ಢಾಕಾ, ಬಾಂಗ್ಲಾದೇಶ: 2021ರಲ್ಲಿ ನೆರೆಯ ಬಾಂಗ್ಲಾದೇಶದಲ್ಲಿನ ಸತ್ಖೀರದ ಶ್ಯಾಮನಗರದಲ್ಲಿರುವ ಜೆಶೋರೇಶ್ವರಿ ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದರು. ಈ ವೇಳೆ ದೇವಿಗೆ ಕಾಣಿಕೆಯಾಗಿ ನೀಡಿದ್ದ ಕಿರೀಟವೇ ಇದೀಗ ಕಳ್ಳತನವಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಎಂದಿನಂತೆ ಪೂರ್ಜಾ ಕಾರ್ಯ ನಡೆಸಿ, ಅರ್ಚಕರು ತೆರಳಿದ್ದಾರೆ. ಇದಾದ ಬಳಿಕ ದುಷ್ಕರ್ಮಿಗಳು ಮಧ್ಯಾಹ್ನ 2.00 ರಿಂದ 2.30ರ ನಡುವೆ ಈ ಕಿರೀಟ ಕಳ್ಳತನ ಮಾಡಿದ್ದಾರೆ. ದೇಗುಲದ ಸ್ವಚ್ಛತಾ ಸಿಬ್ಬಂದಿ ದೇವಿಯ ಕಿರೀಟ ಕಾಣೆಯಾಗಿರುವುದನ್ನು ಮೊದಲು ಪತ್ತೆ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
At the Jeshoreshwari Kali Temple. pic.twitter.com/XsXgBukg9m
— Narendra Modi (@narendramodi) March 27, 2021
ಈ ಕುರಿತು ಮಾತನಾಡಿರುವ ಇನ್ಸ್ಪೆಕ್ಟರ್ ತೈಜುಲ್ ಇಸ್ಲಾಮ್, ದೇಗುಲದ ಸಿಸಿಟಿವಿ ಫೂಟೇಜ್ ತರಸಿಕೊಂಡು ಕಳ್ಳರ ಪತ್ತೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಕಳುವಾಗಿರುವ ಕೀರಿಟವನ್ನು ಬೆಳ್ಳಿ ಮತ್ತು ಬಂಗಾರದಿಂದ ಮಾಡಲಾಗಿದ್ದು, ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಪ್ರತೀಕವಾಗಿ ಇದನ್ನು ಸಮರ್ಪಣೆ ಮಾಡಲಾಗಿತ್ತು.
ಜೆಶೋರೇಶ್ವರಿ ಎಂದರೆ ಯಾರು?: ಹಿಂದೂ ಪುರಾಣದ ಪ್ರಕಾರ, ಜೆಶೋರೇಶ್ವರಿ ದೇಗುಲವೂ ದೇವಿಯ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಜೆಶೋರೇಶ್ವರಿ ಎಂದರೆ ಜೆಶೋರ್ ದೇವತೆ ಎಂಬುದಾಗಿದೆ. 2021ರಲ್ಲಿ ಬಾಂಗ್ಲಾದೇಶ ಪ್ರವಾಸ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 27ರಂದು ಈ ದೇಗುಲಕ್ಕೆ ಭೇಟಿ ನೀಡಿದ್ದರು.
ಆ ದಿನ ದೇವಿಯ ತಲೆಗೆ ಪ್ರಧಾನಿ ನರೇಂದ್ರ ಮೋದಿ ಕಿರೀಟವನ್ನು ತೋಡಿಸಿದ್ದರು. ಕೋವಿಡ್ 19 ಸಾಂಕ್ರಾಮಿಕದ ಬಳಿಕ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ, ಮೊದಲ ವಿದೇಶಿ ಭೇಟಿಯೂ ಇದಾಗಿತ್ತು. ಅಷ್ಟೇ ಅಲ್ಲ ಈ ದೇವಿಗೆ ಕಿರೀಟ ಅರ್ಪಣೆ ಮಾಡಿದ್ದ ವಿಡಿಯೋವನ್ನು ಪ್ರಧಾನಿ ಶೇರ್ ಕೂಡಾ ಮಾಡಿಕೊಂಡಿದ್ದರು.
12 ನೇ ಶತಮಾನದಲ್ಲಿ ನಿರ್ಮಾಣವಾದ ದೇಗುಲ: ಈ ದೇಗುಲವನ್ನು 12 ನೇ ಶತಮಾನದ ಉತ್ತರಾರ್ಧದಲ್ಲಿ ಅನಾರಿ ಎಂಬ ಬ್ರಾಹ್ಮಣರೊಬ್ಬರು ನಿರ್ಮಾಣ ಮಾಡಿದ್ದರು. ಇವರೇ ಜಶೋರೇಶ್ವರಿ ಪೀಠಕ್ಕೆ 100 ಬಾಗಿಲುಗಳ ದೇವಾಲಯವನ್ನು ಸೃಷ್ಟಿಸಿದರು. ಬಳಿಕ ಅದನ್ನು 13 ನೇ ಶತಮಾನದಲ್ಲಿ ಲಕ್ಷ್ಮಣ್ ಸೇನ್ ನವೀಕರಿಸಿದ್ದರು. 16ನೇ ಶತಮಾನದಲ್ಲಿ ಈ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲಾಗಿತ್ತು.
ಹಿಂದೂ ಪುರಾಣಗಳ ಪ್ರಕಾರ, 51 ಪೀಠಗಳಲ್ಲಿ, ಈಶ್ವರಿಪುರದಲ್ಲಿರುವ ದೇವಾಲಯವು ಸತಿ ದೇವಿಯ ಅಂಗೈಗಳು ಬಿದ್ದ ಸ್ಥಳವಾಗಿದೆ. ಇಲ್ಲಿ ದೇವಿಯು ಜಶೋರೇಶ್ವರಿ ದೇವಿ ರೂಪದಲ್ಲಿ ನೆಲೆಸಿದ್ದು, ಶಿವನು ಚಂಡನಾಗಿ ಕಾಣಿಸಿಕೊಂಡಿದ್ದಾನೆ ಎಂದು ಐತಿಹ್ಯವಿದೆ.
ಇದನ್ನೂ ಓದಿ: ರತನ್ ಟಾಟಾಗೆ ಮೋದಿ ಮಾಡಿದ್ದ WEL COME ಎಂಬ ಸಂದೇಶ, ಕರ್ನಾಟಕಕ್ಕೆ ತಪ್ಪಿಸಿತ್ತು ಅವಕಾಶ: ಏನಿದು ಕಥೆ?