ಕೊಲಂಬೊ, ಶ್ರೀಲಂಕಾ: ಕಳೆದ 24 ಗಂಟೆಗಳಲ್ಲಿ ಶ್ರೀಲಂಕಾದಾದ್ಯಂತ ಭಾರಿ ಮಳೆ ಸುರಿಯುತ್ತಿದೆ. ಬಲವಾದ ಗಾಳಿ ಬೀಸುತ್ತಿದ್ದು, ಬಿರುಗಾಳಿ ಹೊಡೆತಕ್ಕೆ ಹತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಐವರು ನಾಪತ್ತೆಯಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ (ಡಿಎಂಸಿ) ತಿಳಿಸಿದೆ.
ಭಾನುವಾರದ ಮುಂಜಾನೆಯಿಂದ 150 ಮಿ.ಮೀ.ಗೂ ಹೆಚ್ಚು ಮಳೆ ಆಗಿದೆ. ಭಾರಿ ಮಳೆ ಸುರಿದಿರುವುದರಿಂದ ಹೆಚ್ಚಿನ ಸಾವುಗಳು ರಾಜಧಾನಿ ಕೊಲಂಬೊದಿಂದ ವರದಿಯಾಗಿವೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆಸ್ಪತ್ರೆಗಳಲ್ಲಿ ಯಾವುದೇ ತುರ್ತು ಪರಿಸ್ಥಿತಿಗೆ ಜಾಗರೂಕರಾಗಿರಲು ಮತ್ತು ಸಿದ್ಧರಾಗಿರಲು ಪ್ರಾಂತ್ಯಗಳಲ್ಲಿನ ಎಲ್ಲ ಆರೋಗ್ಯ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಪ್ರವಾಹ ಉಲ್ಬಣಗೊಳ್ಳುತ್ತಿದ್ದಂತೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಹಳ್ಳಿ ಪ್ರದೇಶಗಳಿಂದ ದೊಡ್ಡ ಆಸ್ಪತ್ರೆಗಳಿಗೆ ಏರ್‌ಲಿಫ್ಟ್ ಮಾಡಲು ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಮುಂದಿನ 48 ಗಂಟೆಗಳಲ್ಲಿ ದೇಶದಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಭಾನುವಾರ ಎಚ್ಚರಿಕೆ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಡಿಎಂಸಿ ತಿಳಿಸಿದೆ. ಸಾರ್ವಜನಿಕರು ಮನೆಯಲ್ಲೇ ಇರುವಂತೆ ಹಾಗೂ ಜಲಾವೃತ ಪ್ರದೇಶಗಳಿಗೆ ತೆರಳದಂತೆ ಮನವಿ ಮಾಡಲಾಗಿದೆ.
ಹೆಚ್ಚಿನ ಮಳೆಯ ನಿರೀಕ್ಷೆಯ ಕಾರಣ ಸೋಮವಾರ ಎಲ್ಲಾ ಶಾಲೆಗಳನ್ನು ಮುಚ್ಚಲಾಗುವುದು ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.
ಇದನ್ನು ಓದಿ: ಬೆಂಗಳೂರಲ್ಲಿ ಭಾರೀ ಮಳೆ, ಮರಗಳು ಧರಾಶಾಹಿ: ನಮ್ಮ ಮೆಟ್ರೋ ಸೇವೆ ತಾತ್ಕಾಲಿಕ ಸ್ಥಗಿತ, ಟ್ರಾಫಿಕ್ ಜಾಮ್ - Bengaluru Rain