ರೋಮ್, ಇಟಲಿ: ಇಟಲಿಯ ಕರಾವಳಿಯಲ್ಲಿ ಸೋಮವಾರ ಹಾಯಿ ದೋಣಿಯೊಂದು ಅಪಪಾಯಕ್ಕೆ ಸಿಲುಕಿದೆ. ಕನಿಷ್ಠ 11 ವಲಸಿಗರು ಈ ದುರಂತದಲ್ಲಿ ಮೃತಪಟ್ಟಿದ್ದಾರೆ. ಇನ್ನೂ 66 ಮಂದಿ ನಾಪತ್ತೆಯಾಗಿದ್ದಾರೆ ಎಂದು ಇಟಾಲಿಯನ್ ಅಧಿಕಾರಿಗಳು ತಿಳಿಸಿದ್ದಾರೆ.
ಇಟಲಿಯ ಕರಾವಳಿಯ ಬಳಿ ಎರಡು ವಲಸಿಗ ದೋಣಿಗಳು ಸಮಸ್ಯೆ ಸಿಲುಕಿವೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸೋಮವಾರ ಮೆಡಿಟರೇನಿಯನ್‌ನಲ್ಲಿ ಇಟಲಿಯ ಕರಾವಳಿ ಸಿಬ್ಬಂದಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ದಕ್ಷಿಣ ಇಟಲಿಯ ಕ್ಯಾಲಬ್ರಿಯಾದ ಕರಾವಳಿಯಿಂದ ಸುಮಾರು 120 ಮೈಲಿಗಳು ದೂರದಲ್ಲಿ ಹಾಯಿದೋಣಿಯೊಂದು ಸಂಕಷ್ಟಕ್ಕೆ ಸಿಲುಕಿರುವುದು ಗೊತ್ತಾಗಿದೆ. ಆ ಪ್ರದೇಶದಲ್ಲಿ ವ್ಯಾಪಾರಿ ಹಡಗು ಈ ಬಗ್ಗೆ ಮಾಹಿತಿ ಪಡೆದುಕೊಂಡಿತ್ತು. ಆ ಬಳಿಕ ಸಂಕಷ್ಟದಲ್ಲಿ ಸಿಲುಕಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ವ್ಯಾಪಾರಿ ಹಡಗು 12 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಇಟಾಲಿಯನ್ ಕರಾವಳಿ ರಕ್ಷಣಾ ಹಡಗು, ಅಪಘಾತದ ಸ್ಥಳಕ್ಕೆ ಬರುವವರೆಗೂ ಅವರಿಗೆ ಸಹಾಯ ಮಾಡಿತು.
ಅಪಘಾತಕ್ಕೀಡಾಗಿ ಬದುಕುಳಿದವರಿಗಾಗಿ ಹುಡುಕಾಟ ಮುಂದುವರೆಸಿದೆ ಎಂದು ಕೋಸ್ಟ್ ಗಾರ್ಡ್ ಹೇಳಿಕೆಯಲ್ಲಿ ತಿಳಿಸಿದೆ. ಕೋಸ್ಟ್ ಗಾರ್ಡ್ ಎರಡು ಇಟಾಲಿಯನ್ ಗಸ್ತು ದೋಣಿಗಳು ಮತ್ತು ATR42 ವಿಮಾನವು ಪ್ರಸ್ತುತ ಹುಡುಕಾಟದಲ್ಲಿ ನಿರತವಾಗಿದೆ. ವೈದ್ಯಕೀಯ ಸಿಬ್ಬಂದಿ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳ ಪ್ರಕಾರ ನಾಪತ್ತೆಯಾಗಿರುವ 66 ಜನರಲ್ಲಿ 26 ಅಪ್ರಾಪ್ತರು ಎಂದು ತಿಳಿದು ಬಂದಿದೆ.
