ಬಾಲ್ಟಿಮೋರ್ (ಅಮೆರಿಕ): ಶ್ರೀಲಂಕಾದ ಕೊಲಂಬೊಗೆ ತೆರಳುತ್ತಿದ್ದ 22 ಭಾರತೀಯರಿದ್ದ ಕಂಟೈನರ್ ಹಡಗು ಮಂಗಳವಾರ ಮುಂಜಾನೆ ಇಲ್ಲಿನ ಪ್ಯಾಟಾಪ್ಸ್ಕೋ ನದಿ ಮೇಲಿನ ಸೇತುವೆಗೆ ಡಿಕ್ಕಿ ಹೊಡೆದ ಘಟನೆಯಲ್ಲಿ 6 ಮಂದಿ ಸಾವಿಗೀಡಾಗಿದ್ದಾರೆ. ದುರಂತ ಸಂಭವಿಸುವ ಬಗ್ಗೆ ಮೊದಲೇ ಹಡಗಿನಲ್ಲಿದ್ದ ಭಾರತೀಯರು ನೀಡಿದ ಮಾಹಿತಿಯಿಂದಾಗಿ ಇನ್ನಷ್ಟು ಪ್ರಾಣ ಹಾನಿ ತಡೆಯಲಾಗಿದೆ ಎಂದು ಮೇರಿಲ್ಯಾಂಡ್ ಗವರ್ನರ್ ತಿಳಿಸಿದ್ದಾರೆ.
ಎಚ್ಚರಿಕೆ ಕಳುಹಿಸಿದ ಭಾರತೀಯರು: ಹಡಗು ನಿಯಂತ್ರಣ ಕಳೆದುಕೊಂಡು ವೇಗವಾಗಿ ಸಾಗುತ್ತಿದ್ದಾಗ ಸೇತುವೆಗೆ ಡಿಕ್ಕಿಯಾಗುವ ಸಾಧ್ಯತೆ ಬಗ್ಗೆ ಮೊದಲೇ ಊಹಿಸಿ ಹಡಗಿನಲ್ಲಿದ್ದ ಭಾರತೀಯರು ಮೇ ಡೇ ಕರೆ ಮಾಡಿ ಮಾಹಿತಿ ನೀಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಅಲ್ಲಿನ ಪೊಲೀಸರು ಸೇತುವೆಯ ಮೇಲೆ ವಾಹನಗಳ ಸಂಚಾರವನ್ನು ತಡೆದರು.
ಇದಾದ ಕೆಲವೇ ನಿಮಿಷಗಳಲ್ಲಿ ಹಡಗು ಸೇತುವೆಗೆ ಡಿಕ್ಕಿ ಹೊಡೆಯಿತು. ಭಾರತೀಯರ ಸಮಯಪ್ರಜ್ಞೆಯಿಂದಾಗಿ ನೂರಾರು ಜೀವಗಳು ಉಳಿದಿವೆ. ಭಾರತೀಯ ಸಿಬ್ಬಂದಿ ನೈಜ ಹೀರೋಗಳು ಎಂದು ಮೇರಿಲ್ಯಾಂಡ್ ಗವರ್ನರ್ ವೆಸ್ ಮೂರ್ ಶ್ಲಾಘಿಸಿದ್ದಾರೆ. ಹಡಗು ಸೇತುವೆಗೆ ಕಟ್ಟಲಾಗಿದ್ದ ಕಂಬಕ್ಕೆ ರಭಸವಾಗಿ ಡಿಕ್ಕಿ ಹೊಡೆದಾಗ, ಇಡೀ ಸೇತುವೆ ಉದುರಿ ಬೀಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲಾಗಿದೆ. ಡಿಕ್ಕಿ ಹೊಡೆದ ಕೆಲವೇ ನಿಮಿಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ.
ವೀರ ಭಾರತೀಯರು - ಗವರ್ನರ್: ಹಡಗು ಸೇತುವೆಯ ಕಡೆಗೆ ಅತಿ ವೇಗದ ವೇಗದಲ್ಲಿ ನುಗ್ಗಿ ಬರುತ್ತಿರುವುದನ್ನು ಗ್ರಹಿಸಿದ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿ ಮೇ ಡೇ ಸೂಚನೆ ಕಳುಹಿಸಿದರು. ಮಾಹಿತಿ ಬಂದ ತಕ್ಷಣವೇ ಪೊಲೀಸರು ಸೇತುವೆ ಮೇಲೆ ವಾಹನಗಳನ್ನು ತಡೆದಿದ್ದಾರೆ. ಸಮಯ ಇದ್ದ ಕಾರಣ ಸೇತುವೆ ಮೇಲೆ ಸಾಗುತ್ತಿದ್ದ ವಾಹನಗಳನ್ನು ತಡೆಯಲು ಸಹಕಾರಿಯಾಯಿತು ಎಂದು ಗವರ್ನರ್ ವೆಸ್ ಮೂರ್ ಹೇಳಿದ್ದಾರೆ.
ಕೊಲಂಬೊಗೆ ತೆರಳುತ್ತಿದ್ದ ಹಡಗು: ಸಿಂಗಾಪುರದ ಫ್ಲ್ಯಾಗ್ ಶಿಪ್ 'ಡಲ್ಲಿ' ಬಾಲ್ಟಿಮೋರ್‌ನಿಂದ ಶ್ರೀಲಂಕಾದ ರಾಜಧಾನಿ ಕೊಲಂಬೊಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ನೌಕೆಯು 985 ಅಡಿ ಉದ್ದ ಮತ್ತು 157 ಅಡಿ ಅಗಲವಿದೆ. ಈ ಹಡಗನ್ನು ಮಾರ್ಸ್ಕ್ ಶಿಪ್ಪಿಂಗ್ ಕಂಪನಿ ಚಾರ್ಟರ್ ಮಾಡಿತ್ತು. ಅಪಘಾತದ ಸುದ್ದಿಯಿಂದ ನಾಸ್ಡಾಕ್ ಕೋಪನ್ ಹ್ಯಾಗನ್ ಷೇರುಗಳು ಶೇ.2ರಷ್ಟು ಕುಸಿದವು.
1977ರಲ್ಲಿ ನಿರ್ಮಿಸಲಾಗಿದ್ದ ಸೇತುವೆ: ಬಾಲ್ಟಿಮೋರ್ನಲ್ಲಿರುವ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯನ್ನು 1977ರಲ್ಲಿ ನಗರದ ಪಾಟಾಪ್‌ಸ್ಕೋ ನದಿ ಮೇಲೆ ನಿರ್ಮಿಸಲಾಗಿದೆ. ಬಾಲ್ಟಿಮೋರ್ ಅಮೆರಿಕದ ಪೂರ್ವ ಕರಾವಳಿಯಲ್ಲಿದ್ದು ಇದು ಪ್ರಮುಖ ಸರಕು ಸಾಗಣೆ ಕೇಂದ್ರ.