ಜೋಹಾನ್ಸ್ ಬರ್ಗ್, ದಕ್ಷಿಣ ಆಫ್ರಿಕಾ: ದಕ್ಷಿಣ ಆಫ್ರಿಕಾದ ಪಶ್ಚಿಮ ಕೇಪ್ ಟೌನ್ನಲ್ಲಿ ಭಾರೀ ಮಳೆ, ಚಂಡಮಾರುತದಿಂದ ಜನರು ತತ್ತರಿಸಿದ್ದು, 1 ಲಕ್ಷಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ. ಅನೇಕ ಮನೆಗಳ ಮೇಲ್ಛಾವಣಿಗಳು ಗಾಳಿಗೆ ಹಾರಿ ಹೋಗಿದ್ದು, ಕೇಪ್ ಟೌನ್ ನಗರದಲ್ಲಿ 33,000 ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ನಗರದಲ್ಲಿ ಚಂಡ ಮಾರುತ, ಮಳೆ ಪರಿಸ್ಥಿತಿ ವಾತಾವರಣ ಮುಂದುವರೆದಿದ್ದು, ಎರಡೂ ಕಡೆ ಭೂ ಕುಸಿತ ಉಂಟಾಗುವ ನಿರೀಕ್ಷೆ ಇದೆ ಎಂದು ಪರಿಸರ ವ್ಯವಹಾರಗಳು ಮತ್ತು ಅಭಿವೃದ್ಧಿ ಯೋಜನೆ ಸಚಿವ ಆಂಟನ್ ಬ್ರೆಡೆಲ್ ಶುಕ್ರವಾರ ತಿಳಿಸಿದ್ದಾರೆ. ನಾವು ಪರಿಸ್ಥಿತಿ ಎದುರಿಸಿ, ಪರಿಹರಿಸಲು ಎಲ್ಲಾ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ತೀವ್ರ ಪ್ರತಿಕೂಲ ಹವಾಮಾನದಿಂದಾಗಿ ಜನರ ಸುರಕ್ಷತೆಗೆ ಹೆಚ್ಚಿನ ಗಮನ ನೀಡಲಾಗಿದೆ.
ಮಳೆ ಪರಿಸ್ಥಿತಿ ನಿರ್ವಹಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರವನ್ನು ಸಂಪರ್ಕಿಸಿದ್ದು, ಶೀಘ್ರದಲ್ಲೇ ಅವರಿಂದ ಉತ್ತರ ನಿರೀಕ್ಷಿಸಿದ್ದೇವೆ. ವೆಸ್ಟರ್ನ್ ಕೇಪ್ ಪ್ರೀಮಿಯರ್ ಅಲನ್ ವಿಂಡೆ ಪ್ರಾಂತ್ಯದಲ್ಲಿ ಮಳೆ ಹಾನಿ ರಕ್ಷಣೆಗೆ ವಿಪತ್ತು ನಿರ್ವಹಣಾ ಕಾರ್ಯಾಚರಣೆ ನಡೆಸಲು ಮತ್ತಷ್ಟು ಮಾನವ ಸಂಪನ್ಮೂಲ ಅಗತ್ಯವಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಳೆ ಸಂತ್ರಸ್ತರ ರಕ್ಷಣೆಗೆ ವಿಪತ್ತು ಕಾರ್ಯಾಚರಣೆ ಕೇಂದ್ರ ರಾತ್ರಿ ಪೂರ್ತಿ ಕಾರ್ಯ ನಿರ್ವಹಿಸಿದೆ. ಚಂಡ ಮಾರುತದ ಹಿನ್ನೆಲೆ ಪಶ್ಚಿಮ ಕೇಪ್ ಪ್ರಾಂತ್ಯದಲ್ಲಿ 4,500 ಜನರ ಸ್ಥಳಾಂತರ ಮಾಡಲಾಗಿದೆ. ಸಂತ್ರಸ್ತರ ರಕ್ಷಣೆಗೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಮುಂದಾಗಿವೆ.
ಕೇಪ್ಟೌನ್ನಲ್ಲಿ ಮಳೆಯಿಂದಾಗಿ 200ಕ್ಕೂ ಹೆಚ್ಚು ಶಾಲೆಗಳಿಗೆ ಅಡ್ಡಿಯಾಗಿದೆ ಎಂದು ವೆಸ್ಟರ್ನ್ ಕೇಪ್ ಶಿಕ್ಷಣ ಇಲಾಖೆ ತಿಳಿಸಿದೆ. ಕೇಪ್ಟೌನ್ನಲ್ಲಿ ಶನಿವಾರ ಮತ್ತು ಭಾನುವಾರ 60 ರಿಂದ 100 ಮಿಮೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರೀ ಮಳೆಯಿಂದ ನದಿಗಳು ತುಂಬಿದ್ದು, ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಹೆಚ್ಚಿದೆ. ಮಳೆಯ ಪ್ರವಾಹದಿಂದ ಮಣ್ಣು ಮತ್ತು ಬಂಡೆ ಕುಸಿತ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಸೂಚಿಸಲಾಗಿದೆ. ಇದೇ ವಾತಾವರಣ ಮುಂದಿನ ಒಂದು ವಾರ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. (ಐಎಎನ್ಎಸ್)
ಇದನ್ನೂ ಓದಿ: ನೇಪಾಳದಲ್ಲಿ ಭಾರೀ ಭೂಕುಸಿತ: ಏಳು ಭಾರತೀಯರು ಸೇರಿ 65 ಜನ ನಾಪತ್ತೆ; ಭರದಿಂದ ಸಾಗಿದ ರಕ್ಷಣಾ ಕಾರ್ಯ