ಒಟ್ಟಾವ, ಕೆನಡಾ: ಉಗ್ರ ನಿಜ್ಜರ್ ಹತ್ಯೆ ವಿಚಾರದಲ್ಲಿ ಕೆನಡಾ ಮತ್ತು ಭಾರತದ ರಾಜತಾಂತ್ರಿಕ ಸಂಬಂಧಗಳು ಮುರಿದುಬಿದ್ದಿವೆ. ಇದರ ಬೆನ್ನಲ್ಲೇ, ಕೆನಡಾ ಭಾರತದ ಮೇಲೆ ಮತ್ತೊಂದು ಗುರುತರ ಆರೋಪ ಮಾಡಿದೆ. 'ಖಲಿಸ್ತಾನಿಗಳ ವಿರುದ್ಧ ಬಿಷ್ಣೋಯ್ ಲಾರೆನ್ಸ್ ಗ್ಯಾಂಗ್ ಅನ್ನು ಭಾರತ ಸರ್ಕಾರ ಬಳಸಿಕೊಳ್ಳುತ್ತಿದೆ' ಎಂದು ಆರೋಪಿಸಿದೆ.
ಕೆನಡಾದ ರಾಷ್ಟ್ರೀಯ ಭದ್ರತೆಯ ಸಹಾಯಕ ಕಮಿಷನರ್ ಬ್ರಿಗಿಟ್ಟೆ ಗೌವಿನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತದ ಏಜೆಂಟರು ಖಲಿಸ್ತಾನಿ ಪರ ವ್ಯಕ್ತಿಗಳನ್ನು ಗುರಿಯಾಗಿಸಲು ಬಿಷ್ಣೋಯ್ ಲಾರೆನ್ಸ್ ಗ್ಯಾಂಗ್ ಅನ್ನು ಬಳಸುತ್ತಿದ್ದಾರೆ. ಅವರ ಮೂಲಕ ನಿಜ್ಜರ್ ಹತ್ಯೆ ಮಾಡಿಸಲಾಗಿದೆ ಎಂದು ದೂರಿದ್ದಾರೆ.
#WATCH | Ottawa, Ontario (Canada): Royal Canadian Mounted Police Commissioner, Mike Duheme says, " ...over the past few years and more recently, law enforcement agencies in canada have successfully investigated and charged a significant number of individuals for their direct… pic.twitter.com/5xtpM3DTwn
— ANI (@ANI) October 14, 2024
ದಕ್ಷಿಣ ಏಷ್ಯಾದ ಜನರನ್ನು, ಅದರಲ್ಲೂ ವಿಶೇಷವಾಗಿ ಖಲಿಸ್ತಾನಿ ಹೋರಾಟಗಾರರನ್ನು ಟಾರ್ಗೆಟ್ ಮಾಡಲಾಗಿದೆ. ತನಿಖೆ ಮತ್ತು ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಬಿಷ್ಣೋಯ್ ಗ್ಯಾಂಗ್ನ ಸಂಘಟಿತ ಅಪರಾಧದ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದರು.
ಬಿಷ್ಣೋಯ್ ಗ್ಯಾಂಗ್ ಭಾರತ ಸರ್ಕಾರದ ಏಜೆಂಟರೊಂದಿಗೆ ಸಂಪರ್ಕ ಹೊಂದಿದೆ. ಸರ್ಕಾರವೇ ಇದರಲ್ಲಿ ಭಾಗಿಯಾದ ಬಗ್ಗೆ ತಮ್ಮ ಬಳಿ ಮಾಹಿತಿ ಇದೆ ಎಂದು ಅಧಿಕಾರಿ ಆರೋಪಿಸಿದರು.
ರಾಯಭಾರಿ ವರ್ಮಾಗೆ ಬೆದರಿಕೆ: ಈ ಮಧ್ಯೆ ಖಲಿಸ್ತಾನಿ ಉಗ್ರ ಸಂಘಟನೆಯಾದ ಸಿಖ್ ಫಾರ್ ಜಸ್ಟಿಸ್ ಕೆನಡಾದಲ್ಲಿರುವ ಭಾರತೀಯ ರಾಯಭಾರಿ ಸಂಜಯ್ ಕುಮಾರ್ ಅವರಿಗೆ ಜೀವ ಬೆದರಿಕೆ ಹಾಕಿದೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿದ್ದು, ಸಂಜಯ್ ಕುಮಾರ್ ಅವರು ಸಂಘಟನೆಗೆ ಸೇರಿದ ನಾಯಕರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದಿದೆ. ಜೊತೆಗೆ, ವರ್ಮಾ ಅವರ ಫೋಟೋಗೆ ಗುಂಡು ಹಾರಿಸಿದ್ದನ್ನು ವಿಡಿಯೋದಲ್ಲಿ ಕಾಣಬಹುದು.
ರಾಜತಾಂತ್ರಿಕರು ಹೊರಕ್ಕೆ: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದ ವಿಚಾರವಾಗಿ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಸಂಘರ್ಷ ಮತ್ತೆ ಭುಗಿಲೆದ್ದಿದ್ದು, ಉಭಯ ರಾಷ್ಟ್ರಗಳ ರಾಜತಾಂತ್ರಿಕರನ್ನು ಹೊರದಬ್ಬಲಾಗಿದೆ. ಭಾರತದಲ್ಲಿರುವ ಕೆನಡಾದ 6 ರಾಜತಾಂತ್ರಿಕ ಅಧಿಕಾರಿಗಳನ್ನು ದೇಶದಿಂದ ಹೊರಕಳುಹಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಇದೇ ವೇಳೆ, ಕೆನಡಾ ಸರ್ಕಾರ ಕೂಡಾ ಭಾರತದ 6 ಮಂದಿ ರಾಜತಾಂತ್ರಿಕ ಅಧಿಕಾರಿಗಳನ್ನು ಹೊರಹಾಕುವ ತೀರ್ಮಾನ ಪ್ರಕಟಿಸಿದೆ.
ಇದನ್ನೂ ಓದಿ: 'ಕೆನಡಾ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ': ಹೈಕಮಿಷನರ್ ವಾಪಸ್ ಕರೆಸಿಕೊಳ್ಳಲು ಭಾರತ ಮಹತ್ವದ ನಿರ್ಧಾರ