ಹೈದರಾಬಾದ್: ಮಹಿಳೆಯರು ತಮ್ಮ ತ್ವಚೆ ಸೌಂದರ್ಯಯುತವಾಗಿ, ಹೊಳೆಯುವಂತೆ ಕಾಣಬೇಕು ಎಂದೇ ಇಚ್ಛಿಸುತ್ತಾರೆ. ಆದರೆ, ಕೆಲವರಲ್ಲಿ ಬಲು ಬೇಗ ನೆರಿಗೆಗಳು ಮೂಡಲಾರಂಭಿಸುತ್ತವೆ. ಇದನ್ನು ಮುಚ್ಚಲು ಕೆಲವೊಮ್ಮೆ ಮೇಕಪ್ ಮೊರೆ ಹೋದರೆ, ಮತ್ತೆ ಕೆಲವು ಬಾರಿ ಹಾಗೇ ಬಿಟ್ಟು ಬಿಡುತ್ತಾರೆ. ಇಂತಹ ಸಮಸ್ಯೆಗಳನ್ನು ತಪ್ಪಿಸಲು ಕೆಲವು ಸರಳ ಪರಿಹಾರ ಕ್ರಮ ಇದೆ. ಮುಖದಲ್ಲಿ ಉಂಟಾಗುವ ಈ ನೆರಿಗೆಯನ್ನು ತಡೆಗಟ್ಟಲು ಇಲ್ಲಿದೆ ಟಿಪ್ಸ್
ಸತ್ತ ಚರ್ಮ ತೆಗೆಯಿರಿ: ಎಕ್ಸ್ಫೊಲಿಯೇಶ್ ಮೂಲಕ ತ್ವಚೆಯ ಸತ್ತ ಕೋಶ ತೆಗೆದು ಹಾಕುತ್ತದೆ. ಓಟ್ಸ್ ಮತ್ತು ಹಾಲನ್ನು ಪೇಸ್ಟ್ ಮಾಡಿ, ಮುಖಕ್ಕೆ ಹಚ್ಚಿ. ಬಳಿಕ 10 ನಿಮಿಷ ಮಸಾಜ್ ಮಾಡಿ. ಇದಕ್ಕೆ ಹಬೆ ತೆಗೆದುಕೊಂಡರೆ, ತ್ವಚೆಯಲ್ಲಿರುವ ಸತ್ತ ಕೋಶವನ್ನು ತೆಗೆಯಬಹುದು ಎನ್ನುತ್ತಾರೆ ತಜ್ಞರು.
ಮಸಾಜ್: ನಿತ್ಯ ಮುಖಕ್ಕೆ ಕೊಬ್ಬರಿ ಎಣ್ಣೆ, ಆಲಿವ್ ಎಣ್ಣೆ ಅಥವಾ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿ. ಈ ರೀತಿ ಮಾಡುವುದರಿಂದ ಸುಕ್ಕುಗಳಿಂದ ಚರ್ಮವನ್ನು ರಕ್ಷಣೆ ಮಾಡಬಹುದು.
