ಢಾಕಾ (ಬಾಂಗ್ಲಾದೇಶ): ವಿದ್ಯಾರ್ಥಿಗಳ ದಂಗೆಗೆ ಬೆದರಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಪರಾರಿಯಾಗಿ ಬಂದು ಭಾರತದಲ್ಲಿ ಆಶ್ರಯ ಪಡೆದಿರುವ ಶೇಕ್ ಹಸೀನಾ ವಿರುದ್ಧ ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮದ್ ಯೂನುಸ್ ಕಿಡಿಕಾರಿದ್ದಾರೆ. ಅವರನ್ನು ಮತ್ತೆ ಬಾಂಗ್ಲಾದೇಶಕ್ಕೆ ಕರೆತಂದು ಸಾರ್ವಜನಿಕವಾಗಿ ವಿಚಾರಣೆ ನಡೆಸಲಾಗುವುದು ಎಂದು ಗುಡುಗಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಶೇಕ್ ಹಸೀನಾ ಅವರು ಬಾಂಗ್ಲಾದೇಶದ ಬಗ್ಗೆ ಭಾರತದಲ್ಲಿ ಕುಳಿತು ಮಾತನಾಡುವುದನ್ನು ಮೊದಲು ನಿಲ್ಲಿಸಲಿ. ಅವರನ್ನು ಗಡಿಪಾರು ಮಾಡಲು ಕೇಳುವವರೆಗೆ ಮಾತ್ರ ಭಾರತದಲ್ಲಿ ನೆಮ್ಮದಿಯಾಗಿ ಉಳಿಯಲು ಸಾಧ್ಯ. ಅವರ ಇಲ್ಲಿನ ವಿದ್ಯಮಾನಗಳ ಬಗ್ಗೆ ಮಾತನಾಡದೇ ಇರುವುದು ಅವರಿಗೇ ಒಳಿತು ಎಂದು ಎಚ್ಚರಿಕೆ ನೀಡಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶದ ಮಧ್ಯೆ ಉತ್ತಮ ಬಾಂಧವ್ಯವಿದೆ. ಉಭಯ ರಾಷ್ಟ್ರಗಳ ನಡುವೆ ಕಂದಕ ಉಂಟಾಗದಿರಲು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಮೌನವಾಗಿರಬೇಕು. ಅಲ್ಲಿದ್ದುಕೊಂಡು ರಾಜಕೀಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಇದು ಎರಡೂ ರಾಷ್ಟ್ರಗಳ ನಡುವಿನ ಸಂಬಂಧಕ್ಕೆ ಅಡ್ಡಿಯಾಗಲಿದೆ. ಇದನ್ನು ಭಾರತ ಸರ್ಕಾರವೂ ತಡೆಯಬೇಕು ಎಂದು ಸಲಹೆ ನೀಡಿದರು.
ಹಸೀನಾ ಗಡೀಪಾರಿಗೆ ಕೇಳುತ್ತೇವೆ: ಭಾರತದಲ್ಲಿ ಆಶ್ರಯ ಪಡೆದಿರುವ ಶೇಕ್ ಹಸೀನಾ ಅವರನ್ನು ಅಲ್ಲಿಂದ ಗಡೀಪಾರು ಮಾಡಲು ಮುಂದಿನ ದಿನಗಳಲ್ಲಿ ಬಾಂಗ್ಲಾದೇಶ ಕೇಳಲಿದೆ. ಭಾರತದಲ್ಲಿ ಇದ್ದುಕೊಂಡು ಆಕೆ ನೀಡುತ್ತಿರುವ ಹೇಳಿಕೆಗಳು ಉತ್ತಮವಾಗಿಲ್ಲ. ಅವರನ್ನು ದೇಶದ ಜನರು ಮರೆಯಲು ಬಯಸಿದ್ದಾರೆ. ಬಾಂಗ್ಲಾದ ಬಗ್ಗೆ ಮಾತನಾಡದೇ ಹೋದಲ್ಲಿ ಅವರನ್ನು ಜನರೂ ಕೂಡ ನಿರ್ಲಕ್ಷಿಸುತ್ತಾರೆ. ಹಾಗೊಂದು ವೇಳೆ ಕೆಣಕಿದಲ್ಲಿ ಅವರನ್ನು ದೇಶಕ್ಕೆ ಕರೆತಂದು ವಿಚಾರಣೆ ನಡೆಸಲಾಗುವುದು ಎಂದರು.
