ಜೆರುಸಲೇಂ(ಇಸ್ರೇಲ್): ಕೇಂದ್ರ ಗಾಜಾದಲ್ಲಿ ಹಮಾಸ್ ನಡೆಸಿದ ದಾಳಿಯಲ್ಲಿ 21 ಇಸ್ರೇಲ್ ಸೈನಿಕರು ಸಾವನ್ನಪ್ಪಿದ್ದಾರೆ. ಯುದ್ಧಾರಂಭವಾದ ನಂತರ ಒಂದೇ ದಾಳಿಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಇಸ್ರೇಲ್ ಸೈನಿಕರು ಪ್ರಾಣ ಕಳೆದುಕೊಂಡಿರುವುದು ಇದೇ ಮೊದಲು. ಈ ಸೈನಿಕರ ಸಾವಿನ ನಂತರ ಹಮಾಸ್ ಜೊತೆಗಿನ ಹೋರಾಟದಲ್ಲಿ ಇಸ್ರೇಲ್ ಸೇನೆ 200ಕ್ಕೂ ಹೆಚ್ಚು ಯೋಧರನ್ನು ಕಳೆದುಕೊಂಡಿದೆ.
ಇಸ್ರೇಲ್ ಸೇನಾ ವಕ್ತಾರ ರೇರ್ ಅಡ್ಮಿರಲ್ ಡೇನಿಯಲ್ ಹಗರಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇಸ್ರೇಲ್ ಸೈನಿಕರು ಎರಡು ಕಟ್ಟಡಗಳನ್ನು ಸ್ಫೋಟಿಸಲು ಪ್ರಯತ್ನಿಸುತ್ತಿದ್ದಾಗ ದಾಳಿ ನಡೆದಿದೆ ಎಂದು ಅವರು ತಿಳಿಸಿದರು. "ಘಟನೆ ಸಂಭವಿಸಿದ ಕಟ್ಟಡದಲ್ಲಿದ್ದ ಅಪಾರ ಪ್ರಮಾಣದ ಸ್ಫೋಟಕಗಳನ್ನು ಇಸ್ರೇಲ್ ಸೈನಿಕರು ಸಂಗ್ರಹಿಸುತ್ತಿದ್ದರು. ಅದೇ ಸಮಯದಲ್ಲಿ, ಒಬ್ಬ ಹಮಾಸ್ ಉಗ್ರ ರಾಕೆಟ್ ಪ್ರೊಪೆಲ್ಲೆಂಟ್ ಗ್ರೆನೇಡ್ನೊಂದಿಗೆ ದಾಳಿ ನಡೆಸಿದ. ಇದರಿಂದ ನಿಗದಿತ ಸಮಯಕ್ಕಿಂತ ಮೊದಲೇ ಸ್ಫೋಟಕಗಳು ಸ್ಫೋಟಗೊಂಡವು. ಎರಡು ಕಟ್ಟಡಗಳು ಸಂಪೂರ್ಣ ನಾಶವಾಗಿವೆ. ಹೀಗಾಗಿ ಆ ಎರಡು ಕಟ್ಟಡಗಳ ಅವಶೇಷಗಳು ಸೈನಿಕರ ಮೇಲೆ ಕುಸಿದುಬಿದ್ದಿವೆ. ಸುಮಾರು 21 ಸೈನಿಕರು ಸಾವನ್ನಪ್ಪಿದ್ದಾರೆ" ಎಂದು ಅವರು ಮಾಹಿತಿ ನೀಡಿದರು.
ಹಮಾಸ್ ಉಗ್ರಗಾಮಿ ಗುಂಪನ್ನು ಹತ್ತಿಕ್ಕುವವರೆಗೆ ಮತ್ತು ಗಾಜಾದಲ್ಲಿ ಬಂಧಿಯಾಗಿರುವ 100ಕ್ಕೂ ಹೆಚ್ಚು ಒತ್ತೆಯಾಳುಗಳು ಬಿಡುಗಡೆ ಆಗುವವರೆಗೂ ಯುದ್ಧ ಮುಂದುವರಿಸುವುದಾಗಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈಗಾಗಲೇ ಪ್ರತಿಜ್ಞೆ ಮಾಡಿದ್ದಾರೆ. ಒತ್ತೆಯಾಳುಗಳ ಕುಟುಂಬಗಳು ಮತ್ತು ಅವರ ಅನೇಕ ಬೆಂಬಲಿಗರು ಇಸ್ರೇಲ್ ಕದನ ವಿರಾಮ ಒಪ್ಪಂದಕ್ಕೆ ಮುಂದಾಗುವಂತೆ ಕರೆ ನೀಡಿದ್ದಾರೆ.
ಹೆಚ್ಚುತ್ತಿರುವ ಸಾವಿನ ಸಂಖ್ಯೆ ಮತ್ತು ಭೀಕರ ಮಾನವೀಯ ಪರಿಸ್ಥಿತಿಯು ಆಕ್ರಮಣವನ್ನು ಹಿಮ್ಮೆಟ್ಟಿಸಲು ಮತ್ತು ಯುದ್ಧದ ನಂತರ ಪ್ಯಾಲೆಸ್ಟೀನಿಯನ್ ರಾಜ್ಯ ರಚಿಸುವ ಬಗ್ಗೆ ಮಾತುಕತೆ ನಡೆಸಲು ಅಂತಾರಾಷ್ಟ್ರೀಯ ಒತ್ತಡವೂ ಹೆಚ್ಚುತ್ತಿದೆ. ಆದರೆ ನೆತನ್ಯಾಹು ಎರಡೂ ಬೇಡಿಕೆಗಳನ್ನೂ ತಿರಸ್ಕರಿಸಿದ್ದಾರೆ.
ಶಾಂತಿ ಮಾತುಕತೆ ಮುಂದಿನ ವಾರ ಪುನಾರಂಭ?: ಒತ್ತೆಯಾಳುಗಳ ವಿನಿಮಯ ಮತ್ತು ಗಾಜಾದಲ್ಲಿ ಕದನ ವಿರಾಮಕ್ಕಾಗಿ ಹಮಾಸ್ ಮತ್ತು ಇಸ್ರೇಲ್ ನಡುವಿನ ಮಾತುಕತೆ ಈ ವಾರ ಕೈರೋದಲ್ಲಿ ಪುನರಾರಂಭಗೊಳ್ಳಲಿದೆ. ಅಮೆರಿಕದ ಮಧ್ಯಪ್ರಾಚ್ಯ ರಾಯಭಾರಿ ಬ್ರೆಟ್ ಮೆಕ್ಗುರ್ಕ್ ಗಾಜಾದಲ್ಲಿರುವ ಒತ್ತೆಯಾಳುಗಳ ಬಿಡುಗಡೆಯ ಮಾತುಕತೆಯ ನೇತೃತ್ವ ವಹಿಸಲಿದ್ದಾರೆ.
ಇದನ್ನೂ ಓದಿ: ಇಸ್ರೇಲ್, ಹಮಾಸ್ ಶಾಂತಿ ಮಾತುಕತೆ ಮುಂದಿನ ವಾರ ಪುನಾರಂಭ ಸಾಧ್ಯತೆ