ವಿಟ್ಬಿ: ಕೆನಡಾಕ್ಕೆ ಭೇಟಿ ನೀಡಿದ್ದ ಭಾರತೀಯ ದಂಪತಿ ಮತ್ತು ಅವರ ಮೂರು ತಿಂಗಳ ಮೊಮ್ಮಗ ಸೇರಿ ನಾಲ್ವರು ಸರಣಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಸೋಮವಾರ ಇಲ್ಲಿಯ ಹೆದ್ದಾರಿ 401ರಲ್ಲಿ ಸಂಭವಿಸಿದೆ. ಮಣಿವಣ್ಣನ್, ಮಹಾಲಕ್ಷ್ಮಿ ಮತ್ತು ಅವರ ಮೊಮ್ಮಗ ಮೃತರು ಎಂದು ಪತ್ತೆಹಚ್ಚಲಾಗಿದೆ.
ಮದ್ಯದಂಗಡಿಗೆ ನುಗ್ಗಿ ದರೋಡೆಮಾಡಿ ಕಾರಲ್ಲಿ ಪರಾರಿಯಾಗುತ್ತಿದ್ದ ಆರೋಪಿಯೊಬ್ಬನನ್ನು ಸೆರೆ ಹಿಡಿಯಲು ಪೊಲೀಸರು ಬೆನ್ನತ್ತಿದಾಗ ಈ ಸರಣಿ ಅಪಘಾತ ಸಂಭವಿಸಿದೆ. ಮೃತರಲ್ಲಿ 60 ವರ್ಷದ ಪುರುಷ ಮತ್ತು 55 ವರ್ಷದ ಮಹಿಳೆ ಮತ್ತು ಮೂರು ತಿಂಗಳ ಮಗು ಸಾವನ್ನಪ್ಪಿದೆ. ಮೃತ ದಂಪತಿ ಭಾರತೀಯ ಮೂಲದವರಾಗಿದ್ದಾರೆ.
ಮಗುವಿನ ಪೋಷಕರು ಸಹ ಅದೇ ವಾಹನದಲ್ಲಿ ಪ್ರಯಾಣಿಸುತ್ತಿದ್ದು, ಅವರೂ ಕೂಡ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೇ ದರೋಡೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಒಂಟಾರಿಯೊ ಪೊಲೀಸರು ತಿಳಿಸಿದ್ದಾರೆ. ಹಲವಾರು ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಹಲವು ಗಂಟೆಗಳ ಕಾಲ ಹೆದ್ದಾರಿ ಸಂಚಾರ ಬಂದ್ ಮಾಡಲಾಗಿತ್ತು ಎಂದೂ ಹೇಳಿದ್ದಾರೆ.
ಈ ದುರಂತಕ್ಕೆ ಭಾರತದ ಕಾನ್ಸುಲೇಟ್ ಜನರಲ್ ಸಂತಾಪ ವ್ಯಕ್ತಪಡಿಸಿದ್ದಾರೆ. ಎಕ್ಸ್ ಖಾತೆಯಲ್ಲಿ, "ಹೆದ್ದಾರಿ 401ರಲ್ಲಿ ಸಂಭವಿಸಿದ ಅಪಘಾತದಲ್ಲಿ ಭಾರತೀಯ ಪ್ರಜೆಗಳು ಸಾವನ್ನಪ್ಪಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ. ಗಾಯಗೊಂಡ ಆಸ್ಪತ್ರೆಯಲ್ಲಿರುವ ಉಳಿದ ಇಬ್ಬರನ್ನು ಭೇಟಿ ಮಾಡಿದ್ದು ಸಾಧ್ಯವಿರುವ ಎಲ್ಲ ಸಹಾಯ ಮಾಡುವ ಭರವಸೆ ನೀಡಲಾಗಿದೆ. ಇದಕ್ಕಾಗಿ ನಾವು ಕೆನಡಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ," ಎಂದು ಟೊರೊಂಟೊದ ಭಾರತೀಯ ಕಾನ್ಸುಲೇಟ್ ಜನರಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಪೂರ್ವ ಕಾಂಗೋದ ಎರಡು ಶಿಬಿರಗಳ ಮೇಲೆ ಬಾಂಬ್ ದಾಳಿ: ಮಕ್ಕಳು ಸೇರಿದಂತೆ ಕನಿಷ್ಠ 12 ಜನರ ಸಾವು - Bomb attack