ಹಸೀನಾ ಸರ್ಕಾರದಿಂದ ದೇಶದ ಜನರು ಅನ್ಯಾಯಕ್ಕೆ ಒಳಗಾಗಿದ್ದರು. ನ್ಯಾಯಕ್ಕಾಗಿ ಆಕೆಯನ್ನು ದೇಶಕ್ಕೆ ಮರಳಿ ಕರೆತರುವ ಅಗತ್ಯವಿದೆ. ಇಲ್ಲದಿದ್ದರೆ ಬಾಂಗ್ಲಾದೇಶದ ಜನರು ನೆಮ್ಮದಿಯಿಂದ ಇರಲಾರರು. ಆಕೆ ಮಾಡಿದ ದೌರ್ಜನ್ಯವನ್ನು ಎಲ್ಲರ ಮುಂದೆ ವಿಚಾರಣೆಗೆ ಒಳಪಡಿಸಬೇಕು. ಮಧ್ಯಂತರ ಸರ್ಕಾರ ಜನರ ಒಳಿತಿಗಾಗಿ ಎಲ್ಲ ರೀತಿಯ ಶ್ರಮ ವಹಿಸುತ್ತಿದೆ ಎಂದು ಖಾನ್ ಹೇಳಿದ್ದಾರೆ.
ಭಾರತದ ಜೊತೆ ಬಾಂಧವ್ಯ ಮುಂದುವರಿಕೆ: ಶೇಕ್ ಹಸೀನಾ ಅವರಿಗೆ ಭಾರತ ಆಶ್ರಯ ನೀಡಿದ್ದರೂ, ಆ ರಾಷ್ಟ್ರದೊಂದಿಗೆ ಬಾಂಗ್ಲಾ ಉತ್ತಮ ಬಾಂಧವ್ಯ ಮುಂದುವರಿಸಲು ಬಯಸುತ್ತದೆ. ಆದರೆ, ಹಸೀನಾ ಅವರನ್ನು ಬೆಂಬಲಿಸುವುದನ್ನು ಭಾರತ ಬಿಡಬೇಕು. ಅವರಿಂದ ಮಾತ್ರವೇ ದೇಶದ ನಿಯಂತ್ರಣ ಸಾಧ್ಯ ಎಂಬುದನ್ನು ಬದಲಿಸಿಕೊಳ್ಳಬೇಕು. ಅವಾಮಿ ಲೀಗ್ ಮಾತ್ರ ಮೂಲಭೂತ ರಾಜಕೀಯ ಪಕ್ಷವಲ್ಲ ಎಂಬುದನ್ನು ಭಾರತ ಸರ್ಕಾರ ಬಿಡಬೇಕು. ಎಲ್ಲ ಪಕ್ಷಗಳೂ ಮೂಲಭೂತವಾದಿಗಳೇ, ಉಳಿದ ನೆರೆಯ ರಾಷ್ಟ್ರಗಳಂತೆಯೇ ನಮ್ಮನ್ನು ಪರಿಗಣಿಸಲಿ ಎಂದು ಹೇಳಿದರು.
ಹಿಂದುಗಳ ಮೇಲೆ ಹಲ್ಲೆಗೆ ಕಳವಳ: ದಂಗೆಯ ಬಳಿಕ ಬಾಂಗ್ಲಾದೇಶದಲ್ಲಿ ಹಿಂದುಗಳು ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ಆಗುತ್ತಿರುವ ದೌರ್ಜನ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಮೊಹಮದ್ ಯೂನುಸ್, ದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ನಡೆದ ದಾಳಿಗಳಿಗೆ ಕ್ಷಮೆ ಕೋರಲಾಗುವುದು. ಅಲ್ಪಸಂಖ್ಯಾತರನ್ನು ಗುರಿಯಾಗಿಸಿರುವುದು ಸರಿಯಲ್ಲ. ಈ ಸಮಸ್ಯೆಯನ್ನು ಪರಿಹರಿಸುವ ಯತ್ನವನ್ನು ಸರ್ಕಾರ ಮಾಡಲಿದೆ ಎಂಬ ಭರವಸೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶ: ಹಿಂದೂಗಳು ಸೇರಿ ಅಲ್ಪಸಂಖ್ಯಾತ ಸಮುದಾಯದ 49 ಶಿಕ್ಷಕರ ರಾಜೀನಾಮೆ - Bangladesh Violence