ಟೆಲ್ ಅವೀವ್ (ಇಸ್ರೇಲ್) : ನಜರೆತ್ ನಗರದಲ್ಲಿರುವ ಅಲ್ ಜಜೀರಾ ಮಾಧ್ಯಮ ಸಂಸ್ಥೆಯ ಕಚೇರಿಗಳ ಮೇಲೆ ಇಸ್ರೇಲಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ಸಮಯದಲ್ಲಿ ಅರಬ್ ಭಾಷಾ ಟಿವಿ ಚಾನೆಲ್ ಆಗಿರುವ ಅಲ್ ಜಜೀರಾ ಕಚೇರಿಯಲ್ಲಿನ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇಸ್ರೇಲ್ ಸರ್ಕಾರ ಇತ್ತೀಚೆಗೆ ಅಲ್ ಜಜೀರಾ ಮಾಧ್ಯಮ ಸಂಸ್ಥೆಯು ತನ್ನ ದೇಶದಲ್ಲಿ ಕಾರ್ಯಾಚರಣೆ ನಡೆಸದಂತೆ ನಿಷೇಧ ಹೇರಿತ್ತು. ಅದಾಗಿ ಕೆಲವೇ ದಿನಗಳ ನಂತರ ಅದರ ಕಚೇರಿಗಳ ಮೇಲೆ ಪೊಲೀಸ್ ದಾಳಿ ನಡೆದಿದೆ. ಸದ್ಯ ಇಸ್ರೇಲ್ನಲ್ಲಿ ಅಲ್ ಜಜೀರಾ ಚಾನೆಲ್ ಪ್ರಸಾರ ಸ್ಥಗಿತಗೊಳಿಸಲಾಗಿದೆ.
ಅಲ್ ಜಜೀರಾ ಚಾನೆಲ್ ಅನ್ನು ನಿರ್ಬಂಧಿಸುವ ಆದೇಶಕ್ಕೆ ಇಸ್ರೇಲ್ನ ಸಂವಹನ ಸಚಿವರು ಭಾನುವಾರ ಸಹಿ ಹಾಕಿದ್ದಾರೆ. ಅದೇ ದಿನದಂದು ಪೂರ್ವ ಜೆರುಸಲೇಂನ ಅಂಬಾಸಿಡರ್ ಹೋಟೆಲ್ನಲ್ಲಿರುವ ಅಲ್ ಜಜೀರಾ ಕಚೇರಿಯ ಮೇಲೆ ದಾಳಿ ನಡೆಸಲಾಯಿತು. ಗಾಜಾ ಯುದ್ಧದ ಸುದ್ದಿಗಳ ಪ್ರಸಾರದಲ್ಲೀ ಚಾನೆಲ್ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಒಂದು ತಿಂಗಳ ಹಿಂದೆಯೇ ಇಸ್ರೇಲ್ನಲ್ಲಿ ಅಲ್ ಜಜೀರಾದ ಕಚೇರಿಗಳನ್ನು ಮುಚ್ಚಿಸುವ ಉದ್ದೇಶದ ಬಗ್ಗೆ ಮಾತನಾಡಿದ್ದರು.
ಇಸ್ರೇಲಿನ ಸಂಸತ್ತು ಈ ಹಿಂದೆ ಅಲ್ ಜಜೀರಾ ಕಾನೂನು ಎಂದು ಕರೆಯಲ್ಪಡುವ ಮಸೂದೆಗೆ ಅಂಗೀಕಾರ ನೀಡಿತ್ತು. ಈ ಕಾನೂನಿನ ಪ್ರಕಾರ ದೇಶದ ಭದ್ರತೆಗೆ ಅಪಾಯಕರವೆಂದು ಕಂಡು ಬರುವ ಯಾವುದೇ ವಿದೇಶಿ ಮಾಧ್ಯಮ ಸಂಸ್ಥೆಗಳು ದೇಶದಲ್ಲಿ ಕಾರ್ಯನಿರ್ವಹಿಸದಂತೆ ನಿರ್ಬಂಧ ಹೇರಬಹುದು.
ಇಸ್ರೇಲ್ನ ಆರೋಪಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಅಲ್ ಜಜೀರಾ, ತನ್ನ ವಿರುದ್ಧದ ನಿಷೇಧ ಆದೇಶವು ಮಾನವ ಹಕ್ಕುಗಳು ಮತ್ತು ಮಾಹಿತಿ ತಿಳಿಯುವ ಜನತೆಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಕ್ರಿಮಿನಲ್ ಕೃತ್ಯವಾಗಿದೆ ಎಂದು ಹೇಳಿದೆ. ಇಸ್ರೇಲ್ ಕ್ರಮದ ವಿರುದ್ಧ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಮತ್ತು ಕಂಪನಿಯ ಹಾಗೂ ಉದ್ಯೋಗಿಗಳ ಹಕ್ಕುಗಳನ್ನು ರಕ್ಷಿಸುವುದಾಗಿ ಅಲ್ ಜಜೀರಾ ಹೇಳಿದೆ.
ಅರೇಬಿಕ್ ಭಾಷೆಯ ಟೆಲಿವಿಷನ್ ಸುದ್ದಿ ನೆಟ್ ವರ್ಕ್ ಆಗಿರುವ ಅಲ್ ಜಜೀರಾ ಅನ್ನು 1996 ರಲ್ಲಿ ಕತಾರ್ನ ಎಮಿರ್ ಶೇಖ್ ಹಮದ್ ಇಬ್ನ್ ಖಲೀಫಾ ಅಲ್ ಥಾನಿ ಸ್ಥಾಪಿಸಿದರು. ನಂತರ ಇದು ದೋಹಾ, ಕತಾರ್ ಮತ್ತು ಪ್ರಪಂಚದಾದ್ಯಂತ ಕಾರ್ಯಾಚರಣೆ ಪ್ರಾರಂಭಿಸಿತು.
ಇದನ್ನೂ ಓದಿ : ಪಾಕಿಸ್ತಾನ: ನಿದ್ರೆಯಲ್ಲಿದ್ದ 7 ಜನರನ್ನು ಗುಂಡಿಕ್ಕಿ ಸಾಯಿಸಿದ ಉಗ್ರರು - Pak Terror Attack