ಹೆನಾನ್(ಚೀನಾ): ಚೀನಾದ ಹೆನಾನ್ ಪ್ರಾಂತ್ಯದ ವಸತಿ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 13 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ ಚಿಕ್ಕ ಮಕ್ಕಳ ಈ ವಸತಿ ಶಾಲೆಯಲ್ಲಿ ಅವಘಡ ಸಂಭವಿಸಿದೆ. ಈ ಶಾಲೆಯು ಹೆನಾನ್ ಪ್ರಾಂತ್ಯದ ಯಂಶಾನ್‌ಪು ಗ್ರಾಮದಲ್ಲಿದೆ.
ಇದು ಖಾಸಗಿ ಶಾಲೆಯಾಗಿದ್ದು, ಈ ಶಾಲೆಯಲ್ಲಿ ನರ್ಸರಿ ಮತ್ತು ಪ್ರಾಥಮಿಕ ತರಗತಿಗಳ ಮಕ್ಕಳು ಓದುತ್ತಿದ್ದರು. ಈ ಪ್ರಕರಣದಲ್ಲಿ ನಾನ್ಯಾಂಗ್ ನಗರದ ಬಳಿ ಇರುವ ಶಾಲೆಯ ಮ್ಯಾನೇಜರ್ನನ್ನು ಬಂಧಿಸಲಾಗಿದೆ. ಅಪಘಾತದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬೆಂಕಿ ಅವಘಡಕ್ಕೆ ಕಾರಣಗಳು ತಿಳಿದುಬಂದಿಲ್ಲ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಸುದ್ದಿ ತಿಳಿದಾಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದೆ. ಬೆಂಕಿಯನ್ನು ಹತೋಟಿಗೆ ತರಲಾಗಿದ್ದು, ಅಗ್ನಿಶಾಮಕ ದಳದವರು ಬೆಂಕಿ ಕಾಣಿಸಿಕೊಂಡ ಒಂದು ಗಂಟೆಯೊಳಗೆ ನಂದಿಸಿದ್ದಾರೆ. ಹೆನಾನ್‌ನ ಯಂಶಾನ್‌ಪು ಗ್ರಾಮದ ಯಿಂಗ್‌ಕೈ ಶಾಲೆಯಲ್ಲಿ ರಾತ್ರಿ 11 ಗಂಟೆಗೆ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದೇವೆ ಎಂದು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದೆ. ಈ ಘಟನೆಯ ವಿಡಿಯೋ ದೃಶ್ಯಾವಳಿಗಳು ಸಹ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗ್ತಿವೆ. ಈ ವಿಡಿಯೋ ನೋಡಿದ ನೆಟ್ಟಿಗರು ಹೌಹಾರಿದ್ದಾರೆ.
ಈ ಹಿಂದೆ ಸಂಭವಿದ್ದ ಬೆಂಕಿ ಅವಘಡಗಳು: ಚೀನಾದಲ್ಲಿ ಬೆಂಕಿ ಅವಘಡಗಳು ನಿರ್ಲಕ್ಷ್ಯದಿಂದ ಸಂಭವಿಸುತ್ತಲೇ ಇರುತ್ತವೆ. ಸುರಕ್ಷತಾ ಮಾನದಂಡಗಳ ಅನುಷ್ಠಾನದಲ್ಲಿನ ಲೋಪವು ಇಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿವೆ. ಇದರಿಂದಾಗಿ ಬೆಂಕಿಯ ಘಟನೆಗಳು ಸಂಭವಿಸುತ್ತಲೇ ಇರುತ್ತವೆ. ನವೆಂಬರ್‌ನಲ್ಲಿ ಶಾಂಕ್ಸಿ ಪ್ರಾಂತ್ಯದ ಲುಲಿಯಾಂಗ್ ನಗರದಲ್ಲಿನ ಕಚೇರಿ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಈ ಘಟನೆಯಲ್ಲಿ 26 ಮಂದಿ ಸಾವನ್ನಪ್ಪಿದ್ದರು. ಕಳೆದ ಏಪ್ರಿಲ್‌ನಲ್ಲೂ ಭಾರಿ ಅವಘಡ ಸಂಭವಿಸಿತ್ತು. ಬೀಜಿಂಗ್‌ನ ಆಸ್ಪತ್ರೆಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 29 ಮಂದಿ ಸಾವನ್ನಪ್ಪಿದ್ದರು.
ಓದಿ: ಮಹಾರಾಷ್ಟ್ರ: ಪ್ರತ್ಯೇಕ ಬೆಂಕಿ ಅವಘಡ, ಮಕ್ಕಳು ಸೇರಿ ನಾಲ್ವರು ಸಾವು
6 ಮಂದಿ ಸಜೀವ ದಹನ: ದೆಹಲಿಯ ಪಿತಾಂಪುರ ಪ್ರದೇಶದ ಮನೆಯೊಂದರಲ್ಲಿ ಗುರುವಾರ ಸಂಜೆ ಬೆಂಕಿ ಅನಾಹುತ ಸಂಭವಿಸಿ, ಎರಡು ಕುಟುಂಬಗಳ ಆರು ಮಂದಿ ಸಜೀವ ದಹನವಾಗಿದ್ದರು. ಮೃತರಲ್ಲಿ ನಾಲ್ವರು ಮಹಿಳೆಯರಿದ್ದಾರೆ. ಬಹುಮಹಡಿ ಕಟ್ಟಡದಲ್ಲಿ ರಾತ್ರಿ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ದೆಹಲಿಯಲ್ಲಿ ಭಾರಿ ಅಗ್ನಿ ಅವಘಡ: 6 ಮಂದಿ ಸಜೀವ ದಹನ)