ಪೇಶಾವರ, ಪಾಕಿಸ್ತಾನ: ವಾಯವ್ಯ ಪಾಕಿಸ್ತಾನದಲ್ಲಿ ಬಸ್ ಅಪಘಾತ ನಡೆದು 20 ಮಂದಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಪ್ರಯಾಣಿಕರ ಬಸ್ಸೊಂದು ಪರ್ವತ ಪ್ರದೇಶದಿಂದ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಿಲ್ಗಿಟ್ - ಬಾಲ್ಟಿಸ್ತಾನ್ ಪ್ರದೇಶದ ಡೈಮರ್ ಜಿಲ್ಲೆಯ ಕಾರಾಕೋರಂ ಹೆದ್ದಾರಿಯಲ್ಲಿ ಬಸ್ ರಾವಲ್ಪಿಂಡಿಯಿಂದ ಹುಂಜಾಗೆ ತೆರಳುತ್ತಿತ್ತು. ಈ ವೇಳೆ ಚಾಲಕನಿಗೆ ಬಸ್ ನಿಯಂತ್ರಣ ತಪ್ಪಿದೆ. ಪರಿಣಾಮ ಕಂದಕಕ್ಕೆ ಬಸ್ ಉರುಳಿದೆ. ಬಸ್ನಲ್ಲಿ ಒಟ್ಟು ಎಷ್ಟು ಪ್ರಯಾಣಿಕರಿದ್ದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯಲ್ಲಿ ಕನಿಷ್ಠ 15 ಜನ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಚಿಲಾಸ್‌ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಗಳು ಪ್ರಗತಿಯಲ್ಲಿದ್ದು, ಮೃತ ದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃತರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಘಟನೆಯ ಬಗ್ಗೆ ಗಿಲ್ಗಿಟ್ ಬಾಲ್ಟಿಸ್ತಾನ್ ಮುಖ್ಯಮಂತ್ರಿ ಹಾಜಿ ಗುಲ್ಬರ್ ಖಾನ್ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ತಕ್ಷಣದ ವೈದ್ಯಕೀಯ ನೆರವು ನೀಡುವಂತೆ ಆಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.
ಅಪಘಾತದಿಂದಾಗಿ ಚಿಲಾಸ್ ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಗಿಲ್ಟ್‌ಗಿಟ್-ಬಾಲ್ಟಿಸ್ತಾನ್ ಸರ್ಕಾರದ ವಕ್ತಾರ ಫೈಜುಲ್ಲಾ ಫರಾಕ್ ತಿಳಿಸಿದ್ದಾರೆ.