ಅಬುಧಾಬಿ: ಯುಎಇ ಮತ್ತು ಕತಾರ್ಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳವಾರ ಅಬುಧಾಬಿಯಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಮೋದಿ ಅವರನ್ನು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅಪ್ಪಿಕೊಳ್ಳುವ ಮೂಲಕ ಬರಮಾಡಿಕೊಂಡರು. ಮತ್ತೊಂದೆಡೆ, ಅನಿವಾಸಿ ಭಾರತೀಯರು 'ಮೋದಿ.. ಮೋದಿ..' ಮತ್ತು 'ಭಾರತ್ ಮಾತಾ ಕೀ ಜೈ' ಎಂಬ ಘೋಷವಾಕ್ಯಗಳನ್ನು ಮೊಳಗಿಸಿದರು. ಇದಕ್ಕೆ ಪ್ರತಿಯಾಗಿ ಪ್ರಧಾನಿ ಜನರತ್ತ ಕೈ ಬೀಸುತ್ತಾ ಹುಮ್ಮಸ್ಸು ಹೆಚ್ಚಿಸಿದರು.
ಫೆ.14ರಂದು ಅಬುಧಾಬಿಯಲ್ಲಿ ನಿರ್ಮಾಣವಾಗಿರುವ ಮೊದಲ ಹಿಂದೂ ದೇಗುಲದ ಉದ್ಘಾಟನೆಗಾಗಿ ಮೋದಿ ಪ್ರವಾಸ ಕೈಗೊಂಡಿದ್ದಾರೆ. ಇಂದು ಅಬುಧಾಬಿಗೆ ಬಂದಿಳಿಯುತ್ತಿದ್ದಂತೆ ಅಧ್ಯಕ್ಷ ನಹ್ಯಾನ್ ಮತ್ತು ಮೋದಿ ನಿಯೋಗ ಮಟ್ಟದ ಮಾತುಕತೆ ನಡೆಸಿದರು. ದ್ವಿಪಕ್ಷೀಯ ಪಾಲುದಾರಿಕೆಯ ಸಂಬಂಧಗಳು ಮತ್ತು ಹೊಸ ಸಹಕಾರದ ಕ್ಷೇತ್ರಗಳ ಕುರಿತು ಚರ್ಚಿಸಿದರು.
ರುಪೇ ಕಾರ್ಡ್ಗೆ ಚಾಲನೆ: ಇದೇ ವೇಳೆ, ಉಭಯ ನಾಯಕರು ಭಾರತದ ಯುಪಿಐ ರುಪೇ ಕಾರ್ಡ್, ಯುಎಇಯ ದೇಶೀಯ ಕಾರ್ಡ್ ಜಯವಾನ್ ಕಾರ್ಡ್ ಸೇವೆಗೆ ಚಾಲನೆ ನೀಡಿದರು. ಅಧ್ಯಕ್ಷ ನಹ್ಯಾನ್ ರುಪೇ ಕಾರ್ಡ್ ಅನ್ನು ಸ್ವೈಪ್ ಮಾಡಿದರು. ಇದು ತತ್‌ಕ್ಷಣ ಪಾವತಿ ವೇದಿಕೆಗಳಾದ ಯುಪಿಐ (ಭಾರತ) ಮತ್ತು ಎಎಎನ್ಐಗಳ (ಯುಎಇ) ಇಂಟರ್‌ಲಿಂಕ್ ಮಾಡುವ ಒಪ್ಪಂದವಾಗಿದೆ. ಎರಡು ದೇಶಗಳ ನಡುವೆ ತಡೆರಹಿತ ಗಡಿಯಾಚೆಗಿನ ವಹಿವಾಟುಗಳನ್ನು ಸುಗಮಗೊಳಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಐಐಟಿ ವಿದ್ಯಾರ್ಥಿಗಳೊಂದಿಗೆ ಸಂವಾದ: ಇದಾದ ಬಳಿಕ ಅಬುಧಾಬಿಯಲ್ಲಿ ಆರಂಭಿಸಲಾಗಿರುವ ದೆಹಲಿ ಐಐಟಿ ಕ್ಯಾಂಪಸ್‌ನ ಮೊದಲ ಬ್ಯಾಚ್ ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ ನಡೆಸಿದರು. ''ಐಐಟಿ ಕ್ಯಾಂಪಸ್ ಭಾರತ ಮತ್ತು ಯುಎಇ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯವಾಗಿದೆ. ಎರಡೂ ರಾಷ್ಟ್ರಗಳ ಯುವಕರನ್ನು ಒಟ್ಟಿಗೆ ಸೇರಿಸುತ್ತದೆ'' ಎಂದು ಪ್ರಧಾನಿ ಹೇಳಿದರು.
ಭಾರತೀಯ ಸಮುದಾಯ ಉದ್ದೇಶಿಸಿ ಭಾಷಣ: ಇದೇ ಸಂದರ್ಭದಲ್ಲಿ ಮೋದಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಇಲ್ಲಿನ ಝಾಯೆದ್ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ ನಡೆದ 'ಅಹ್ಲಾನ್ ಮೋದಿ' ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡು ಪ್ರಧಾನಿಯನ್ನು ಸ್ವಾಗತಿಸಿದರು. ಈ ವೇಳೆ, ಭಾಷಣ ಮಾಡಿದ ಮೋದಿ, "ನೀವು ಇಲ್ಲಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬರುವ ಮೂಲಕ ಇತಿಹಾಸ ಸೃಷ್ಟಿಸಿದ್ದೀರಿ. ನೀವು ಯುಎಇಯ ವಿವಿಧ ಭಾಗಗಳಿಂದ ಮತ್ತು ಭಾರತದ ವಿವಿಧ ರಾಜ್ಯಗಳಿಂದ ಬಂದಿರಬಹುದು. ಆದರೆ, ಪ್ರತಿಯೊಬ್ಬರ ಹೃದಯಗಳು ಬೆಸೆದುಕೊಂಡಿವೆ'' ಎಂದರು.
ಮುಂದುವರೆದು ಮಾತನಾಡಿದ ಮೋದಿ, "ಭಾರತ ಮತ್ತು ಯುಎಇ ನಡುವಿನ ಸ್ನೇಹವನ್ನು ಶ್ಲಾಘಿಸಲು ಇದು ಸೂಕ್ತ ಸಮಯ. ಈ ಐತಿಹಾಸಿಕ ಕ್ರೀಡಾಂಗಣದಲ್ಲಿ ಪ್ರತಿ ಹೃದಯ ಬಡಿತವು ಅದೇ ಭಾವನೆಯನ್ನು ಪ್ರತಿಧ್ವನಿಸುತ್ತದೆ. ಭಾರತ-ಯುಎಇ ದೋಸ್ತಿ ಜಿಂದಾಬಾದ್ (ಸ್ನೇಹಕ್ಕೆ ಜಯವಾಗಲಿ). ಭಾರತವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ ಎಂಬ 140 ಕೋಟಿ ಭಾರತೀಯರಾದ ನಿಮ್ಮ ಸಹೋದರ-ಸಹೋದರಿಯರ ಸಂದೇಶದೊಂದಿಗೆ ನಾನು ಇಲ್ಲಿಗೆ ಬಂದಿದ್ದೇನೆ'' ಎಂದು ತಿಳಿಸಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ಯುಎಇ ಪ್ರವಾಸ ಆರಂಭ: ಅಬುಧಾಬಿಯಲ್ಲಿ ಹಿಂದೂ ದೇಗುಲ ಉದ್ಘಾಟನೆ, ಬಳಿಕ ಕತಾರ್ಗೆ ಭೇಟಿ