿಸ್ತಾನದ ಆರ್ಥಿಕತೆಯು ನಗದು ಕೊರತೆಯ ಆರ್ಥಿಕ ಬಿಕ್ಕಟ್ಟಿನಿಂದ ಮೇಲೇಳಲು ಹೆಣಗಾಡುತ್ತಿದೆ.
ಮೂಲಗಳ ಪ್ರಕಾರ, ಚೀನಾ ಆರಂಭದಲ್ಲಿ 2 ಬಿಲಿಯನ್ ಡಾಲರ್ ಸಾಲದ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಲು ಒತ್ತಾಯಿಸಿತ್ತು. ಇಸ್ಲಾಮಾಬಾದ್ ಪ್ರಸ್ತುತ ಆರು ತಿಂಗಳ ಸೆಕ್ಯೂರ್ಡ್ ಓವರ್ ನೈಟ್ ಫೈನಾನ್ಸ್ ರೇಟ್ (ಎಸ್ಒಎಫ್ಆರ್) ಆಧಾರದ ಮೇಲೆ ಶೇಕಡಾ 7.1 ರಷ್ಟು ಬಡ್ಡಿದರ ಪಾವತಿಸುತ್ತಿದೆ. ಏತನ್ಮಧ್ಯೆ, ಪಾಕಿಸ್ತಾನದ ಆಪ್ತ ಮಿತ್ರ ರಾಷ್ಟ್ರವಾದ ಚೀನಾ, ಸಾಲದ ಮರುಪಾವತಿ ಅವಧಿಯನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಿರುವುದಾಗಿ ಅನೌಪಚಾರಿಕವಾಗಿ ತಿಳಿಸಿದೆ ಮತ್ತು ಹಣಕಾಸು ಸಚಿವಾಲಯವು ಔಪಚಾರಿಕ ಪ್ರತಿಕ್ರಿಯೆಗಾಗಿ ಕಾಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷದ ಬೇಸಿಗೆಯಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ 3 ಬಿಲಿಯನ್ ಡಾಲರ್ ಸಾಲ ಪಡೆದ ಪಾಕಿಸ್ತಾನ ತಾತ್ಕಾಲಿಕವಾಗಿ ನಿರಾಳತೆ ಅನುಭವಿಸಿತ್ತು.
ಔಪಚಾರಿಕವಾಗಿ ಮುಕ್ತಾಯಗೊಳ್ಳುವ ಸಾಲಗಳ ಅವಧಿಯನ್ನು ವಿಸ್ತರಿಸುವಂತೆ ಮಧ್ಯಂತರ ಪ್ರಧಾನಿ ಅನ್ವರುಲ್ ಹಕ್ ಕಾಕರ್ ಕಳೆದ ತಿಂಗಳು ಚೀನಾ ಸರ್ಕಾರಕ್ಕೆ ಮನವಿ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ಚೀನಾ, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಪಡೆದ ಸಾಲದ ಮೇಲೆ ಪಾಕಿಸ್ತಾನವು 26.6 ಬಿಲಿಯನ್ ಪಾಕಿಸ್ತಾನಿ ರೂ. ಬಡ್ಡಿ ಪಾವತಿಸಿದೆ.
ಇದಕ್ಕೂ ಹಿಂದಿನ ವರ್ಷದಲ್ಲಿ ದೇಶವು 12.2 ಬಿಲಿಯನ್ ಪಾಕಿಸ್ತಾನಿ ರೂ. ಗಳಷ್ಟು ಬಡ್ಡಿ ಪಾವತಿಸಿತ್ತು. ಇದು ವರ್ಷದಿಂದ ವರ್ಷಕ್ಕೆ ಶೇಕಡಾ 118 ರಷ್ಟು ಏರಿಕೆಯಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಕರೆನ್ಸಿ ಅಪಮೌಲ್ಯವಾಗಿರುವುದು ಬಡ್ಡಿ ಖರ್ಚಿನಲ್ಲಿ ಶೇಕಡಾ 118 ರಷ್ಟು ಹೆಚ್ಚಳದ ಹಿಂದಿನ ಪ್ರಮುಖ ಅಂಶವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಇದನ್ನೂ ಓದಿ: ಮ್ಯಾನ್ಮಾರ್ನ 2 ಟೌನ್ಶಿಪ್ಗಳಲ್ಲಿ ಮಿಲಿಟರಿ ಆಡಳಿತ ಜಾರಿ