ಜೇರುಸೆಲಂ: ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧದಿಂದಾಗಿ ಗಾಜಾ ಪಟ್ಟಿಯಲ್ಲಿರುವ ಕನಿಷ್ಠ 17 ಸಾವಿರ ಮಕ್ಕಳು ಪೋಷಕರು ಅಥವಾ ಸಂಬಂಧಿಕರಿಂದ ಬೇರ್ಪಟ್ಟು ಅನಾಥರಾಗಿದ್ದಾರೆ ಎಂದು ವಿಶ್ವ ಸಂಸ್ಥೆ ಅಂದಾಜಿಸಿದೆ.
ಈ ಕುರಿತು ಮಾತನಾಡಿರುವ ವಿಶ್ವ ಸಂಸ್ಥೆಯ ಮಕ್ಕಳ ನಿಧಿ ಯುನಿಸೆಫ್ನ ಪ್ಯಾಲೆಸ್ಟೈನ್ ರಾಜ್ಯ ಸಂವಹನ ಮುಖ್ಯಸ್ಥ ಜೋನಾಥನ್ ಕ್ರಿಕ್ಸ್, ಗಾಜಾದಿಂದ 1.7 ಮಿಲಿಯನ್ ಜನರು ಸ್ಥಳಾಂತರಗೊಂಡಿದ್ದಾರೆ. ಈ ಪ್ರದೇಶದ ಒಟ್ಟಾರೆ ಜನಸಂಖ್ಯೆ ಸುಮಾರು 2.3 ಮಿಲಿಯನ್ ಇದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದ ವಾರ ಗಾಜಾಕ್ಕೆ ಭೇಟಿ ನೀಡಿದ್ದ ವಿಶ್ವಸಂಸ್ಥೆ ಅಧಿಕಾರಿಗಳು, 12 ಮಕ್ಕಳನ್ನು ಭೇಟಿಯಾಗಿದ್ದು, ಇದರಲ್ಲಿ 3 ಮಕ್ಕಳು ತಮ್ಮ ಪೋಷಕರನ್ನು ಯುದ್ಧದಿಂದ ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಅಲ್ಲದೇ ಪ್ರತಿಯೊಂದು ಅಂಕಿ ಅಂಶದ ಹಿಂದೆ ಮಕ್ಕಳ ಭಯಾನಕ ಹೊಸ ಸತ್ಯಾಂಶವು ಹೊರಬರುತ್ತಿದೆ ಎಂದಿದ್ದಾರೆ. ಉದಾಹರಣೆಗೆ 11 ವರ್ಷದ ರಝಾನ್ ಎಂಬ ಬಾಲಕಿ ತನ್ನ ಕುಟುಂಬದ ಎಲ್ಲಾ ಸದಸ್ಯರನ್ನು ಕಳೆದುಕೊಂಡಿದ್ದಾಳೆ. ಅಲ್ಲದೇ ಯುದ್ಧದ ದಾಳಿಯಿಂದ ಆಕೆ ಕಾಲು ಕೂಡ ತುಂಡರಿಸಿದೆ. ಈ ಆಘಾತದಿಂದ ಆಕೆ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಪುನರ್ವಸತಿ ಕೇಂದ್ರದಲ್ಲಿ ಯಾವುದೇ ಸೌಲಭ್ಯವಿಲ್ಲದೇ, ಅಂಗವೈಕಲ್ಯದಿಂದ ಜೀವನ ಎದುರಿಸುವುದನ್ನು ಕಲಿಯುತ್ತಿದ್ದಾರೆ.
ಆಹಾರ, ನೀರು, ಆಶ್ರಯತಾಣದ ಕೊರತೆಯಿಂದಾಗಿ ಮಕ್ಕಳನ್ನು ಆರೈಕೆ ಮಾಡುವುದು ಕೂಡ ಸವಾಲಾಗಿದೆ ಎಂದಿದ್ದಾರೆ.
ಪ್ಯಾಲೇಸ್ತೇನಿಯದ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಅವರಲ್ಲಿ ಹೆಚ್ಚಿನ ಮಟ್ಟದಲ್ಲಿ ಆತಂಕ, ಹಸಿವಿನ ಕೊರತೆ, ನಿದ್ರಾಹೀನತೆ, ಪ್ರತಿ ಬಾರಿ ಬಾಂಬ್ ದಾಳಿ ಆದಾಗ ವಿಚಲಿತರಾಗುತ್ತಿರುವುದು ಕಂಡು ಬರುತ್ತಿದೆ.
ಗಾಜಾದಲ್ಲಿರುವ ಸುಮಾರು 1 ಮಿಲಿಯನ್ ಮಕ್ಕಳಿಗೆ ಮಾನಸಿಕ ಆರೋಗ್ಯ ಮತ್ತು ಮನೋವೈಜ್ಞಾನಿಕ ಬೆಂಬಲ ಬೇಕಿದೆ ಎಂದು ಯುನಿಸೆಫ್ ಅಂದಾಜಿಸಿದೆ. ಈ ಮಕ್ಕಳಿಗೆ ಈ ರೀತಿ ಮಾನಸಿಕ ಮತ್ತು ಮನೋವೈಜ್ಞಾನಿಕ ಬೆಂಬಲ ನೀಡಲು ಇರುವ ಏಕೈಕ ಮಾರ್ಗ ಕದನ ವಿರಾಮವಾಗಿದೆ ಎಂದು ಮಾತನ್ನು ಮುಗಿಸಿದ್ದಾರೆ.
ಕದನ ವಿರಾಮದ ಬಗ್ಗೆ ಮೂಡದ ಒಮ್ಮತ; ಯುದ್ಧದ ಕದನ ವಿರಾಮ ಕುರಿತು ಪ್ಯಾರಿಸ್, ಕೈರೋ ಮತ್ತು ದೋಹಾ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಹಿರಿಯ ಹಮಾಸ್ ನಾಯಕರು ಚರ್ಚೆ ನಡೆಸಿದ್ದಾರೆ. ಆದರೆ ಭಿನ್ನಾಭಿಪ್ರಾಯದಿಂದ ಕದನ ವಿರಾಮದ ಕುರಿತ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಹಮಾಸ್ ಹಿರಿಯ ನಾಯಕ ಇಸ್ಮಾಯಿಲ್ ಹನಿಯೆ ಮತ್ತು ಯಾಹ್ಯಾ ಸಿನ್ವಾರ್ ನಡುವೆ ಆಂತರಿಕ ಭಿನ್ನಾಭಿಪ್ರಾಯಗಳು ಉಂಟಾಗಿವೆ ಎಂಬ ಮಾಹಿತಿಯನ್ನು ಕತಾರ್ ಮಧ್ಯವರ್ತಿಗಳಿಂದ ಇಸ್ರೇಲ್ ರಕ್ಷಣಾ ಸಚಿವರು ಮಾಹಿತಿ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ಇಸ್ರೇಲ್ - ಹಮಾಸ್ ಸಂಘರ್ಷ: ಈಜಿಪ್ಟ್ನಲ್ಲಿ ಶಾಂತಿ ಮಾತುಕತೆ ಆರಂಭಿಸಿದ ಹಮಾಸ್