ಢಾಕಾ : ಭಾರಿ ಹಿಂಸಾಚಾರಕ್ಕೆ ಕಾರಣವಾಗಿರುವ ವಿವಾದಾತ್ಮಕ ಉದ್ಯೋಗ ಮೀಸಲಾತಿ ವ್ಯವಸ್ಥೆಯ ಬಹುತೇಕ ಮೀಸಲಾತಿಗಳನ್ನು ಬಾಂಗ್ಲಾದೇಶ ಸುಪ್ರೀಂ ಕೋರ್ಟ್ ಜುಲೈ 21 ರಂದು ರದ್ದುಗೊಳಿಸಿದೆ. ಸರಕಾರಿ ಉದ್ಯೋಗಾಕಾಂಕ್ಷಿಗಳಿಗೆ ನೀಡಲಾಗಿದ್ದ ವಿವಾದಾತ್ಮಕ ಕೋಟಾ ವ್ಯವಸ್ಥೆಯಿಂದ ರಾಷ್ಟ್ರವ್ಯಾಪಿ ಅಶಾಂತಿ ಉಂಟಾಗಿದೆ. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಮಾರಣಾಂತಿಕ ಸಂಘರ್ಷದಲ್ಲಿ ಈವರೆಗೆ 114 ಜನ ಮೃತಪಟ್ಟು ಹಲವಾರು ಜನ ಗಾಯಗೊಂಡಿದ್ದಾರೆ.
ಶೇಕಡಾ 93ರಷ್ಟು ಸರ್ಕಾರಿ ಉದ್ಯೋಗಗಳನ್ನು ಅರ್ಹತೆ ಆಧಾರಿತ ವ್ಯವಸ್ಥೆಯಡಿಯಲ್ಲಿಯೇ ಹಂಚಿಕೆ ಮಾಡುವಂತೆ ಸುಪ್ರೀಂ ಕೋರ್ಟ್ ತನ್ನ ಇಂದಿನ ಆದೇಶದಲ್ಲಿ ಸೂಚಿಸಿದೆ. ಉಳಿದ ಶೇಕಡಾ 7 ರಷ್ಟು ಹುದ್ದೆಗಳನ್ನು ಮಾತ್ರ 1971 ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದವರ ಸಂಬಂಧಿಕರಿಗೆ ಮತ್ತು ಇತರ ವರ್ಗಗಳಿಗೆ ಮೀಸಲಿಡುವಂತೆ ಕೋರ್ಟ್ ಆದೇಶಿಸಿದೆ. ಈ ಹಿಂದೆ ಶೇಕಡಾ 30ರಷ್ಟು ಸರ್ಕಾರಿ ಉದ್ಯೋಗಗಳನ್ನು ಯುದ್ಧ ಹೋರಾಟಗಾರರ ಸಂಬಂಧಿಕರಿಗೆ ಮೀಸಲಿಡಲಾಗಿತ್ತು.
ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರವು 2018 ರಲ್ಲಿ ಕೋಟಾ ವ್ಯವಸ್ಥೆಯನ್ನು ರದ್ದುಗೊಳಿಸಿತ್ತು. ಆದರೆ ಕೆಳ ನ್ಯಾಯಾಲಯವು ಕಳೆದ ತಿಂಗಳು ಅದನ್ನು ಪುನಃಸ್ಥಾಪಿಸಿತ್ತು. ಇದು ದೇಶಾದ್ಯಂತ ಪ್ರತಿಭಟನೆಗಳು ಭುಗಿಲೇಳಲು ಕಾರಣವಾಗಿತ್ತು.
ಮೀಸಲಾತಿ ವ್ಯವಸ್ಥೆಯು ಸ್ವಾತಂತ್ರ್ಯ ಚಳವಳಿಯ ನೇತೃತ್ವ ವಹಿಸಿದ್ದ ಪ್ರಧಾನಿ ಶೇಖ್ ಹಸೀನಾ ಅವರ ಬೆಂಬಲಿಗರಿಗೆ ಹೆಚ್ಚಿನ ಲಾಭ ನೀಡುವಂತಿದೆ ಎಂಬುದು ಪ್ರತಿಭಟನಾಕಾರರ ವಾದವಾಗಿದೆ. ಇದನ್ನು ಅರ್ಹತೆ ಆಧಾರಿತ ವ್ಯವಸ್ಥೆಗೆ ಬದಲಾಯಿಸಬೇಕೆಂದು ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಹಿಂಸಾಚಾರದಲ್ಲಿ 114 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಶುಕ್ರವಾರ ಒಂದೇ ದಿನ ಕನಿಷ್ಠ 40 ಜನರು ಮೃತಪಟ್ಟಿದ್ದಾರೆ.
ಸುಪ್ರೀಂ ಕೋರ್ಟ್ನ ತೀರ್ಪಿಗೆ ಪ್ರತಿಭಟನಾಕಾರರ ಪ್ರತಿಕ್ರಿಯೆ ಏನಿದೆ ಎಂಬುದು ತಕ್ಷಣಕ್ಕೆ ತಿಳಿದು ಬಂದಿಲ್ಲ. ಉದ್ಯೋಗ ಮೀಸಲಾತಿಯ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಆರಂಭವಾಗುವ ಮುನ್ನ ಸರ್ಕಾರ ದೇಶದ ಹಲವೆಡೆ ಕರ್ಫ್ಯೂ ವಿಸ್ತರಿಸಿತ್ತು. ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ಘರ್ಷಣೆಗೆ ಕಾರಣವಾದ ಪ್ರತಿಭಟನೆಗಳ ಕೇಂದ್ರವಾದ ರಾಜಧಾನಿ ಢಾಕಾದ ಬೀದಿಗಳಲ್ಲಿ ಸೈನಿಕರು ಗಸ್ತು ತಿರುಗುತ್ತಿದ್ದಾರೆ. ಹಿಂಸಾಚಾರದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ಇಂಟರ್ ನೆಟ್ ಮತ್ತು ಎಸ್ಎಂಎಸ್ ಸಂದೇಶ ಸೇವೆಗಳನ್ನು ಗುರುವಾರದಿಂದ ಸ್ಥಗಿತಗೊಳಿಸಲಾಗಿದೆ.
ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ ಸತತ ನಾಲ್ಕನೇ ಬಾರಿಗೆ ಗೆದ್ದ ಹಸೀನಾ ಅವರ ಸರ್ಕಾರಕ್ಕೆ ಈ ಪ್ರತಿಭಟನೆಗಳು ಮೊದಲ ಸವಾಲಾಗಿದೆ. ಹಿಂಸಾಚಾರದಲ್ಲಿ ಉಂಟಾದ ಪ್ರಾಣಹಾನಿಯನ್ನು ಖಂಡಿಸಿದ ಪ್ರಧಾನಿ ಶೇಖ್ ಹಸೀನಾ, ಜನತೆ ತಾಳ್ಮೆಯಿಂದಿರಲು ಕರೆ ನೀಡಿದ್ದಾರೆ.
ಇದನ್ನೂ ಓದಿ : ಯೆಮೆನ್ನ ತೈಲ ಸಂಗ್ರಹಣಾ ಕೇಂದ್ರಗಳ ಮೇಲೆ ಇಸ್ರೇಲ್ ದಾಳಿ: ಹೌತಿ ಬಂಡುಕೋರರಿಂದ ಪ್ರತೀಕಾರದ ಪ್ರತಿಜ್ಞೆ - Israel Attacks Yemen