ಡೆನ್ವರ್, ಅಮೆರಿಕ: ಅಮೆರಿಕದ ಡೆನ್ವರ್‌ನ ವಸತಿ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ದಾಳಿಯಲ್ಲಿ ವ್ಯಕ್ತಿ ಮತ್ತು ಬಾಲಕನೊಬ್ಬ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಇಲಾಖೆ ಹೇಳಿದೆ. ಈ ಘಟನೆ ಕುರಿತು ಪೊಲೀಸ್ ಇಲಾಖೆಯ ವಕ್ತಾರ ಸೀನ್ ಟವೆಲ್ ಪ್ರತಿಕ್ರಿಯಿಸಿ, ಭಾನುವಾರ ಬೆಳಗ್ಗೆ ಗ್ರೀನ್ ವ್ಯಾಲಿ ರಾಂಚ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ ಒಬ್ಬ ವ್ಯಕ್ತಿ ಮತ್ತು ಬಾಲಕ ಸಾವನ್ನಪ್ಪಿದ್ದಾರೆ. ಇನ್ನುಳಿದವರ ಸ್ಥಿತಿ ಗಂಭೀರವಾಗಿದೆ. ಈ ಪ್ರಕರಣದಲ್ಲಿ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ. ದಾಳಿಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು.
ಇನ್ನು ಸಾವನ್ನಪ್ಪಿದವರ ಹೆಸರುಗಳು ಮತ್ತು ಸಾವು ಹೇಗೆ ಸಂಭವಿಸಿದೆ ಎಂಬುದು ಡೆನ್ವರ್ ವೈದ್ಯಕೀಯ ಪರೀಕ್ಷಕರು ವರದಿ ಬಿಡುಗಡೆ ಮಾಡುತ್ತಾರೆ ಎಂದು ಟವೆಲ್ ಹೇಳಿದರು. ಗಾಯಗೊಂಡ ನಾಲ್ವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಓದಿ: ಬೆಳಗಾವಿ: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಟೇಲರ್ ಪಲ್ಟಿ; ಮೂವರು ಮಹಿಳೆಯರು ಸಾವು
8 ಜನ ಸಾವು: ಇತ್ತಿಚೇಗೆ ಅಮೆರಿಕದಲ್ಲಿ ಮತ್ತೆ ಮಾರಣಹೋಮ ನಡೆದಿತ್ತು. ಜನವರಿ 22ರಂದು ಎರಡು ಮನೆಗಳಿಗೆ ನುಗ್ಗಿದ ಶಸ್ತ್ರಸಜ್ಜಿತ ದುಷ್ಕರ್ಮಿಯೊಬ್ಬ 8 ಜನರನ್ನು ಕೊಂದು ಹಾಕಿದ್ದ. ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು. ಆರೋಪಿ ಮತ್ತು ಮೃತಪಟ್ಟವರಿಗೆ ಈ ಮೊದಲು ಪರಿಚಯವಿತ್ತು ಎಂದು ಪೊಲೀಸರು ಶಂಕಿಸಿದ್ದರು. ಭಾನುವಾರ ಈ ದುಷ್ಕೃತ್ಯ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿತ್ತು. ಇಲಿನಾಯ್ಸ್ ರಾಜ್ಯದ ಚಿಕಾಗೋದಿಂದ 50 ಕಿ.ಮೀ ದೂರದಲ್ಲಿರುವ ಜೋಲಿಯೆಟ್‌ನಲ್ಲಿ ಈ ದುರಂತ ನಡೆದಿತ್ತು. 23 ವರ್ಷದ ಶಂಕಿತ ಆರೋಪಿ ಯುವಕನ ಫೋಟೋವನ್ನು ಪೊಲೀಸರು ಬಿಡುಗಡೆ ಮಾಡಿದ್ದರು.
ಶಂಕಿತ ರೋಮಿಯೋ ನಾನ್ಸ್‌ಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದರು. ಆರೋಪಿ ಅಪರಾಧ ನಡೆದ ಸ್ಥಳದ ಸಮೀಪ ವಾಸಿಸುತ್ತಿದ್ದ. 2023ರ ಶೂಟಿಂಗ್ ಪ್ರಕರಣದಲ್ಲಿ ಈತ ಜಾಮೀನಿನ ಮೇಲೆ ಹೊರಬಂದಿದ್ದ ಎಂದು ನ್ಯಾಯಾಲಯದ ದಾಖಲೆಗಳು ತಿಳಿಸುತ್ತಿವೆ. ನಾನ್ಸ್ ಅತ್ಯಂತ ಅಪಾಯಕಾರಿ ವ್ಯಕ್ತಿ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ತನಿಖೆಗೆ FBI ಸಹಾಯ: ಸ್ಥಳೀಯ ಅಧಿಕಾರಿಗಳ ತಂಡ ತನಿಖೆಗೆ ಎಫ್‌ಬಿಐ ಸಹಾಯ ತೆಗೆದುಕೊಂಡಿದೆ ಎಂದು ಇವಾನ್ಸ್ ಮಾಹಿತಿ ನೀಡಿದ್ದರು. ನಾನ್ಸ್ ಶೀಘ್ರದಲ್ಲೇ ಸಿಕ್ಕಿಬೀಳುತ್ತಾನೆ. ಆತನ ಬಳಿ ಶಸ್ತ್ರಾಸ್ತ್ರಗಳಿವೆ. ಆತನ ಉದ್ದೇಶಗಳು ಅಪಾಯಕಾರಿಯಾಗಿವೆ. ನ್ಯಾನ್ಸ್ ಮತ್ತವನ ವಾಹನದ ಬಗ್ಗೆ ಮಾಹಿತಿ ಇರುವವರು ಪೊಲೀಸರಿಗೆ ನೀಡುವಂತೆ ಪೊಲೀಸರು ಇದೇ ವೇಳೆ ಮನವಿ ಮಾಡಿದ್ದರು.