ಮೊಟ್ಟೆ ಬಿಳಿ ಭಾಗದ ಮಾಸ್ಕ್: ಅನೇಕ ಮಂದಿ ಸುಕ್ಕು ತಡೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಕ್ರೀಮ್ಗಳ ಬಳಕೆ ಮಾಡುತ್ತಾರೆ. ಇದರ ಬದಲು ಮೊಟ್ಟೆಯ ಬಿಳಿ ಭಾಗವನ್ನು ಮಾಸ್ಕ್ ರೀತಿ ಹಚ್ಚುವುದರಿಂದ ಉತ್ತಮ ಪ್ರಯೋಜನ ಪಡೆಯಬಹುದು ಎನ್ನುತ್ತಾರೆ ತಜ್ಞರು. ಮೊಟ್ಟೆ ಬಿಳಿ ಭಾಗವನ್ನು ಚೆನ್ನಾಗಿ ಕಲಕಿ ಅದನ್ನು ಮುಖಕ್ಕೆ ಹಚ್ಚಿ, 15 ನಿಮಿಷದ ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಆಲೋವೆರಾ ಜೆಲ್ : ಲೊಳೆ ರಸದಲ್ಲಿ ವಿಟಮಿನ್ ಮತ್ತು ಮಾಶ್ಚರೈಸರ್ ಅಂಶಗಳಿದ್ದು, ತ್ವಚೆಗೆ ಉತ್ತಮವಾಗಿದೆ. ನಿತ್ಯ ಮುಖಕ್ಕೆ ಲೊಳೆರಸವನ್ನು ಹಚ್ಚುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು. 2019ರಲ್ಲಿ ಜರ್ನಲ್ ಡರ್ಮಾಟಾಲಾಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ದಿನಕ್ಕೆರಡು ಬಾರಿ ಆಲೋವೆರಾ ಜೆಲ್ ಹಚ್ಚುವುದರಿಂದ ಮುಖ ಮತ್ತು ಕುತ್ತಿಗೆ ಸುಕ್ಕು ತಡೆಯಬಹುದಾಗಿದೆ. ಈ ಅಧ್ಯಯನದಲ್ಲಿ ಕೊರಿಯಾ ಯುನಿವರ್ಸಿಟಿ ಮೆಡಿಕಲ್ ಕಾಲೇಜ್ನ ಡಾ ಡಾನ್ ಹೈನ್ ಕಿಮ್ ಕೂಡ ಭಾಗಿಯಾಗಿದ್ದಾರೆ. ಅವರು ಕೂಡ ಇದನ್ನೇ ಪ್ರತಿಪಾದಿಸಿದ್ದಾರೆ.
ಮುಖದ ವ್ಯಾಯಾಮ: ಮುಖ್ಯದ ವ್ಯಾಯಾಮ ಮಾಡುವುದರಿಂದ ಮುಖದ ಸ್ನಾಯುಗಳು ಬಿಗಿಯಾಗುತ್ತದೆ. ಇದರಿಂದ ಉತ್ತಮ ರಕ್ತ ಸಂಚಾರ ಕೂಡ ಆಗಿ, ಮುಖ ಯೌವನಯುತವಾಗಿ ಕಾಣುತ್ತದೆ. ಈ ಹಿನ್ನೆಲೆ ನಿತ್ಯ ಮುಖದ ವ್ಯಾಯಾಮ ಅಭ್ಯಾಸ ಮಾಡುವುದು ಸಹಾಯಕವಾಗಲಿದೆ.
ಇತರ ಸಲಹೆ:
- ಪ್ರತಿನಿತ್ಯ ಮುಖವನ್ನು ಸೌತೆಕಾಯಿಯಿಂದ ಮಸಾಜ್ ಮಾಡಿ
- ಮುಖಕ್ಕೆ ಮೊಸರನ್ನು ಹಚ್ಚಿ, 15 ನಿಮಿಷದ ಬಳಿಕ ತೊಳೆಯಿರಿ
- ಗ್ರೀನ್ ಟೀ ಬ್ಯಾಗ್ನಿಂದ ಮುಖವನ್ನು ಮಸಾಜ್ ಮಾಡಿ
- ಪ್ರತಿನಿತ್ಯ ದೇಹಕ್ಕೆ ಅನುಗುಣವಾಗಿ ಹೆಚ್ಚು ನೀರು ಸೇವನೆ, ತಾಜಾ ಹಣ್ಣು ಮತ್ತು ತರಕಾರಿ ಸೇವಿಸುವುದು ಅತ್ಯಗತ್ಯವಾಗಿದೆ.
ವಿಶೇಷ ಸೂಚನೆ: ಇಲ್ಲಿ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೃತ್ತಿಪರರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: ನಿಮ್ಮ ಆಹಾರದಲ್ಲಿ ಬ್ಲ್ಯಾಕ್ ಸಾಲ್ಟ್ ಉಪಯೋಗಿಸುತ್ತೀರಾ?: ಅದರ ಪ್ರಯೋಜನಗಳೇನೆಂಬುದು ನಿಮಗೆ ಗೊತ್ತೇ