ಬದುಕುಳಿದವರ ಹೇಳಿಕೆಯ ಪ್ರಕಾರ, ದೋಣಿ ಕಳೆದ ವಾರ ಟರ್ಕಿಯಿಂದ ಇರಾಕ್, ಸಿರಿಯಾ, ಇರಾನ್ ಮತ್ತು ಅಫ್ಘಾನಿಸ್ತಾನದ ವಲಸಿಗರು ಮತ್ತು ನಿರಾಶ್ರಿತರನ್ನು ಹೊತ್ತೊಯ್ಯುತ್ತಿತ್ತು .ಇಟಾಲಿಯನ್ ಪ್ರಾಸಿಕ್ಯೂಟರ್‌ಗಳು ನೌಕಾಘಾತದ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ, ಆರ್ಥಿಕ ವಲಸಿಗರು ಮತ್ತು ಮೆಡಿಟರೇನಿಯನ್ ಮೂಲಕ ಯುರೋಪ್ ತಲುಪಲು ಪ್ರಯತ್ನಿಸುತ್ತಿರುವ ನಿರಾಶ್ರಿತರು ಒಳಗೊಂಡಿರುವ ಇಂತಹ ದುರಂತಗಳು ಸಂಭವಿಸುತ್ತಲೇ ಇವೆ,
ಈ ಮೊದಲು ಜರ್ಮನ್ ರೆಸ್ಕ್ಯೂ ಟೀಮ್ 10 ವಲಸಿಗರು ಸತ್ತಿರುವುದನ್ನು ಕಂಡುಹಿಡಿದಿತ್ತು. ಇಟಲಿಯ ದಕ್ಷಿಣದ ದ್ವೀಪವಾದ ಲ್ಯಾಂಪೆಡುಸಾದಿಂದ ದೂರದಲ್ಲಿರುವ ಮಾಲ್ಟಾದ ನೀರಿನಲ್ಲಿ ತೊಂದರೆಯಲ್ಲಿದ್ದ ದೋಣಿಯಲ್ಲಿ ಇತರ 51 ಜನರನ್ನು ರಕ್ಷಿಸುವಲ್ಲಿ ಈ ತಂಡ ಯಶಸ್ವಿ ಕೂಡಾ ಆಗಿತ್ತು. ಬದುಕುಳಿದವರು ಮುಖ್ಯವಾಗಿ ಬಾಂಗ್ಲಾದೇಶ, ಪಾಕಿಸ್ತಾನ, ಈಜಿಪ್ಟ್ ಮತ್ತು ಸಿರಿಯಾದಿಂದ ಬಂದವರಾಗಿದ್ದಾರೆ.
ಮೆಡಿಟರೇನಿಯನ್ ಸಮುದ್ರದ ಮೂಲಕ ದೋಣಿಯಲ್ಲಿ ಪ್ರಯಾಣಿಸುವ ವಲಸಿಗರು ಆಗಾಗ ಇಂತಹ ಸಂಕಷ್ಟಗಳಿಗೆ ಸಿಲುಕುತ್ತಿರುತ್ತಾರೆ. ಸುರಕ್ಷಿತವಲ್ಲದ ಹಡಗುಗಳಿಂದ ಅಪಾಯಕಾರಿ ಪರಿಸ್ಥಿತಿಗಳಿಂದಾಗಿ ಹೆಚ್ಚಿನ ಸಾವು ನೋವುಗಳಿಗೆ ಕಾರಣವಾಗುತ್ತಿವೆ. ಈ ವರ್ಷ ಇಲ್ಲಿಯವರೆಗೆ ಮೆಡಿಟರೇನಿಯನ್ ದಾಟಲು ಹೋಗಿ ಸುಮಾರು ಒಂದು ಸಾವಿರ ಜನರು ಸಾವನ್ನಪ್ಪಿದ್ದಾರೆ ಅಥವಾ ಕಣ್ಮರೆಯಾಗಿದ್ದಾರೆ ಎಂದು ಯುನೈಟೆಡ್ ನೇಷನ್ಸ್ ಇಂಟರ್ನ್ಯಾಷನಲ್ ಆರ್ಗನೈಸೇಶನ್ ಅಂದಾಜಿಸಿದೆ.