ದುಬೈ: ಅಬುಧಾಬಿಯಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಬಿಎಪಿಎಸ್ ಹಿಂದೂ ದೇವಸ್ಥಾನವು ಮಾರ್ಚ್ 1ರಿಂದ ಸಾರ್ವಜನಿಕರ ದರ್ಶನಕ್ಕೆ ತೆರೆದುಕೊಳ್ಳಲಿದೆ. ಈ ಶುಭ ಸಂದರ್ಭದ ಅಂಗವಾಗಿ ನಡೆದ ಹಿಂದೂ ಸಮುದಾಯದ ಸದಸ್ಯರ ಭವ್ಯ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ಸಾಂಪ್ರದಾಯಿಕ ಭಾರತೀಯ ಉಡುಪನ್ನು ಧರಿಸಿದ್ದ 1100ಕ್ಕೂ ಹೆಚ್ಚು ಭಾರತೀಯ ಮೂಲದ ಭಕ್ತರು ಭಕ್ತಿಗೀತೆ ಹಾಡುತ್ತ, ನೃತ್ಯ ಮಾಡುತ್ತ ಪಲ್ಲಕ್ಕಿ ಯಾತ್ರೆ ಯಲ್ಲಿ ಭಾಗವಹಿಸಿದ್ದರು ಎಂದು ಖಲೀಜ್ ಟೈಮ್ಸ್ ಪತ್ರಿಕೆ ಬುಧವಾರ ವರದಿ ಮಾಡಿದೆ.
'ಸಾಮರಸ್ಯದ ಹಬ್ಬ'ದ ಅಂಗವಾಗಿ ಭಾನುವಾರ ನಡೆದ ಮೆರವಣಿಗೆಯಲ್ಲಿ ದೇವಾಲಯದ ಏಳು ಪ್ರಮುಖ ದೇವಸ್ಥಾನಗಳ ವಿಗ್ರಹಗಳನ್ನು ಅಲಂಕೃತ ಪಲ್ಲಕ್ಕಿಗಳಲ್ಲಿ ಇರಿಸಿ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಲಾಯಿತು. ನಂತರ ಬಿಎಪಿಎಸ್ ಹಿಂದೂ ಮಂದಿರದ ಯೋಜನಾ ಮುಖ್ಯಸ್ಥ ಬ್ರಹ್ಮವಿಹಾರಿದಾಸ್ ಸ್ವಾಮಿ ಸಮುದಾಯವನ್ನುದ್ದೇಶಿಸಿ ಭಾಷಣ ಮಾಡಿದರು.
"ಮಂದಿರದ ಸುತ್ತಲೂ ಪ್ರದಕ್ಷಿಣೆ ಹಾಕುತ್ತ ನೃತ್ಯ ಮಾಡುತ್ತಿದ್ದ ಇಷ್ಟೊಂದು ಭಕ್ತಾದಿಗಳ ಭಕ್ತಿ, ಸಂತೋಷಗಳನ್ನು ನಾನು ಹಿಂದೆಂದೂ ನೋಡಿಲ್ಲ. ನಮ್ಮೆಲ್ಲರಿಗಾಗಿ ಇಲ್ಲಿಗೆ ಮುಕ್ತ ಅವಕಾಶ ನೀಡಿದ್ದಕ್ಕಾಗಿ ಮತ್ತು ಎಲ್ಲರಿಗೂ ಸ್ವಾಗತ ನೀಡಿದ್ದಕ್ಕಾಗಿ ನಾವು ಬಿಎಪಿಎಸ್ ಮಂದಿರಕ್ಕೆ ಧನ್ಯವಾದ ಅರ್ಪಿಸುತ್ತೇವೆ. ಇದು ನಮ್ಮದೇ ದೇವಸ್ಥಾನ ಎಂಬ ಭಾವ ನಮ್ಮದಾಗಿದೆ. ಇದೆಲ್ಲದಕ್ಕಾಗಿ ಗುರು ಮಹಂತ್ ಸ್ವಾಮಿ ಮಹಾರಾಜ್ ಅವರಿಗೆ ಧನ್ಯವಾದ ಅರ್ಪಿಸುತ್ತೇವೆ" ಎಂದು ಸಮುದಾಯದ ಸದಸ್ಯೆ ಲೀನಾ ಬರೋಟ್ ಖಲೀಜ್ ಟೈಮ್ಸ್ ಗೆ ತಿಳಿಸಿದರು.
ಮಾರ್ಚ್ 1 ರಿಂದ ಬೆಳಗ್ಗೆ 9 ರಿಂದ ರಾತ್ರಿ 8 ರವರೆಗೆ ಸಾರ್ವಜನಿಕರು ಮಂದಿರಕ್ಕೆ ಭೇಟಿ ನೀಡಿ ಮುಕ್ತವಾಗಿ ದೇವರ ದರ್ಶನ ಪಡೆಯಬಹುದಾಗಿದೆ. ಪ್ರತಿ ಸೋಮವಾರ ಭಕ್ತಾದಿಗಳಿಗೆ ದೇವಾಲಯ ಮುಚ್ಚಲ್ಪಟ್ಟಿರುತ್ತದೆ ಎಂದು ದೇವಾಲಯದ ಅಧಿಕಾರಿಗಳು ಮಂಗಳವಾರ ಪ್ರಕಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಗಲ್ಫ್ ರಾಷ್ಟ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಫೆಬ್ರವರಿ 14 ರಂದು ಈ ದೇವಾಲಯ ಉದ್ಘಾಟಿಸಿದ್ದರು ಮತ್ತು ಭವ್ಯ ಸಮಾರಂಭದಲ್ಲಿ 5,000 ಕ್ಕೂ ಹೆಚ್ಚು ಆಹ್ವಾನಿತರು ಭಾಗವಹಿಸಿದ್ದರು.
ಸುಮಾರು 700 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಈ ದೇವಾಲಯವು ಅಲ್ ರಹ್ಬಾ ಬಳಿಯ ಅಬು ಮುರೇಖಾದಲ್ಲಿ 27 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ ಮತ್ತು ರಾಜಸ್ಥಾನದಿಂದ ತರಿಸಲಾದ 1.8 ಮಿಲಿಯನ್ ಘನ ಮೀಟರ್ ಮರಳುಗಲ್ಲುಗಳನ್ನು ಬಳಸಿ ಇದನ್ನು ನಿರ್ಮಿಸಲಾಗಿದೆ.
ಇದನ್ನೂ ಓದಿ: ಇಸ್ರೇಲ್-ಹಮಾಸ್ ಸಂಘರ್ಷ: ಮಾರ್ಚ್ 10ಕ್ಕೂ ಮುನ್ನ ಕದನ ವಿರಾಮ ಸಾಧ್ಯತೆ